ವಿಶಾಖಪಟ್ಟಣ ಗ್ಯಾಸ್ ದುರಂತ: ಕ್ಷಮೆ ಕೋರಿದ ಎಲ್‌ಜಿ ಸಂಸ್ಥೆಯ ಅಧ್ಯಕ್ಷ

Update: 2020-05-20 16:21 GMT

ಹೊಸದಿಲ್ಲಿ, ಮೇ 20: ಭಾರತದ ವಿಶಾಖಪಟ್ಟಣ ಸೇರಿದಂತೆ ತಮ್ಮ ಸಂಸ್ಥೆಯ ಎರಡು ಫ್ಯಾಕ್ಟರಿಗಳಲ್ಲಿ ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ಎರಡು ಮಾರಕ ದುರಂತ ಪ್ರಕರಣಗಳ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಮೂಲದ ಎಲ್‌ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬುಧವಾರ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕೊರಿಯಾದ ನಾಲ್ಕನೇ ಬೃಹತ್ ಉದ್ಯಮ ಸಂಸ್ಥೆಯಾಗಿರುವ ಎಲ್‌ಜಿ ಸಮೂಹ ಸಂಸ್ಥೆಯ ಸಹಸಂಸ್ಥೆ, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಎಲ್‌ಜಿ ಪಾಲಿಮರ್ಸ್ ಕೆಮಿಕಲ್ ಪ್ಲಾಂಟ್‌ನಲ್ಲಿ ಮೇ 7ರಂದು ವಿಷಾನಿಲ ಸೋರಿಕೆಯಾಗಿ 12 ಸ್ಥಳೀಯರು ಮೃತಪಟ್ಟು 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ದಕ್ಷಿಣಕೊರಿಯಾದ ನೈಋತ್ಯದ ನಗರ ಸಿಸಾನ್‌ನಲ್ಲಿರುವ ಎಲ್‌ಜಿ ಚೆಮ್ ಪ್ಲಾಂಟ್‌ನಲ್ಲಿ ಮಂಗಳವಾರ ಸಂಭವಿಸಿದ ಅನಿಲ ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.

 ಈ ಎರಡೂ ಘಟನೆಗಳಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಕುಟುಂಬದವರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಹಲವು ಜನರಲ್ಲಿ ಭೀತಿ ಮತ್ತು ಆತಂಕ ಮೂಡಿಸಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ. ಈ ಎರಡೂ ದುರಂತಗಳಿಗೂ ಸಂಸ್ಥೆಯ ಆಡಳಿತ ವರ್ಗ ಜವಾಬ್ದಾರಿಯಾಗಿದೆ ಎಂದು ಎಲ್‌ಜಿ ಸಮೂಹ ಸಂಸ್ಥೆಯ ಅಧ್ಯಕ್ಷ ಕೂಗ್ವಾಂಗ್-ಮೊ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News