ಕೇರಳ: ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸಿದ ರೈಲ್ವೆ ಪೊಲೀಸರು

Update: 2020-05-19 16:41 GMT

ಕಣ್ಣೂರು,ಮೇ 19: ಲಾಕ್‌ಡೌನ್‌ನಿಂದಾಗಿ ಕೆಲಸ,ವೇತನ ಮತ್ತು ಸರಿಯಾದ ಆಹಾರವೂ ಇಲ್ಲದೆ ಕಂಗಾಲಾಗಿ ಸಾವಿರಾರು ಕಿ.ಮೀ.ದೂರದ ತಮ್ಮ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಸುಮಾರು 100 ವಲಸೆ ಕಾರ್ಮಿಕರನ್ನು ರೈಲ್ವೆ ಪೊಲೀಸರು ಸಾಂತ್ವನ ಹೇಳಿ ಪರಿಹಾರ ಶಿಬಿರಗಳಿಗೆ ವಾಪಸ್ ರವಾನಿಸಿದ ಘಟನೆ ಮಂಗಳವಾರ ಇಲ್ಲಿಗೆ ಸಮೀಪದ ವಲ್ಲಪಟ್ಟಣಮ್ ಬಳಿ ನಡೆದಿದೆ.

ಉತ್ತರ ಪ್ರದೇಶ ಮತ್ತು ಬಿಹಾರಗಳಿಗೆ ಸೇರಿದ ಈ ಕಾರ್ಮಿಕರು ಹಲವಾರು ಪ್ಲೈವುಡ್ ಕೈಗಾರಿಕೆಗಳ ಕೇಂದ್ರವಾಗಿರುವ ವಲ್ಲಪಟ್ಟಣಮ್‌ನಲ್ಲಿ ದುಡಿಯುತ್ತಿದ್ದರು. ಕುಡಿಯುವ ನೀರಿನ ಕ್ಯಾನ್‌ಗಳು ಮತ್ತು ತಮ್ಮ ಕೆಲವು ಸೊತ್ತುಗಳೊಂದಿಗೆ ಮಂಗಳವಾರ ನಸುಕಿನಲ್ಲಿ ಕಠಿಣ ಪ್ರಯಾಣವನ್ನು ಆರಂಭಿಸಿದ್ದ ಈ ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರೈಲ್ವೆ ಪೊಲೀಸರು ತಡೆದು ನಿಲ್ಲಿಸಿದ್ದರು.

 ತಮಗೆ ಕೆಲಸವಿಲ್ಲ,ಆದಾಯವೂ ಇಲ್ಲ. ಶಿಬಿರಗಳಲ್ಲಿ ದಿನಕ್ಕೆ ಒಂದೇ ಬಾರಿ ಆಹಾರ ನೀಡಲಾಗುತ್ತಿದೆ. ತಾವು ತವರು ರಾಜ್ಯಗಳಿಗೆ ಮರಳಲು ನೆರವಾಗಲು ಸರಕಾರವು ರೈಲುಗಳ ವ್ಯವಸ್ಥೆಯನ್ನೂ ಮಾಡುತ್ತಿಲ್ಲ ಎಂದು ಕೆಲವರು ದೂರಿಕೊಂಡರೆ, ನಾಲ್ವರ ಕುಟುಂಬಕ್ಕೆ ವಾರಕ್ಕೆ ಎರಡು ಕೆ.ಜಿ.ಗೋದಿಯನ್ನು ನೀಡಲಾಗುತ್ತಿದೆ,ಇದು ತಮಗೆ ಯಾವುದಕ್ಕೂ ಸಾಲುತ್ತಿಲ್ಲ ಎಂದು ಇನ್ನು ಕೆಲವು ಕಾರ್ಮಿಕರು ದೂರಿಕೊಂಡರು.

ಈ ಕಾರ್ಮಿಕರಿಗೆ ಸಾಂತ್ವನ ಹೇಳಿದ ರೈಲ್ವೆ ಪೊಲೀಸರು ಮೂರು ಸರಕಾರಿ ಬಸ್‌ಗಳಲ್ಲಿ ಅವರನ್ನು ಶಿಬಿರಗಳಿಗೆ ವಾಪಸ್ ಕಳುಹಿಸಿದ್ದಾರೆ.

ತನ್ಮಧ್ಯೆ,ವಲಸೆ ಕಾರ್ಮಿಕರ ದೂರುಗಳನ್ನು ಪರಿಶೀಲಿಸುವುದಾಗಿ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 15ರವರೆಗೆ ಒಟ್ಟು 33,000 ವಲಸೆ ಕಾರ್ಮಿಕರು ಕೇರಳದಿಂದ 29 ರೈಲುಗಳಲ್ಲಿ ತಮ್ಮ ತವರು ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News