ಕೋವಿಡ್-19ರ ವಿರುದ್ಧ ಹೋರಾಟದಲ್ಲಿ ಗೆದ್ದ ನಾಲ್ಕು ತಿಂಗಳ ಬಾಲೆ

Update: 2020-05-20 16:47 GMT

ಭೋಪಾಲ(ಮ.ಪ್ರ),ಮೇ 20: ಹನ್ನೆರಡು ದಿನಗಳ ಹಸುಗೂಸೊಂದು ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಇದೀಗ ನಾಲ್ಕು ತಿಂಗಳು ಪ್ರಾಯದ ಹೆಣ್ಣುಮಗುವೊಂದು ಈ ಮಾರಣಾಂತಿಕ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದು, ಮಂಗಳವಾರ ಇಲ್ಲಿಯ ಏಮ್ಸ್‌ನಿಂದ ಮನೆಗೆ ಮರಳಿದ್ದಾಳೆ. ಬಾಲಕಿಯ ತಂದೆ ಏಮ್ಸ್‌ನಲ್ಲಿ ನರ್ಸ್ ಆಗಿದ್ದಾರೆ. ಏಳರ ಹರೆಯದ ಇನ್ನೋರ್ವ ಬಾಲಕಿಯೂ ಇದೇ ಆಸ್ಪತ್ರೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡಿದ್ದು,ಆಕೆಯನ್ನೂ ಮಂಗಳವಾರವೇ ಬಿಡುಗಡೆಗೊಳಿಸಲಾಗಿದೆ.

ಏಮ್ಸ್-ಭೋಪಾಲ ನಿರ್ದೇಶಕ ಪ್ರೊ.ಸರ್ಮನ್ ಸಿಂಗ್ ಅವರು ಆಸ್ಪತ್ರೆಯ ಸಿಬ್ಬಂದಿಗಳ ಪರವಾಗಿ ಈ ಎಳೆಯ ಮಕ್ಕಳಿಗೆ ಕಾಣಿಕೆಗಳನ್ನು ನೀಡಿ, ಕೊರೋನ ವೈರಸ್ ಅನ್ನು ಸೋಲಿಸಬಹುದು ಎನ್ನುವ ಸಂದೇಶವನ್ನು ಈ ಮಕ್ಕಳು ಸಾರಲಿದ್ದಾರೆ ಎಂದು ಹಾರೈಸಿದ್ದಾರೆ ಎಂದು ಹೆಚ್ಚುವರಿ ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮಿಪ್ರಸಾದ ತಿಳಿಸಿದರು.

 ಏಮ್ಸ್‌ಗೆ ಈವರೆಗೆ 149 ಕೊರೋನ ವೈರಸ್ ರೋಗಿಗಳು ದಾಖಲಾಗಿದ್ದು,ಈ ಪೈಕಿ 70 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಂಭತ್ತು ರೋಗಿಗಳು ಮೃತ ಪಟ್ಟಿದ್ದು,ಈ ಪೈಕಿ ಓರ್ವರನ್ನು ಮೃತಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು ಎಂದರು.

ಎ.7ರಂದು ಇಲ್ಲಿಯ ಸರಕಾರಿ ಆಸ್ಪತೆಯಲ್ಲಿ ಜನಿಸಿದ್ದ ಹೆಣ್ಣುಮಗುವಿಗೆ 12 ದಿನಗಳಾಗಿದ್ದಾಗ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು,ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ರೋಗದಿಂದ ಚೇತರಿಸಿಕೊಂಡಿದ್ದ ಮಗುವನ್ನು ಮೇ 2ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು. ಸರಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆಯಲ್ಲಿ ನಂತರ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು,ಬಹುಶಃ ಈಕೆಯಿಂದ ಮಗುವಿಗೆ ಸೋಂಕು ಹರಡಿತ್ತೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News