10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಲಾಕ್‌ಡೌನ್ ವಿನಾಯಿತಿ

Update: 2020-05-20 16:04 GMT

ಹೊಸದಿಲ್ಲಿ,ಮೇ 20: ಬೋರ್ಡ್ ಪರೀಕ್ಷೆಗಳಿಗಾಗಿ ಲಾಕ್‌ಡೌನ್ ಕ್ರಮಗಳಿಂದ ವಿನಾಯಿತಿ ನೀಡಲಾಗಿದೆ ಮತ್ತು ಆಯಾ ರಾಜ್ಯ ಸರಕಾರಗಳು ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಿವೆ ಎಂದು ಗೃಹಸಚಿವ ಅಮಿತ್ ಶಾ ಅವರು ಬುಧವಾರ ತಿಳಿಸಿದ್ದಾರೆ.

ಭಾರೀ ಸಂಖ್ಯೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಪರಿಗಣಿಸಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಲಾಕ್‌ಡೌನ್ ಕ್ರಮಗಳಿಂದ ವಿನಾಯಿತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಾ ಟ್ವೀಟಿಸಿದ್ದಾರೆ.

ಥರ್ಮಲ್ ಸ್ಕ್ರೀನಿಂಗ್, ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ, ಹ್ಯಾಂಡ್ ಸ್ಯಾನಿಟೈಸರ್‌ಗಳ ಬಳಕೆ ಮತ್ತು ಮುಖಕ್ಕೆ ಮಾಸ್ಕ್ ಧಾರಣೆ ಇತ್ಯಾದಿಗಳನ್ನು ಕಡ್ಡಾಯಗೊಳಿಸಲಾಗುವುದು. ಪರೀಕ್ಷೆಗಳನ್ನು ಬೇರೆ ಬೇರೆ ಸಮಯಗಳಲ್ಲಿ ನಡೆಸಬೇಕು. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ಮತ್ತು ವಾಪಸ್ ಒಯ್ಯಲು ವಿಶೇಷ ಬಸ್‌ಗಳನ್ನು ರಾಜ್ಯ ಸರಕಾರಗಳು ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಶಾ ತಿಳಿಸಿದ್ದಾರೆ.

ಕಂಟೈನ್ಮೆಂಟ್ ಝೋನ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದೂ ಸರಕಾರವು ತಿಳಿಸಿದೆ.

10 ಮತ್ತು 12ನೇ ತರಗತಿಗಳ ಬಾಕಿಯುಳಿದಿರುವ 29 ಪರೀಕ್ಷೆಗಳನ್ನು ಜು.1 ಮತ್ತು ಜು.15ರ ನಡುವೆ ನಡೆಸಲಾಗುವುದು ಎಂದು ಸಿಬಿಎಸ್‌ಇ ಸೋಮವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News