ಬಿಆರ್ ಶೆಟ್ಟಿಯಿಂದ ಬ್ಯಾಂಕ್ ಆಫ್ ಬರೋಡಾಕ್ಕೆ 1,892 ಕೋಟಿ ರೂ. ಸಾಲ ಬಾಕಿ: ವರದಿ

Update: 2020-05-19 15:37 GMT

ಹೊಸದಿಲ್ಲಿ, ಮೇ 19: ಎಂಎನ್‌ಸಿ ಸ್ಥಾಪಕ ಬಿಆರ್‌ಶೆಟ್ಟಿ ಮತ್ತವರ ಸಂಸ್ಥೆಗಳು ಬ್ಯಾಂಕ್ ಆಫ್ ಬರೋಡಾಕ್ಕೆ 1892 ಕೋಟಿ ರೂ.ಗೂ ಹೆಚ್ಚಿನ ಸಾಲ ಪಾವತಿಸಲು ಬಾಕಿ ಇರಿಸಿದೆ ಎಂದು ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಈ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಬಿಆರ್ ಶೆಟ್ಟಿ ಮತ್ತವರ ಪತ್ನಿ ತಮ್ಮ ಕೆಲವು ಆಸ್ತಿಗಳನ್ನು ಮಾರುವುದು ಅಥವಾ ವರ್ಗಾಯಿಸುವುದನ್ನು ಭಾರತದ ನ್ಯಾಯಾಲಯ ನಿರ್ಬಂಧಿಸಿರುವುದು ನ್ಯಾಯಾಲಯದ ದಾಖಲೆ ಪತ್ರದಿಂದ ತಿಳಿದುಬಂದಿದೆ.

ಸಾಲ ಪಡೆಯುವಾಗ ಶೆಟ್ಟಿ ಮತ್ತವರ ಪತ್ನಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ 16 ಆಸ್ತಿಗಳನ್ನು ಸಾಲಕ್ಕೆ ಆಧಾರವಾಗಿ ಇರಿಸಿರುವುದನ್ನು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಯ್ಟರ್ಸ್ ತಿಳಿಸಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಪ್ರಕರಣದ ಮುಂದಿನ ವಿಚಾರಣೆ ಜೂನ್ 8ರಂದು ನಡೆಯಲಿದೆ.

ಸಾಲ ಪಡೆಯುವಾಗ ಮಾಡಿದ ಕರಾರಿನಂತೆ 16 ಆಸ್ತಿಗಳ ಹಕ್ಕುಪತ್ರವನ್ನು ಬಿಆರ್ ಶೆಟ್ಟಿ ಬ್ಯಾಂಕ್‌ಗೆ ಹಸ್ತಾಂತರಿಸಬೇಕು ಎಂದು ದಾಖಲೆಪತ್ರವನ್ನು ಉಲ್ಲೇಖಿಸಿ ಬ್ಯಾಂಕ್ ಆಫ್ ಬರೋಡಾ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕುರಿತು ಶೆಟ್ಟಿ ಅಥವಾ ಬ್ಯಾಂಕ್ ಆಫ್ ಬರೋಡಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಯ್ಟರ್ಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News