ಯೋಧರ ಗುಂಡೇಟಿನಿಂದ ನಾಗರಿಕ ಮೃತಪಟ್ಟ ಪ್ರಕರಣ; ಲಾಕ್‌ಡೌನ್ ಮಧ್ಯೆ ಜನರ ಪ್ರತಿಭಟನೆ

Update: 2020-05-18 14:48 GMT
ಸಾಂದರ್ಭಿಕ ಚಿತ್ರ

ಇಟಾನಗರ, ಮೇ 18: ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ನಗರದಲ್ಲಿ ಸೇನಾಪಡೆ ಹಾರಿಸಿದ ಗುಂಡಿನಿಂದ ಸ್ಥಳೀಯ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣವನ್ನು ಖಂಡಿಸಿ ಸೋಮವಾರ ಲಾಕ್‌ಡೌನ್ ಮಧ್ಯೆಯೇ ಸ್ಥಳೀಯರು ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಎರಡು ದಿನದ ಹಿಂದೆ ಸೇನೆಯ ಗಸ್ತುಪಡೆಯವರು ಹಾರಿಸಿದ ಗುಂಡಿನಿಂದ ವಾಂಚೊ ಬುಡಕಟ್ಟಿಗೆ ಸೇರಿದ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಇದನ್ನು ಖಂಡಿಸಿ ವಾಂಚೊ ಬುಡಕಟ್ಟು ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ನ್ಯಾಯ ಒದಗಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.

ಪ್ರತಿಭಟನಾ ರ‍್ಯಾಲಿ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಲಾಕ್‌ಡೌನ್ ನಿಯಮಗಳನ್ನು ಪಾಲಿಸಲಾಗಿದ್ದು ಪ್ರತಿಭಟನಾಕಾರರು ಸಲ್ಲಿಸಿರುವ ಮನವಿಯನ್ನು ಸಂಬಂಧಿತ ಇಲಾಖೆಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಲಾಂಗ್ಡಿಂಗ್‌ನ ಜಿಲ್ಲಾಧಿಕಾರಿ ಹೇಳಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದನ್ನು ಕೇಂದ್ರ ಸರಕಾರ ನಿಷೇಧಿಸಿದ್ದರೂ, ಈ ಪ್ರಕರಣದಲ್ಲಿ ವಾಂಚೊ ಬುಡಕಟ್ಟು ಸಮಿತಿಯ ಕೋರಿಕೆಯನ್ನು ಪರಿಗಣಿಸಿ ಒಂದು ಬಾರಿಗೆ ವಿನಾಯಿತಿ ನೀಡಿ, ಶಾಂತಿಯುತವಾಗಿ ರ್ಯಾಲಿ ನಡೆಸಲು ಅವಕಾಶ ನೀಡಲಾಗಿತ್ತು. ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದ್ದು ಕೇವಲ 50 ಜನ ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News