ಕೊರೋನ ಟೆಸ್ಟಿಂಗ್ ಕಿಟ್‍ ಗಾಗಿ ಹಣ ಸಂಗ್ರಹ: ತಮ್ಮ ಪ್ರಶಸ್ತಿಗಳನ್ನು ಹರಾಜು ಹಾಕಿದ ಅನುರಾಗ್ ಕಶ್ಯಪ್, ಕುನಾಲ್ ಕಾಮ್ರಾ

Update: 2020-05-21 13:09 GMT

ಹೊಸದಿಲ್ಲಿ: ಬಾಲಿವುಡ್ ಚಿತ್ರ ನಿರ್ದೇಶಕರುಗಳಾದ ಅನುರಾಗ್ ಕಶ್ಯಪ್ ಹಾಗೂ ನೀರಜ್ ಘಯ್‍ವನ್, ಕಾಮಿಡಿಯನ್ ಕುನಾಲ್ ಕಾಮ್ರಾ, ಗಾಯಕ ಹಾಗೂ ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ ಇವರುಗಳು ಕೋವಿಡ್-19 ಟೆಸ್ಟಿಂಗ್ ಕಿಟ್‍ ಗಳಿಗಾಗಿ ಹಣ ಸಂಗ್ರಹಿಸಲು ವಿಶಿಷ್ಟ ವಿಧಾನಗಳನ್ನು ಅನುಸರಿಸಲಿದ್ದಾರೆ.

ಮೇ 20ರಂದು ಟ್ವೀಟ್ ಮಾಡಿದ ಕುನಾಲ್ ಕಾಮ್ರಾ “ನಮಗೆ ಹೆಚ್ಚು ಆರ್‍ಟಿ-ಪಿಸಿಆರ್ ಕಿಟ್‍ಗಳ ಅಗತ್ಯವಿದೆ. ಮೈಲ್ಯಾಬ್ ಎಂಬ ಭಾರತೀಯ ಕಂಪೆನಿ ಯಾವುದೇ ಲಾಭ ಪಡೆಯದೆ ಈ ಕಿಟ್ ಮಾಡುತ್ತಿದೆ. ರೂ 1,34,000 ಬೆಲೆಯ ಕಿಟ್ ಅನ್ನು ನಾನು ನನ್ನ ನಗರಕ್ಕಾಗಿ ಪಡೆದುಕೊಂಡಿದ್ದೇನೆ. ನೀವು ಕೂಡ ಹಾಗೆಯೇ ಮಾಡಬಹುದು. ಅತ್ಯಧಿಕ ಬೆಲೆಗೆ ಬಿಡ್ ಮಾಡುವವರಿಗೆ ನನ್ನ ಯುಟ್ಯೂಬ್ ಬಟನ್ ಅನ್ನು ನೀಡುತ್ತೇನೆ'' ಎಂದು 10 ಕೋಟಿ ಚಂದಾದಾರರ ಸಂಖ್ಯೆ ದಾಟಿದ್ದಕ್ಕಾಗಿ ತಮಗೆ ದೊರೆತ ಯುಟ್ಯೂಬ್ ಪ್ರಶಸ್ತಿಯ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.

“ಎಲ್ಲಾ ಕಲಾವಿದರು ತಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನು ಇಂತಹ ಕಷ್ಟಕರ ಸನ್ನಿವೇಶದಲ್ಲಿ ದಾನ ಮಾಡಬೇಕು” ಎಂದು ಕಾಮ್ರಾ ಕರೆ ನೀಡಿದ ಬೆನ್ನಿಗೇ ಟ್ವೀಟ್ ಮಾಡಿದ ಅನುರಾಗ್ ಕಷ್ಯಪ್ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ವಸ್ಸೇಪುರ್'ಗಾಗಿ ಪಡೆದ ಫಿಲ್ಮ್‍ಫೇರ್ ವಿಮರ್ಶಕರ ಪ್ರಶಸ್ತಿಯ ಮೂಲ ಟ್ರೋಫಿಯನ್ನು ಅತ್ಯಧಿಕ ಬೆಲೆಗೆ ಬಿಡ್ ಮಾಡುವವರಿಗೆ ನೀಡುವುದಾಗಿ ತಿಳಿಸಿದರು. ನಿರ್ದೇಶಕ ನೀರಜ್ ಘಯ್‍ವನ್ ಟ್ವೀಟ್ ಮಾಡಿ ತಮ್ಮ  ಪ್ರಶಸ್ತಿಗಳನ್ನೂ ಈ ಕಾರ್ಯಕ್ಕಾಗಿ ಹರಾಜು ಮಾಡುವುದಾಗಿ ಹೇಳಿದ್ದಾರೆ.

ಅತ್ತ ಗಾಯಕ ವಿಶಾಲ್ ದದ್ಲಾನಿ ಅತ್ಯಧಿಕ ಬೆಲೆಗೆ ಬಿಡ್ ಮಾಡುವವರಿಗಾಗಿ ವೈಯಕ್ತಿಕ ವೀಡಿಯೋ ಕಾಲ್ ಹಾಗೂ ತಮ್ಮ ಒಂದು ಹಾಡಿನ ಲೈವ್ ಪರ್ಫಾಮೆನ್ಸ್ ನೀಡುವುದಾಗಿ ಹೇಳಿಕೊಂಡಿದ್ದಾರೆ.

ಕಾಮಿಡಿಯನ್ ವರುಣ್ ಗ್ರೋವರ್ ಆವರು ತಮಗೆ `ಮೋಹ್ ಮೋಹ್ ಕೆ ಧಾಗೆ' ಹಾಡಿನ ಸಾಹಿತ್ಯಕ್ಕಾಗಿ ದೊರೆತ ಟಿಒಐಎಫ್‍ಎ ಟ್ರೋಫಿಯನ್ನು ಹರಾಜು ಹಾಕುವುದಾಗಿ ಹೇಳಿದ್ದಾರೆ.

ಕವಿ ಹಾಗೂ ಚಿತ್ರ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್ ಅವರು ತಮ್ಮ ‘ಇನ್ ಅದರ್ ವಡ್ರ್ಸ್' ಕವನ ಸಂಗ್ರಹದ ಸಹಿ ಹಾಕಿದ ಪ್ರತಿಯನ್ನು ಹರಾಜು ಹಾಕುವುದಾಗಿ ಹೇಳಿದ್ದಾರೆ.

ಇಲ್ಲಿಯ ತನಕ ಈ ಅಭಿಯಾನ 14,24,849 ರೂ. ಮೊತ್ತ ಸಂಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News