ಪ್ರಧಾನಿಯ 20 ಲ.ಕೋ.ರೂ.ಗಳ ಪ್ಯಾಕೇಜ್: 2.5 ಲ.ಕೋ.ರೂ.ಗೂ ಕಡಿಮೆ ಹಣ ವೆಚ್ಚವಾಗುವ ಸಾಧ್ಯತೆ

Update: 2020-05-18 14:48 GMT

ಹೊಸದಿಲ್ಲಿ,ಮೇ 18: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಬೆಳಿಗ್ಗೆ ಅಂತಿಮ ಕಂತಿನ ವಿವರಗಳನ್ನು ಪ್ರಕಟಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ಅಭಿಯಾನದ ಆರ್ಥಿಕ ಪ್ಯಾಕೇಜಿನ ಹೂರಣವು ಬಿಚ್ಚಿಕೊಂಡಿದೆ.

ಸರಕಾರದ ಲೆಕ್ಕಾಚಾರದಂತೆ ವಿಶೇಷ ಆರ್ಥಿಕ ಪ್ಯಾಕೇಜಿನ ಮೊತ್ತ 20.97 ಲ.ಕೋ.ರೂ.ಗಳಾಗಿವೆ. ಐದು ಕಂತುಗಳಲ್ಲಿ ಸೀತಾರಾಮನ್ ನೀಡಿರುವ ವಿವರಗಳಂತೆ ಆರ್ಥಿಕ ಪ್ಯಾಕೇಜ್ 20 ಲ.ಕೋ.ರೂ.ಗಳನ್ನು ಮೀರುತ್ತದೆಯಾದರೂ ಈ ವರ್ಷ ಸರಕಾರವು ವೆಚ್ಚ ಮಾಡಲಿರುವ ವಾಸ್ತವಿಕ ಮೊತ್ತ ಮತ್ತು ವಿತ್ತೀಯ ಕೊರತೆಯ ಮೇಲಿನ ಪರಿಣಾಮ ತೀರ ಕಡಿಮೆಯಾಗಲಿದೆ. ಸರಕಾರದ ಹಲವಾರು ಪ್ರಸ್ತಾವಗಳು ಸಾಲ ಕೇಂದ್ರಿತವಾಗಿವೆ ಅಥವಾ ಹಲವಾರು ಬಾಧಿತ ಕ್ಷೇತ್ರಗಳಲ್ಲಿಯ ದ್ರವ್ಯತೆ ಕಳವಳಗಳನ್ನು ನಿವಾರಿಸುವ ಉದ್ದೇಶ ಹೊಂದಿರುವುದು ಇದಕ್ಕೆ ಕಾರಣವಾಗಿದೆ. ಕೆಲವು ಪ್ರಕರಣಗಳಲ್ಲಿ ಆರಂಭದಲ್ಲಿ ತಗಲುವ ಯಾವುದೇ ವೆಚ್ಚವನ್ನು ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳ ಮೂಲಕ ಭರಿಸಲಾಗುತ್ತದೆ ಮತ್ತು ಇದರಿಂದಾಗಿ ವಾಸ್ತವದಲ್ಲಿ ಸರಕಾರವು ಕೈಯಿಂದ ಖರ್ಚು ಮಾಡಬೇಕಿಲ್ಲ

ಇತರ ಉಪಕ್ರಮಗಳು,ವಿಶೇಷವಾಗಿ ಮೂರನೇ ಕಂತಿನಲ್ಲಿ ಪ್ರಕಟಿಸಲಾಗಿರುವ ಕ್ರಮಗಳು ತಕ್ಷಣಕ್ಕೆ ಕ್ರಿಯಾಶೀಲಗೊಳ್ಳುವುದಿಲ್ಲ ಮತ್ತು ಗತಿಯನ್ನು ಪಡೆದುಕೊಳ್ಳಲು ಅನಿರ್ದಿಷ್ಟಾವಧಿಯ ಸಮಯ ಬೇಕಾಗಬಹುದು,ಹೀಗಾಗಿ ಇವು ಈ ವರ್ಷದ ವಿತ್ತೀಯ ಕೊರತೆಯ ಲೆಕ್ಕಾಚಾರದಲ್ಲಿ ಸಂಪೂರ್ಣವಾಗಿ ಒಳಗೊಳ್ಳದಿರಬಹುದು.

ಸುದ್ದಿ ಜಾಲತಾಣ ‘Thewire.in’ನ ವಿಶ್ಲೇಷಣೆಯಂತೆ ಸ್ವಾವಲಂಬಿ ಭಾರತ ಅಭಿಯಾನ ಆರ್ಥಿಕ ಪ್ಯಾಕೇಜಿನ ಪರಿಣಾಮವಾಗಿ ಹೆಚ್ಚುವರಿ ಮತ್ತು ನೇರ ವಿತ್ತೀಯ ವೆಚ್ಚವು 2.5 ಲ.ಕೋ.ರೂ.ಗಳಿಗಿಂತ ಕಡಿಮೆಯಾಗಲಿದೆ. ಕೆಲವು ವೆಚ್ಚಗಳು ಸರಕಾರದ ಅನುಷ್ಠಾನದ ವೇಗ ಮತ್ತು ಇತರ ಅಂಶಗಳನ್ನು ಅವಲಂಬಿಸಿರುವುದರಿಂದ ನಿಖರವಾದ ಮೊತ್ತವನ್ನು ಲೆಕ್ಕ ಹಾಕುವುದು ಕಷ್ಟವಾಗುತ್ತದೆ. ಆದಾಗ್ಯೂಈ ವರ್ಷದ ವಿತ್ತೀಯ ವೆಚ್ಚವು ಒಟ್ಟಾರೆ 20 ಲ.ಕೋ.ರೂಗಳ ಪ್ಯಾಕೇಜಿನ ಶೇ.10ಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಭಾರತದ ಜಿಡಿಪಿಯ ಶೇ.1ಕ್ಕಿಂತ ಸ್ವಲ್ಪ ಹೆಚ್ಚಾಗಲಿರುವ ಸಾಧ್ಯತೆಯಿದೆ.

ಕೇರ್ ರೇಟಿಂಗ್ಸ್, ಎಮ್ಕೆ, ಎಸ್‌ಬಿಐ ರಿಸರ್ಚ್ ಮತ್ತು ಎಚ್‌ಎಸ್‌ಬಿಸಿ ಇಂಡಿಯಾ ಆರ್ಥಿಕ ತಜ್ಞ ಮತ್ತು ಮಾರುಕಟ್ಟೆ ತಜ್ಞ ಸಂಸ್ಥೆಗಳೂ ವಿತ್ತೀಯ ಪ್ಯಾಕೇಜಿನ ಈ ವರ್ಷದ ವೆಚ್ಚ 1.5 ಲ.ಕೋ.ರೂ.ಗಳಿಂದ 2.40 ಲ.ಕೋ.ರೂ.ವರೆಗೆ ಆಗಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News