ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದು ಹೀಗೆ…

Update: 2020-05-18 11:58 GMT

ಚೆನ್ನೈ: ‘ಸಿಂಗಂ’ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ರವಿವಾರ ಫೇಸ್‍ಬುಕ್ ಲೈವ್ ಮೂಲಕ ಮಾತನಾಡಿದ ಅಣ್ಣಾಮಲೈ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ವಿವರಿಸಿದರಲ್ಲದೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ತಾವು ಬಯಸಿದ್ದಾಗಿ ಹೇಳಿಕೊಂಡರು.

“ನಾನು ತಮಿಳುನಾಡು ರಾಜಕೀಯ ಪ್ರವೇಶಿಸಲು ಯೋಚಿಸುತ್ತಿದ್ದೇನೆ. ಮುಂದಿನ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದೇನೆ. ರಾಜಕೀಯ ಪ್ರವೇಶಿಸುವ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಯಸುತ್ತೇನೆ'' ಎಂದು ಅವರು ಹೇಳಿಕೊಂಡಿದ್ದಾರೆ.

ತಮಿಳುನಾಡಿನ ಕರೂರ್ ಮೂಲದವರಾಗಿರುವ ಅಣ್ಣಾಮಲೈ ತಾವು ಈಗಾಗಲೇ ತಮ್ಮ ಎನ್‍ಜಿಒ ‘ವಿ ದಿ ಲೀಡರ್ ಫೌಂಡೇಶನ್' ಮೂಲಕ ಜನರ ಜತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. “ನಾನು ನನ್ನ ಊರಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದೇನೆ ಹಾಗೂ ಕುಟುಂಬದಲ್ಲಿ ಸಮಯ ಕಳೆಯುತ್ತಿದ್ದೇನೆ'' ಎಂದೂ ಅವರು ಹೇಳಿಕೊಂಡರು.

ತಮ್ಮ ಮುಂಬರುವ ಕೃತಿಯ ಕುರಿತು ಮಾತನಾಡಿದ ಅವರು, “ಇನ್ನೆರಡು ತಿಂಗಳುಗಳಲ್ಲಿ ಪುಸ್ತಕ ಪ್ರಕಟವಾಗಲಿದೆ ಹಾಗೂ ನಾನು ಈ ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಪುಸ್ತಕ ಪೂರ್ಣಗೊಳಿಸಲು ಬಯಸಿದ್ದೇನೆ'' ಎಂದರು.

ಕಳೆದ ವರ್ಷದ ಮೇ ತಿಂಗಳಲ್ಲಿ ಅವರು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ರಾಜೀನಾಮೆ ನೀಡಿದ್ದರು. ಕಾರ್ಕಳ ಉಪವಿಭಾಗದ ಎಎಸ್‍ಪಿ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಅಣ್ಣಾಮಲೈ ಮುಂದೆ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಎಸ್‍ಪಿ ಆಗಿ ನೇರ ಮತ್ತು ಖಡಕ್ ಅಧಿಕಾರಿ ಎಂದು ಹೆಸರು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News