ಅಂಗನವಾಡಿಗಳಲ್ಲಿ ಪಾರದರ್ಶಕತೆ ತರಲು ಬಾಲವಿಕಾಸ ಸಮಿತಿ ರಚನೆ!

Update: 2020-05-18 07:28 GMT

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸರಕಾರದ 30ಕ್ಕೂ ಅಧಿಕ ಯೋಜನೆಗಳು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ತಲುಪಲಿದ್ದು, ಗ್ರಾಮೀಣ ಭಾಗದಲ್ಲಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆ ರಾಜ್ಯ ಸರಕಾರ ಅಂಗನವಾಡಿಗಳಲ್ಲಿ ಪಾರದರ್ಶಕತೆ ತರಲು ಬಾಲವಿಕಾಸ ಸಮಿತಿ ರಚಿಸಲು ಮುಂದಾಗಿದೆ.

ರಾಜ್ಯದಲ್ಲಿ ಒಟ್ಟು 62,580 ಅಂಗನವಾಡಿಗಳು, 3,331 ಮಿನಿ ಅಂಗನವಾಡಿಗಳು ಸೇರಿ 66 ಸಾವಿರ ಅಂಗನವಾಡಿಗಳಿದ್ದು, 6 ತಿಂಗಳಿಂದ 6 ವರ್ಷದ 38.64 ಲಕ್ಷ ಮಕ್ಕಳಿದ್ದಾರೆ. ಇದರಲ್ಲಿ ಅರ್ಧದಷ್ಟು ಅಂಗನವಾಡಿಗೆ ಹೋಗುತ್ತಿದ್ದು, ಬಹುತೇಕ ಮಕ್ಕಳು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ, ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಮಧ್ಯವರ್ತಿಗಳಿಂದ ಅಕ್ರಮ ನಡೆಯುತ್ತಿದೆ. ಆಹಾರ ಧಾನ್ಯ ವಿತರಣೆ ಸರಿಯಾಗಿ ಆಗುತ್ತಿಲ್ಲ ಹಾಗೂ ಗುಣಮಟ್ಟದ್ದಲ್ಲ ಎಂಬ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿದ್ದವು.

ಆದ್ದರಿಂದ ರಾಜ್ಯ ಸರಕಾರ ಬಾಲವಿಕಾಸ ಸಮಿತಿ ರಚನೆಗೆ ಮುಂದಾಗಿದ್ದು, ಸಮಿತಿಯು ಅಂಗನವಾಡಿಗಳ ಕಾರ್ಯವೈಖರಿ ಬಗ್ಗೆ ನಿಗಾ ವಹಿಸಲಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮೇಲೆ ಅವ್ಯವಹಾರ ಆರೋಪ ಕೇಳಿಬಂದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುವ ಅಧಿಕಾರ ನೀಡಲಾಗಿದೆ. ಹಾಗೆಯೇ ಅಂಗನವಾಡಿ ಬಗೆಗಿನ ದೂರು ಬಂದಲ್ಲಿ ಮಾಸಿಕ ಸಭೆಯಲ್ಲಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಲಿದೆ.

ಬಾಲವಿಕಾಸ ಸಮಿತಿಯಲ್ಲಿ ಯಾರು ಇರುತ್ತಾರೆ?: ಅಂಗನವಾಡಿ ಕೇಂದ್ರದ ಯಾವುದಾದರೂ ಒಂದು ಫಲಾನುಭವಿ ಮಗುವಿನ ತಾಯಿ(ಅಧ್ಯಕ್ಷೆ), ಸಂಬಂಧಪಟ್ಟ ವಾರ್ಡ್‌ನ ಸದಸ್ಯರು, ಅಂಗನವಾಡಿ ವ್ಯಾಪ್ತಿಯಲ್ಲಿನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಆಶಾ ಕಾರ್ಯಕರ್ತೆ, ಅಂಗನವಾಡಿ ವ್ಯಾಪ್ತಿಯಲ್ಲಿನ ಪ್ರಾಯ ಪೂರ್ವ ಬಾಲಕಿ, ಅಂಗನವಾಡಿಯ ಇಬ್ಬರು ಮಕ್ಕಳ ಪೋಷಕರು(ಪರಿಶಿಷ್ಟ ಜಾತಿ ಮತ್ತು ಪಂಗಡದವರು), ಅಂಗನವಾಡಿ ಫಲಾನುಭವಿಯಾದ ಒಂದು ಮಗುವಿನ ಅಜ್ಜಿ, ಅಂಗನವಾಡಿ ಫಲಾನುಭವಿಯಾದ ಮಗುವಿನ ತಂದೆ, ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ, ಸ್ತ್ರೀ ಶಕ್ತಿ ಗುಂಪಿನ ಒಬ್ಬರು ಪ್ರತಿನಿಧಿ(ಸದಸ್ಯರು), ಅಂಗನವಾಡಿ ಕಾರ್ಯಕರ್ತೆ(ಸದಸ್ಯ ಕಾರ್ಯದರ್ಶಿ) ಸಮಿತಿಯಲ್ಲಿ ಇರಲಿದ್ದಾರೆ.

ಆರ್ಥಿಕ ವ್ಯವಹಾರಗಳ ನಿರ್ವಹಣೆ:

ಅಂಗನವಾಡಿ ಮಕ್ಕಳಿಗೆ ಹಾಗೂ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಸ್ಥಳಿಯವಾಗಿ ತರಕಾರಿ, ಮೊಟ್ಟೆ, ಚಿಕ್ಕಿ ಖರೀದಿ, ಅಂಗನವಾಡಿ ದಿನಾಚರಣೆ ವೆಚ್ಚಕ್ಕಾಗಿ ಹಾಗೂ ಬಾಲಸ್ನೇಹಿ ಯೋಜನೆಯಡಿ ಬಿಡುಗಡೆ ಮಾಡಲಾಗುವ ಅಥವಾ ಯೋಜನೆಯ ಉದ್ದೇಶ ಈಡೇರಿಕೆಗಾಗಿ ಯಾವುದೇ ಅನುದಾನವನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿ ಹೆಸರಿನಲ್ಲಿ ಜಂಟಿ ಖಾತೆ ತೆರೆದು ನಿರ್ವಹಣೆ ಮಾಡುವ ಅಧಿಕಾರ ಸಮಿತಿಗೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?: ಬಾಲವಿಕಾಸ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿಗಳಿಗೆ ಸಂಬಂಧಪಟ್ಟ ಮೇಲ್ವಿಚಾರಕಿಯು ಗ್ರಾಪಂ ಗಮನಕ್ಕೆ ತರುವ ಮೂಲಕ ಹಾಗೂ ಸರಕಾರ ಗೊತ್ತುಪಡಿಸಿದ ಮಾರ್ಗಸೂಚಿಯಂತೆ ತೀರ್ಮಾನ ತೆಗೆದುಕೊಂಡು ಸಮಾಜ ಸೇವಾ ಮನೋಭಾವನೆ ಹಾಗೂ ಮಕ್ಕಳ ವಿಕಸನದ ಬಗ್ಗೆ ಕಳಕಳಿ ಇರುವವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಿದ್ದಾರೆ.

ಸಮಿತಿಯ ಅಧಿಕಾರವಧಿ: ಬಾಲವಿ ಕಾಸ ಸಮಿತಿಯು ರಚನೆಯಾದ ದಿನಾಂಕದಿಂದ 3 ವರ್ಷದವರೆಗೆ ಕಾರ್ಯ ನಿರ್ವಹಿಸಲಿದೆ. ಮೂರು ವರ್ಷದ ನಂತರ ಸಮಿತಿಯನ್ನು ಪುನಃ ರಚನೆ ಮಾಡಬೇಕು. ಸಮಿತಿಯ ಯಾವುದೇ ಸದಸ್ಯರ ಸದಸ್ಯತ್ವ ಮುಕ್ತವಾಗುವುದಕ್ಕಿಂತ ಮೊದಲೇ ಖಾಲಿಯಾದರೆ, ಆ ಸ್ಥಾನ ಭರ್ತಿ ಮಾಡಿದರೂ, ಸಮಿತಿ ರಚನೆಯಾದ ದಿನಂದಿಂದ ಮೂರು ವರ್ಷ ಅಧಿಕಾರವಧಿ ಇರಲಿದೆ.

ದೂರಿನ ಪೆಟ್ಟಿಗೆ ಇಡುವುದು: ಅಂಗನವಾಡಿ ಕೇಂದ್ರದಲ್ಲಿ ಫಲಾನು ಭವಿಗಳಿಗೆ, ಮಗುವಿನ ಪೋಷಕರಿಗೆ ಮುಕ್ತವಾಗಿ ದೂರಿನ ಪೆಟ್ಟಿಗೆ ಇಡಬೇಕು. ಬಂದ ದೂರುಗಳನ್ನು ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಬಗೆಹರಿಸಬೇಕು. ದೂರಿನ ವಿಷಯವು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ದುರ್ನಡತೆ ಅಥವಾ ಅವ್ಯವಹಾರಗಳಿಗೆ ಸಂಬಂಧಿಸಿದ್ದಲ್ಲಿ ಅಂತಹ ದೂರುಗಳನ್ನು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಕಳುಹಿಸುವ ಅಧಿಕಾರ ನೀಡಲಾಗಿದೆ.

ಬಾಲವಿಕಾಸ ಸಮಿತಿಯ ಕರ್ತವ್ಯಗಳು

 ► ಪ್ರತೀ ವರ್ಷ ಕ್ರಿಯಾಯೋಜನೆ ಸಿದ್ಧಪಡಿಸಿ, ಅಂಗನವಾಡಿ ಕೇಂದ್ರದ ಸುಧಾರಣೆಗೆ ಕ್ರಮವಹಿಸುವುದು.

 ► ಅಂಗನವಾಡಿ ಕೇಂದ್ರವು ಬೆಳಗ್ಗೆ 9:30 ರಿಂದ ಸಂಜೆ 4 ರವರೆಗೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸುವುದು.

 ► ಶೌಚಾಲಯ ನಿರ್ಮಾಣ ಹಾಗೂ ಜನಸ್ನೇಹಿ ಕಾಮಗಾರಿಗಳ ಮೇಲುಸ್ತುವಾರಿ ವಹಿಸುವುದು.

 ► ಪೌಷ್ಟಿಕ ಆಹಾರ ಹಾಗೂ ಔಷಧೋಪಚಾರ ನೀಡುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು.

 ► ಫಲಾನುಭವಿಗಳಿಗೆ ಆಹಾರ ಪದಾರ್ಥ ವಿತರಣೆಯಲ್ಲಿ ಅವ್ಯವಹಾರ ನಡೆಯದಂತೆ ಗಮನಿಸುವುದು.

► ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಅವ್ಯವಹಾರ ನಡೆಸಿದರೆ ಮೇಲಾಧಿಕಾರಿಗಳಿಗೆ ತಿಳಿಸುವುದು.

ಅಂಗನವಾಡಿ ಕೇಂದ್ರದ ಮೂಲಕ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ಸೇರಿ ಇನ್ನಿತರರಿಗೆ ವಿವಿಧ ಯೋಜನೆಗಳು ತಲುಪಲಿದ್ದು, ಇದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ ಬಾಲ ವಿಕಾಸ ಸಮಿತಿ ರಚಿಸಲಾಗಿದೆ. ಇದರಿಂದ ಅಂಗನವಾಡಿಗಳು ಪಾರದರ್ಶಕತೆಯಿಂದ ಕಾರ್ಯಾಚರಣೆ ನಡೆಸಲಿವೆ.

-ಕೆ.ಎ.ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ

ಲಾಕ್‌ಡೌನ್ ಹಿನ್ನೆಲೆ ಸಮಿತಿ ರಚನೆ ವಿಳಂಬ

ಬಾಲ ವಿಕಾಸ ಸಮಿತಿ ರಚನೆಗೆ ಸರಕಾರ ಅಧಿಸೂಚನೆ ಹೊರಡಿಸಿದ್ದು, ಲಾಕ್‌ಡೌನ್ ಹಿನ್ನೆಲೆ ಬಾಲವಿಕಾಸ ಸಮಿತಿಯು ಪ್ರತಿಯೊಂದು ಅಂಗನವಾಡಿಯಲ್ಲಿ ರಚಿಸಲು ವಿಳಂಬವಾಗಿದೆ. ಲಾಕ್‌ಡೌನ್ ಮುಗಿದ ನಂತರ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮೊದಲು ಅಂಗನವಾಡಿ ವ್ಯಾಪ್ತಿಯಲ್ಲಿನ ಜನರಿಗೆ ಸಮಿತಿ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾಯೊಬ್ಬರು ತಿಳಿಸಿದ್ದಾರೆ.

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News