ಬೇಕಾದರೆ ಬಸ್‌ಗಳ ಮೇಲೆ ಬಿಜೆಪಿ ಬಾವುಟ ಹಾಕಿ, ಆದರೆ ವಲಸೆ ಕಾರ್ಮಿಕರು ಹೋಗಲು ಬಿಡಿ

Update: 2020-05-20 14:08 GMT

ಹೊಸದಿಲ್ಲಿ,ಮೇ 20: ವಲಸೆ ಕಾರ್ಮಿಕರನ್ನು ಸಾಗಿಸಲು ಕಾಂಗ್ರೆಸ್ ವ್ಯವಸ್ಥೆ ಮಾಡಿರುವ ಬಸ್‌ಗಳಿಗೆ ಸಂಬಂಧಿಸಿದಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಆದಿತ್ಯನಾಥ ನೇತೃತ್ವದ ಸರಕಾರದ ನಡುವಿನ ಝಟಾಪಟಿ ಮುಂದುವರಿದಿದೆ. ಬಸ್‌ಗಳು ಮಂಗಳವಾರದಿಂದಲೂ ಕಾಯುತ್ತಿವೆ. ಬೇಕಾದರೆ ಬಿಜೆಪಿಯ ಬಾವುಟಗಳನ್ನು ಈ ಬಸ್‌ಗಳ ಮೇಲೆ ಹಾಕಿಕೊಳ್ಳಿ, ಆದರೆ ಅವು ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಲು ಅವಕಾಶ ನೀಡಿ ಎಂದು ಪ್ರಿಯಾಂಕಾ ಬುಧವಾರ ಸರಕಾರವನ್ನು ಆಗ್ರಹಿಸಿದ್ದಾರೆ.

  ವಲಸೆ ಕಾರ್ಮಿಕರನ್ನು ಸಾಗಿಸಲು ಕಾಂಗ್ರೆಸ್ ವ್ಯವಸ್ಥೆ ಮಾಡಿರುವ ಬಸ್‌ಗಳಿಗೆ ಸಂಬಂಧಿಸಿದಂತೆ ಪಕ್ಷ ಮತ್ತು ಸರಕಾರದ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಆದಿತ್ಯನಾಥ್ ಸರಕಾರವು ಈ ಬಸ್‌ಗಳು ರಾಜ್ಯವನ್ನು ಪ್ರವೇಶಿಸಲು ಅವಕಾಶ ನೀಡದೆ ಅವುಗಳನ್ನು ಗಡಿಯ ಬಳಿಯೇ ನಿಲ್ಲಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದರೆ,ಈ ವಾಹನಗಳು ಸುಸ್ಥಿತಿಯಲ್ಲಿಲ್ಲ,ದಾಖಲೆಗಳು ಸರಿಯಿಲ್ಲ. ಅವುಗಳಲ್ಲಿ ಕೆಲವು ಆಟೊ,ಆ್ಯಂಬುಲೆನ್ಸ್ ಮತ್ತು ಲಾರಿಗಳಾಗಿವೆ ಎಂದಿರುವ ಸರಕಾರವು ಕಾಂಗ್ರೆಸ್‌ನ ಉದ್ದೇಶವನ್ನು ಪ್ರಶ್ನಿಸಿದೆ.

 ಎಲ್ಲ ದಾಖಲೆಗಳು ಸರಿಯಿರುವ ಕನಿಷ್ಠ 879 ವಾಹನಗಳಾದರೂ ವಲಸೆ ಕಾರ್ಮಿಕರನ್ನು ಸಾಗಿಸಲು ಅನುಮತಿ ನೀಡಿ ಎಂದು ಪ್ರಿಯಾಂಕಾ ಮಂಗಳವಾರವೂ ಟ್ವೀಟ್‌ನಲ್ಲಿ ಉ.ಪ್ರದೇಶವನ್ನು ಆಗ್ರಹಿಸಿದ್ದರು. ತನ್ನ ಪಕ್ಷವು ಇನ್ನೂ 200 ಬಸ್‌ಗಳನ್ನು ವ್ಯವಸ್ಥೆ ಮಾಡಲಿದೆ ಎಂದೂ ಅವರು ತಿಳಿಸಿದ್ದರು.

ಬುಧವಾರ ಬೆಳಿಗ್ಗೆ ಧರಣಿ ನಡೆಸಿ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ತನ್ನ ಪಕ್ಷವು ವ್ಯವಸ್ಥೆ ಮಾಡಿರುವ ಬಸ್‌ಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ ಕುಮಾರ ಲಲ್ಲು ಅವರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News