ಶ್ರಮಿಕ್ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ

Update: 2020-05-18 15:18 GMT

ರಾಯ್‌ಪುರ, ಮೇ 18: ಮಧ್ಯಪ್ರದೇಶದಿಂದ ಛತ್ತೀಸ್‌ಗಢಕ್ಕೆ ರವಿವಾರ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕ ಮಹಿಳೆಯೊಬ್ಬಳು ರೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ವರದಿಯಾಗಿದೆ.

ಮಧ್ಯಪ್ರದೇಶದ ಭೋಪಾಲ್‌ನಿಂದ ಛತ್ತೀಸ್‌ಗಢದ ಭಿಲಾಸ್‌ಪುರಕ್ಕೆ ಪ್ರಯಾಣಿಸುತ್ತಿದ್ದ 23 ವರ್ಷದ ಈಶ್ವರಿ ಯಾದವ್‌ಗೆ ರವಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭ ರೈಲು ಮಹಾರಾಷ್ಟ್ರದ ನಾಗ್‌ಪುರ ರೈಲು ನಿಲ್ದಾಣದ ಸಮೀಪವಿತ್ತು. ಆಗ ರೈಲ್ವೇಯ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದಾಗ ಸಮೀಪದ ನಿಲ್ದಾಣದಲ್ಲಿ ವೈದ್ಯಕೀಯ ಸಿಬಂದಿಯ ಸೇವೆ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟರಲ್ಲಿ ಹೆರಿಗೆ ನೋವು ಹೆಚ್ಚಾದ ಕಾರಣ ರೈಲಿನಲ್ಲಿದ್ದ ಮಹಿಳೆಯರ ಸಹಾಯದಿಂದ ಸುಸೂತ್ರವಾಗಿ ಹೆರಿಗೆಯಾಗಿದೆ ಎಂದು ಮಹಿಳೆಯ ಪತಿ ರಾಜೇಂದ್ರ ಯಾದವ್ ಹೇಳಿದ್ದಾರೆ.

ನಾಗ್‌ಪುರ ರೈಲು ನಿಲ್ದಾಣದಲ್ಲಿದ್ದ ವೈದ್ಯಕೀಯ ಸಿಬಂದಿಗಳು ಬಾಣಂತಿ ಮತ್ತು ನವಜಾತ ಶಿಶುವಿನ ಆರೋಗ್ಯ ಪರೀಕ್ಷಿಸಿ ಕೆಲವು ಔಷಧಿ ನೀಡಿದ್ದಾರೆ. ರಾತ್ರಿ 11 ಗಂಟೆಗೆ ಬಿಲಾಸ್‌ಪುರ ರೈಲು ನಿಲ್ದಾಣ ತಲುಪಿದ್ದು ಅಲ್ಲಿಂದ ಮಗು ಮತ್ತು ತಾಯಿಯನ್ನು ಆ್ಯಂಬುಲೆನ್ಸ್ ಮೂಲಕ ಛತ್ತೀಸ್‌ಗಢ ವೈದ್ಯವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ. ಇಬ್ಬರನ್ನೂ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ಮುಂದುವರಿಸಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ ಆರತಿ ಪಾಂಡೆ ಹೇಳಿದ್ದಾರೆ.

 ತಾಯಿಯನ್ನು ಕೊರೋನ ಸೋಂಕು ಪರೀಕ್ಷೆಗೆ ಒಳಪಡಿಸಿದ್ದು ನೆಗೆಟಿವ್ ವರದಿ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿದ್ದಾರೆ. ಛತ್ತೀಸ್‌ಗಢದ ಮುಂಗೇಲಿ ಗ್ರಾಮದ ನಿವಾಸಿಯಾಗಿರುವ ಯಾದವ್, ಮಾರ್ಚ್‌ನಲ್ಲಿ ಹೋಲಿ ಹಬ್ಬ ಮುಗಿದ ಬಳಿಕ ತನ್ನ ಗರ್ಭಿಣಿ ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿನೊಂದಿಗೆ ಭೋಪಾಲಕ್ಕೆ ತೆರಳಿ ಅಲ್ಲಿ ನಿರ್ಮಾಣ ಕೆಲಸದ ಕಾರ್ಮಿಕನಾಗಿ ಸೇರಿಕೊಂಡಿದ್ದ. ದುರದೃಷ್ಟವಶಾತ್, ನಾಲ್ಕು ದಿನ ಕೆಲಸ ಮಾಡುವಷ್ಟರಲ್ಲಿ ಲಾಕ್‌ಡೌನ್ ಜಾರಿಯಾಗಿ ಅಲ್ಲೇ ಸಿಕ್ಕಿಬಿದ್ದಿದ್ದ ಎಂದು ಕುಟುಂಬದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News