×
Ad

ಪಶ್ಚಿಮ ಬಂಗಾಳದಲ್ಲಿ ‘ಅಂಫಾನ್’ ಅಬ್ಬರ ಆರಂಭ: ಇಬ್ಬರು ಬಲಿ

Update: 2020-05-20 18:40 IST

ಹೊಸದಿಲ್ಲಿ: ಬಂಗಾಳಕೊಲ್ಲಿಯ ಭೀಕರ ಚಂಡಮಾರುತಗಳಲ್ಲೊಂದಾದ ‘ಅಂಫಾನ್’ ಇಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು, 110-120 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ. ‘ಅಂಫಾನ್’ ತೀವ್ರತೆಗೆ ಇಬ್ಬರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಶೆಡ್ ಒಂದು ಬಿದ್ದ ಪರಿಣಾಮ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಭದ್ರಕ್ ಮತ್ತು ಕೇಂದ್ರಪಾರದಲ್ಲಿ ಇಬ್ಬರು ಮೃತಪಟ್ಟಿದ್ದಾಗಿ ಮಾಹಿತಿ ಲಭಿಸಿದೆ.

ಪ.ಬಂಗಾಳದಲ್ಲಿ ಐದು ಲಕ್ಷ ಮತ್ತು ಒಡಿಶಾದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎನ್‌ಡಿಆರ್ ಎಫ್ ಮುಖ್ಯಸ್ಥ ಎಸ್.ಎನ್.ಪ್ರಧಾನ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಪ.ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ಉತ್ತರ 24 ಪರಗಣಗಳ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಹೌರಾ,ಕೋಲ್ಕತಾ ಮತ್ತು ಹೂಗ್ಲಿಗಳಲ್ಲಿ ಪ್ರತಿ ಗಂಟೆಗೆ 110ರಿಂದ 120 ಕಿ.ಮೀ.ವೇಗದ ಗಾಳಿ ಬೀಸುತ್ತಿದ್ದು,ಹಲವಾರು ಮರಗಳು,ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಂಗಳವಾರ ಅಂಫಾನ್ ‘ಸೂಪರ್ ಚಂಡಮಾರುತ’ ಸ್ಥಿತಿಯಿಂದ ‘ಅತ್ಯಂತ ತೀವ್ರ ಚಂಡಮಾರುತ ’ವಾಗಿ ದುರ್ಬಲಗೊಂಡಿದ್ದು,ಭಾರತೀಯ ಕರಾವಳಿಯತ್ತ ಮುಂದುರಿಯುತ್ತಿದ್ದಂತೆ ಒಡಿಶಾ ಮತ್ತು ಪ.ಬಂಗಾಳಗಳಲ್ಲಿ ಭಾರೀ ಗಾಳಿಮಳೆಗೆ ಕಾರಣವಾಗಿತ್ತು.

 ದಾಖಲೆಗಳ ನಿರ್ವಹಣೆ ಆರಂಭಗೊಂಡಾಗಿನಿಂದ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಕೇವಲ ಎರಡನೇ ಸೂಪರ್ ಸೈಕ್ಲೋನ್ ಆಗಿರುವ ಅಂಫಾನ್‌ನ ಬಿಂಬಿತ ವಿನಾಶ ಮಾರ್ಗದಲ್ಲಿಯ ತಗ್ಗುಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಅಧಿಕಾರಿಗಳು ಹೆಣಗಾಡುವಂತಾಗಿತ್ತು. ಉಭಯ ರಾಜ್ಯಗಳಲ್ಲಿ ಕೊರೋನ ವೈರಸ್ ಹರಡುವಿಕೆ ತೀವ್ರಗೊಂಡಿರುವುದರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕಾಗಿದ್ದು ಅವರ ಕೆಲಸವನ್ನು ಇನ್ನಷ್ಟು ಕಠಿಣವಾಗಿಸಿತ್ತು.

ಚಂಡಮಾರುತದಿಂದಾಗಿ ಹಲವೆಡೆಗಳಲ್ಲಿ ವಿದ್ಯುತ್ ಸಂಪರ್ಕ ಮತ್ತು ದೂರಸಂಪರ್ಕ ಕಡಿತಗೊಂಡಿವೆ.

ಕೊರೋನ ವೈರಸ್ ವಿರುದ್ಧ ಹೋರಾಟದ ನಡುವೆ ಈ ಚಂಡಮಾರುತವು ದೇಶಕ್ಕೆ ಇಮ್ಮಡಿ ಸವಾಲು ಆಗಿದೆ ಎಂದ ಪ್ರಧಾನ, 41 ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ನಾವು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕಿದೆ ಎಂದರು.

 ಕೋಲ್ಕತಾ ವಿಮಾನ ನಿಲ್ದಾಣವನ್ನು ಗುರುವಾರ ಬೆಳಿಗ್ಗೆಯವರೆಗೆ ಮುಚ್ಚಲಾಗಿದೆ. ಬಂಗಾಳದ ಏಳು ಜಿಲ್ಲೆಗಳು ಚಂಡಮಾರುತದ ನೇರ ಪರಿಣಾಮಕ್ಕೆ ಗುರಿಯಾಗಿದ್ದು ಕೆಲವು ಕಡೆಗಳಲ್ಲಿ ಐದು ಮೀಟರ್‌ಗೂ ಎತ್ತರದ ಅಲೆಗಳು ಸಮುದ್ರ ತೀರವನ್ನು ಅಪ್ಪಳಿಸುತ್ತಿವೆ. ಪರಿಸ್ಥಿತಿಯ ಮೇಲೆ ನಿಗಾಯಿರಿಸಲು ಬುಧವಾರ ರಾತ್ರಿಯಿಡೀ ಕಂಟ್ರೋಲ್ ರೂಮಿನಲ್ಲಿ ಕಳೆಯಲು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News