ಡಾ. ಜಸ್ಸಿ ಗಿಫ್ಟ್ ಅವರಿಂದ ಕೊರೋನ ಕಾಲದ ಗಿಫ್ಟ್!

Update: 2020-05-17 11:03 GMT

ಜಸ್ಸಿ ಗಿಫ್ಟ್ ಸಿನೆಮಾ ಕ್ಷೇತ್ರಕ್ಕೆ ಬಂದಾಗ ಅವರ ಸಂಗೀತ, ಕಂಠ, ಹಾಡುವ ಶೈಲಿಯ ಜತೆಗೆ ಗಮನ ಸೆಳೆದ ಮತ್ತೊಂದು ಪ್ರಮುಖ ಅಂಶ ಅವರ ಹೆಸರು! ಆದರೆ ಮಲಯಾಳಂ ಸಿನೆಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಸ್ಸಿ ದಕ್ಷಿಣ ಭಾರತದಾದ್ಯಂತ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ವಿಶೇಷ. ಮೂರು ವರ್ಷ ದಾಟಿದರೆ ಚಿತ್ರರಂಗದಲ್ಲಿ ಎರಡು ದಶಕ ಪೂರ್ಣಗೊಳಿಸುತ್ತಿರುವ ಇವರು ಬೇರೆ ಸಂಗೀತ ನಿರ್ದೇಶಕರಿಗೆ ಹಾಡಿದ ಗೀತೆಗಳು ಕೂಡ ಸೂಪರ್ ಹಿಟ್ ಆದ ಉದಾಹರಣೆಗಳಿವೆ. ಹಾಗಾಗಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಂದ ಕಳೆದ ಒಂದೂವರೆ ದಶಕದ ತಲಾ ಹತ್ತು ಹಿಟ್ ಹಾಡುಗಳನ್ನು ಆಯ್ಕೆ ಮಾಡಿದರೂ ಸಹ ಪ್ರತಿಯೊಂದು ಭಾಷೆಯಲ್ಲಿಯೂ ಮಿನಿಮಮ್ ಒಂದು ಹಾಡು ಜಸ್ಸಿ ಗಿಫ್ಟ್ ಅವರದ್ದಾಗಿರುತ್ತದೆ ಎಂದು ಧೈರ್ಯದಿಂದ ಹೇಳಬಹುದು. ಇದೀಗ ಅವರು ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾತ್ರವಲ್ಲ, ಕೊರೋನ ಬಗ್ಗೆ ಒಂದು ಹಾಡನ್ನು ಕೂಡ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ‘ವಾರ್ತಾಭಾರತಿ’ಗೆ ನೀಡಿರುವ ವಿಶೇಷ ಮಾತುಕತೆ ಇದು.

ಡಾಕ್ಟರೇಟ್ ದೊರಕಿರುವುದಕ್ಕೆ ಅಭಿನಂದನೆಗಳು. ಆ ಬಗ್ಗೆ ಹೇಳಿ.

ವಂದನೆಗಳು. ಮೊದಲನೆಯದಾಗಿ ಇದು ಸಂಗೀತ ಕ್ಷೇತ್ರದ ಸಾಧನೆಗೆ ದೊರಕಿರುವಂಥ ಗೌರವ ಡಾಕ್ಟರೇಟ್ ಅಲ್ಲ. ಕಣ್ಣೂರು ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿ ಸಂಶೋಧನೆ ನಡೆಸಿ ಪಡೆದಂಥ ಡಾಕ್ಟರೇಟ್ ಇದು. ನಾನು ಸಿನೆಮಾರಂಗಕ್ಕೆ ಬರುವ ಮೊದಲೇ ಎಂಫಿಲ್ ಮಾಡಿದ್ದೆ. ‘ದಿ ಫಿಲಾಸಫಿ ಆಫ್ ಹಾರ್ಮನಿ ಆ್ಯಂಡ್ ಬ್ಲಿಸ್ ವಿತ್ ರೆಫರೆನ್ಸ್ ಟು ಅದ್ವೈತ ಆ್ಯಂಡ್ ಬುದ್ಧಿಸಮ್’ ಎನ್ನುವ ಸಬ್ಜೆಕ್ಟ್ ನಲ್ಲಿ ನನ್ನ ಅಧ್ಯಯನ ನಡೆದಿತ್ತು. ನನಗೆ ಭಾರತೀಯ ತತ್ವಶಾಸ್ತ್ರದ ಮೇಲೆ ಆರಂಭದಿಂದಲೇ ಆಸಕ್ತಿ ಇತ್ತು. ಅದು ಕಲಿತಷ್ಟು ಇನ್ನಷ್ಟು, ಮತ್ತಷ್ಟು ತಮ್ಮ ಅಗಾಧ ವ್ಯಾಪ್ತಿಯನ್ನು ತೋರಿಸುತ್ತಾ ಹೋಗುತ್ತದೆ. ಹಾಗಾಗಿ ಹಠಕ್ಕೆ ಬಿದ್ದು ನಡೆಸಿದ ಅಧ್ಯಯನವಾಗಿತ್ತು ಅದು. ಅದ್ವೈತ ಮತ್ತು ಬುದ್ಧಿಸಮ್ ಎರಡರಲ್ಲಿಯೂ ಸಾಮರಸ್ಯದ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದಾರೆ ಎನ್ನುವುದನ್ನು ನಾನು ಸಂಗ್ರಹಿಸಿ ನೀಡಿದ್ದೇನೆ. ಸಾಮರಸ್ಯ ಸದಾಕಾಲದ ಸಮಾಜದ ಅವಶ್ಯಕತೆಯೂ ಹೌದು.

ಡಾಕ್ಟರೇಟ್ ನನಗೆ ಕಳೆದ ವರ್ಷಾಂತ್ಯದಲ್ಲೇ ಲಭಿಸಿದೆ. ಆದರೆ ಅದನ್ನು ನಾನು ನನ್ನ ಹೆಸರಿನೊಂದಿಗೆ ಸೇರಿಸಿ ಪ್ರಚಾರ ನಡೆಸುತ್ತಿಲ್ಲ ಎನ್ನುವುದು ಮಾತ್ರ ಸತ್ಯ!

ನೀವು ಇರುವ ಕಡೆ ಕೊರೋನ ಪರಿಸ್ಥಿತಿ ಹೇಗಿದೆ?

ನಾನು ಈಗ ತಿರುವನಂತಪುರದಲ್ಲಿರುವ ನನ್ನ ಮನೆಯಲ್ಲಿದ್ದೇನೆ. ಕೇರಳದಲ್ಲಿ ಕೊರೋನ ವಿರುದ್ಧದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಮಗೂ ಗೊತ್ತಿರುತ್ತದೆ. ಆದರೆ ಅಷ್ಟೇ ಶಿಸ್ತುಬದ್ಧವಾಗಿ ಮನೆಯೊಳಗೆ ಇರಬೇಕಾಗಿತ್ತು. ಈಗ ಎರಡು ದಿನಗಳಿಂದ ಇಲ್ಲಿನ ಸ್ಥಳೀಯರು ಬೀದಿಗೆ ಇಳಿಯಲು ಆರಂಭಿಸಿದ್ದಾರಷ್ಟೇ. ನನಗೆ ಮನೆಯಲ್ಲಿ ಕುಳಿತುಕೊಳ್ಳುವುದು ಕಷ್ಟವೇನೂ ಅಲ್ಲ. ಯಾಕೆಂದರೆ ನಾನು ಹೆಚ್ಚಾಗಿ ಸಂಗೀತೋಪಕರಣಗಳ ಜತೆಗೆ ಕಳೆಯಲು ಇಷ್ಟಪಡುತ್ತೇನೆ ಮಾತ್ರವಲ್ಲ, ಅಭ್ಯಾಸವೂ ಇದೆ. ಹಿರಿಯ ಸಂಗೀತಜ್ಞರಿಂದ ವೀಡಿಯೊ ಕಾಲ್ ಮೂಲಕ ನಾನೇ ಪಿಯಾನೊ ಮೊದಲಾದವುಗಳಲ್ಲಿ ಹೆಚ್ಚಿನ ಕಲಿಕೆಗೆ ಗಮನ ನೀಡುತ್ತಿದ್ದೇನೆ. ಚಂದ್ರಬಾಬು ಎನ್ನುವ ಶಿಕ್ಷಕರಿಂದ ಕಲಿಯುತ್ತಿದ್ದೇನೆ. ಒಂದು ರೀತಿಯಲ್ಲಿ ಇದು ನನಗೆ ಹೆಚ್ಚಿನ ಸಂಗೀತಾಭ್ಯಾಸಕ್ಕೆ ಸಿಕ್ಕ ಅವಕಾಶದ ಹಾಗಿದೆ. ಆದರೆ ಎಲ್ಲರ ಪರಿಸ್ಥಿತಿ ಇಷ್ಟು ಸುಲಭವಾಗಿಲ್ಲ ಎಂದು ಗೊತ್ತು. ಬೆಂಗಳೂರಲ್ಲಿ ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿಯಲ್ಲಿ ನನ್ನ ಮನೆ. ಅಲ್ಲಿಗೆ ಬರಬೇಕಾದರೆ ವಿಮಾನ ಎಲ್ಲ ಆರಂಭವಾದ ಮೇಲೆ ಮಾತ್ರ ಸಾಧ್ಯ.

ಕೋವಿಡ್ ಬಗ್ಗೆ ಕೇರಳದಲ್ಲಿದ್ದು ಕನ್ನಡದ ಹಾಡು ಮಾಡಲು ಕಾರಣವೇನು?

ಕೊರೋನ ಬಗ್ಗೆ ಈಗಾಗಲೇ ಮಲಯಾಳಂನಲ್ಲಿ ನಾನು ಒಂದು ಹಾಡು ಮಾಡಿದ್ದೆ. ಅದೇ ಸಂದರ್ಭದಲ್ಲಿ ಬೆಂಗಳೂರಿನ ಪರಿಸ್ಥಿತಿಯ ಬಗ್ಗೆ ನಿತ್ಯವೂ ತಿಳಿಯುತ್ತಿದ್ದ ಕಾರಣ, ಕನ್ನಡದಲ್ಲಿಯೂ ಒಂದು ಜಾಗೃತಿ ಗೀತೆ ಮಾಡೋಣ ಅನಿಸಿತು. ಅದರ ರಚನೆಯಂತೂ ನೀವೇ ಮಾಡಿಕೊಟ್ಟಿದ್ದೀರಿ. ಇನ್ನು ಅದರಲ್ಲಿನ ಕಲಾವಿದರ ಬಗ್ಗೆ ಹೇಳಲೇಬೇಕು. ಎಲ್ಲ ಕೆಲಸಗಳನ್ನು ಕಡಿಮೆ ಕೆಲಸಗಾರರೊಂದಿಗೆ ಆರಂಭಿಸಬಹುದು. ಆದರೆ ಸಿನೆಮಾ ಕೆಲಸ ಶುರುವಾಗುವಾಗಲೇ ಬೇರೆ ಬೇರೆ ಊರಿನ ಕಲಾವಿದರ ಸಂಗಮ ಆಗಲೇಬೇಕು ಮತ್ತು ಮಾಸ್ಕ್ ಧರಿಸಿಕೊಂಡು ನಟಿಸುವಂತೆಯೂ ಇಲ್ಲ. ಹಾಗಾಗಿ ನಮ್ಮೆಲ್ಲ ಸಹೋದರರನ್ನು ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ. ‘ಕೋವಿಡ್ನ ಕೊಲ್ಲೋಣ’ ಎನ್ನುವ ಗೀತೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ನಿಮ್ಮ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ. ನಾನೇ ರಾಗ ಸಂಯೋಜಿಸಿ ಹಾಡಿದ್ದೇನೆ. ಮುಖ್ಯವಾಗಿ ಅನಿರುದ್ಧ್ ಜಟ್ಕರ್ ಸರ್, ಸಂಚಾರಿ ವಿಜಯ್, ಸಂತೋಷ್, ಭುವನ್ ಪೊನ್ನಣ್ಣ ಮೊದಲಾದವರು ಸೇರಿದಂತೆ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಹೇಳಲೇಬೇಕು.

ನಿಮ್ಮ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ

ಸದ್ಯಕ್ಕೆ ಮೂರು ಕನ್ನಡ, ಒಂದು ಮಲಯಾಳಂ ಮತ್ತು ಒಂದು ತಮಿಳು ಚಿತ್ರಗಳು ಕೈಯಲ್ಲಿವೆ. ಕೊರೋನದಿಂದಾಗಿ ಅದರ ಕೆಲಸ ಎಲ್ಲವೂ ಅಲ್ಲಲ್ಲೇ ಉಳಿದಿವೆ. ಕನ್ನಡದಲ್ಲಿ ಅಶು ಬೆದ್ರ ನಾಯಕರಾಗಿರುವ ‘ರಂಗಮಂದಿರ’ ಸೇರಿದಂತೆ ನಿರ್ಮಾಪಕ ಬಾಲರಾಜ್ ಅವರ ಪುತ್ರ ನಾಯಕನಾಗಿರುವ ಒಂದು ಚಿತ್ರಕ್ಕೂ ನಾನೇ ಸಂಗೀತ ನಿರ್ದೇಶಕ. ಇದರ ಜತೆಗೆ ‘ಓ ಪ್ರೇಮ’ ಎನ್ನುವ ಹೊಸಬರ ಚಿತ್ರವೂ ಇದೆ. ತಮಿಳಲ್ಲಿ ‘ಕಯುಗನ್’ ಮತ್ತು ಮಲಯಾಳಂನಲ್ಲಿ ಕಾಲೇಜ್ ಹುಡುಗರ ಕತೆ ಹೇಳುವ ‘ಚಿರಿ’ ಎನ್ನುವ ಚಿತ್ರಕ್ಕೆ ಸಂಗೀತ ನೀಡುತ್ತಿದ್ದೇನೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News