×
Ad

ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದಂತೆ ಸುದ್ದಿಗೋಷ್ಠಿಗಳನ್ನೇ ನಿಲ್ಲಿಸಿದ ಆರೋಗ್ಯ ಸಚಿವಾಲಯ!

Update: 2020-05-20 18:16 IST
 ಫೈಲ್ ಚಿತ್ರ

ಹೊಸದಿಲ್ಲಿ,ಮೇ 20: ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕರಣಗಳ ವಿವರಗಳನ್ನು ನೀಡಲು ತಾನು ನಡೆಸುತ್ತಿದ್ದ ದೈನಂದಿನ ಸುದ್ದಿಗೋಷ್ಠಿಗಳನ್ನು ನಿಲ್ಲಿಸಿ ಮೌನಕ್ಕೆ ಜಾರಿದೆ ಎಂದು indiatoday ವರದಿ ಮಾಡಿದೆ.

ಮೇ 7ರಿಂದ ದೇಶದಲ್ಲಿ ಪ್ರತಿ ದಿನ 3,200ಕ್ಕೂ ಅಧಿಕ ಹೊಸ ಕೊರೋನ ವೈರಸ್ ಪ್ರಕರಖಗಳು ವರದಿಯಾಗುತ್ತಿವೆ. ಮೇ 11ರಿಂದ ಇದು ಹೆಚ್ಚಾಗಿದ್ದು,ಪ್ರತಿದಿನ 3,500ಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ನಾಲ್ಕು ದಿನಗಳಲ್ಲಿ (ಮೇ 17-20) ಪ್ರತಿದಿನ 4,950ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮೇ 20ರಂದು ಅಂದರೆ ಇಂದು 5,611 ಹೊಸ ಪ್ರಕರಣಗಳು ವರದಿಯಾಗಿದ್ದು,ಇದು ಭಾರತದಲ್ಲಿ ಈವರೆಗೆ ಒಂದು ದಿನದಲ್ಲಿ ವರದಿಯಾದ ಪ್ರಕರಣಗಳ ಗರಿಷ್ಠ ಸಂಖ್ಯೆಯಾಗಿದೆ.

ಭಾರತವು ಸ್ವಾತಂತ್ರ್ಯಾನಂತರದ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಪಿಡುಗು ಇನ್ನು ಮುಂದೆ ಹೇಗೆ ಹರಡಲಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎನ್ನುವುದು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ವಲಸೆ ಕಾರ್ಮಿಕರ ಬಿಕ್ಕಟ್ಟು ಮತ್ತು ತಳ ಕಚ್ಚಿರುವ ಆರ್ಥಿಕತೆ ಪ್ರಕ್ಷುಬ್ಧ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ.

ಇಷ್ಟೆಲ್ಲ ಇದ್ದರೂ ಗೃಹಸಚಿವಾಲಯವು ತನ್ನ ದೈನಂದಿನ ಸುದ್ದಿಗೋಷ್ಠಿಗಳನ್ನು ನಿಲ್ಲಿಸಿದೆ. ಪ್ರತಿ ದಿನ ಸಂಜೆ ಸುದ್ದಿಗೋಷ್ಠಿ ನಡೆಸಿ ತಳಮಟ್ಟದ ಸ್ಥಿತಿಯ ಬಗ್ಗೆ ಮತ್ತು ಈ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತಿದ್ದ ಆರೋಗ್ಯ ಸಚಿವಾಲಯ ಕಳೆದ ಎಂಟು ದಿನಗಳಿಂದ ಆ ಗೋಜಿಗೆ ಹೋಗಿಲ್ಲ. ಅದು ಕೊನೆಯ ಸುದ್ದಿಗೋಷ್ಠಿಯನ್ನು ನಡೆಸಿದ್ದು ಮೇ 11ರಂದು. ಮೇ 11 ಮತ್ತು ಮೇ 20ರ ನಡುವೆ ದೇಶದ ಕೊರೋನ ವೈರಸ್ ಪ್ರಕರಣಗಳಲ್ಲಿ ಶೇ.59ರಷ್ಟು ಏರಿಕೆ,ಅಂದರೆ ಪ್ರಕರಣಗಳ ಸಂಖ್ಯೆ 67,152ರಿಂದ 1,06,750ಕ್ಕೆ ಹೆಚ್ಚುವ ಮೂಲಕ ಕೊರೋನ ವೈರಸ್ ಪಿಡುಗು ತಾರಕಕ್ಕೇರಿರುವಾಗಲೇ ತಾನು ಸುದ್ದಿಗೋಷ್ಠಿಯನ್ನು ನಿಲ್ಲಿಸಿರುವ ಬಗ್ಗೆ ಅದಿನ್ನೂ ವಿವರಣೆಯನ್ನು ನೀಡಬೇಕಿದೆ.

ಆಸಕ್ತಿಯ ವಿಷಯವೆಂದರೆ ಮಾ.25 ಮತ್ತು ಎ.20ರ ನಡುವೆ ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ತೀರ ಕಡಿಮೆಯಿದ್ದ ಅವಧಿಯಲ್ಲಿ ಆರೋಗ್ಯ ಸಚಿವಾಲಯವು ಒಂದೇ ಒಂದು ದಿನ ಸುದ್ದಿಗೋಷ್ಠಿಯನ್ನು ತಪ್ಪಿಸಿರಲಿಲ್ಲ. ಬಳಿಕ ಪ್ರಕರಣಗಳಲ್ಲಿ ಏರಿಕೆಯಾಗತೊಡಗಿದಾಗ ಅದು ದೈನಂದಿನ ಸುದ್ದಿಗೋಷ್ಠಿಗಳನ್ನು ತಪ್ಪಿಸಲು ಆರಂಭಿಸಿತ್ತು. ಮೇ 11ರ ನಂತರ ಅದು ದೈನಂದಿನ ಸುದ್ದಿಗೋಷ್ಠಿಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ. ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಹಿಂದಿನ 24 ಗಂಟೆಗಳಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಅದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ಈ ಅಂಕಿಸಂಖ್ಯೆಗಳು ಮಹತ್ವದ್ದಾಗಿದ್ದರೂ ಈ ಪ್ರಕಟಣೆ ಸಚಿವಾಲಯದ ಸುದ್ದಿಗೋಷ್ಠಿಗೆ ಪರ್ಯಾಯವಲ್ಲ,ಅದು ಏಕಪಕ್ಷೀಯ. ಸುದ್ದಿಗೋಷ್ಠಿಯಲ್ಲಿ ವರದಿಗಾರರು ವಿವರಣೆ/ಸ್ಪಷ್ಟನೆ ಅಥವಾ ಪ್ರಶ್ನೆಗಳನ್ನು ಕೇಳಬಹುದಿತ್ತು. ಈಗ ಸುದ್ದಿಗೋಷ್ಠಿಗಳನ್ನು ನಿಲ್ಲಿಸುವ ಮೂಲಕ ಸಚಿವಾಲಯವು ಇವುಗಳಿಂದ ನುಣುಚಿಕೊಂಡಂತಿದೆ.

 ಸುದ್ದಿಗೋಷ್ಠಿಗಳಲ್ಲಿ ಮಾಧ್ಯಮಗಳು ಪ್ರಶ್ನೆಗಳನ್ನು ಕೇಳಬಹುದಾದ್ದರಿಂದ ಅದು ಮರುಮಾಹಿತಿ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ ಮತ್ತು ಜನತೆ ಮತ್ತು ಸರಕಾರದ ನಡುವೆ ಸೇತುವೆಯಾಗಿರುತ್ತದೆ. ಇಂತಹ ದೈನಂದಿನ ಸುದ್ದಿಗೋಷ್ಠಿಗಳನ್ನೇ ಸಚಿವಾಲಯವು ಈಗ ನಿಲ್ಲಿಸಿದೆ.

ಈ ಎಂಟು ದಿನಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಹಲವಾರು ಬೆಳವಣಿಗೆಗಳು ನಡೆದಿವೆ. ಸಚಿವಾಲಯವು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಗಳನ್ನು ನಡೆಸುವುದು ಅಗತ್ಯವಲ್ಲ ಎಂದು ಅದು ಭಾವಿಸಿದ್ದಂತಿದೆ.

ಕೃಪೆ: indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News