ಎನ್. ರಾಮ್, ಸಿದ್ದಾರ್ಥ್ ವರದರಾಜನ್ ಸಹಿತ ಹಲವು ಪತ್ರಕರ್ತರ ವಿರುದ್ಧದ ಮಾನನಷ್ಟ ಪ್ರಕರಣ ವಜಾಗೊಳಿಸಿದ ಹೈಕೋರ್ಟ್

Update: 2020-05-21 17:54 GMT

ಚೆನ್ನೈ, ಮೇ 21: ಎನ್ ರಾಮ್, ಸಿದ್ದಾರ್ಥ್ ವರದರಾಜನ್, ನಕ್ಕೀರನ್ ಗೋಪಾಲನ್ ಸಹಿತ ಹಲವು ಸಂಪಾದಕರು ಮತ್ತು ಪತ್ರಕರ್ತರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಜೊತೆಗೆ, ಮಾಧ್ಯಮದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಹೆತ್ತವರು ಮಕ್ಕಳೊಂದಿಗೆ ವ್ಯವಹರಿಸುವಂತೆ ರಾಜ್ಯಸರಕಾರಗಳು ಮಾನನಷ್ಟ ಮೊಕದ್ದಮೆ ಪ್ರಕರಣಗಳನ್ನು ನಿರ್ವಹಿಸಬೇಕು. ರಾಜ್ಯದ ಪ್ರಜೆಗಳಿಗೆ ಸರಕಾರ ಹೆತ್ತವರ ಸ್ಥಾನದಲ್ಲಿದೆ. ಕೆಲವು ಮಕ್ಕಳಿಂದ ಹೆತ್ತವರಿಗೆ ಅಪಮಾನವಾಗುವುದು ಸಹಜ. ಆದರೆ ಅವರು ಅಪಮಾನವನ್ನು ಸಹಿಸಿಕೊಂಡು ಎಲ್ಲಾ ಮಕ್ಕಳನ್ನೂ ಸಮಾನವಾಗಿ ಕಾಣುವುದಿಲ್ಲವೇ ಎಂದು ನ್ಯಾಯಾಧೀಶ ಅಬ್ದುಲ್ ಖುದ್ದೋಸ್ ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಮಾನನಷ್ಟ ಮೊಕದ್ದಮೆಯನ್ನು ಮಿತವಾಗಿ ಬಳಕೆ ಮಾಡಬೇಕು. ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ಸಾಕಷ್ಟು ನಿಂದಾತ್ಮಕ ಬರಹ, ಲೇಖನ, ಮಾತುಗಳು ದಿನಾ ಕೇಳಿಬರುತ್ತಿರುವ ಈ ಕಾಲದಲ್ಲಿ ಆವೇಗದಿಂದ ಮಾನನಷ್ಟ ಮೊಕದ್ದಮೆ ದಾಖಲಿಸುವುದು ತರವಲ್ಲ ಎಂದು ತಮ್ಮ 152 ಪುಟದ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದಾರೆ.

ಮಾಧ್ಯಮಗಳಿಗೂ ಕಿವಿಮಾತು ಹೇಳಿರುವ ನ್ಯಾಯಾಧೀಶರು, “ನಮ್ಮ ದೇಶ ಯಾವತ್ತೂ ಮಾಧ್ಯಮದ ಪಾತ್ರಕ್ಕೆ, ಸ್ವತಂತ್ರ ಮತ್ತು ನೈಜ ವರದಿಗಾರಿಕೆಗೆ ಗೌರವ ನೀಡಿದೆ. ಆದರೆ ಈಗ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳಲ್ಲಿ ಕಂಡುಬರುವಂತೆ ಮಾಧ್ಯಮಗಳೂ ಅಧೋಗತಿಗೆ ಇಳಿಯುತ್ತಿರುವಂತೆ ಭಾಸವಾಗುತ್ತಿದೆ. ಮಾಧ್ಯಮಗಳು ತಮ್ಮೊಳಗೆ ಆತ್ಮಾವಲೋಕನ ಮಾಡಿಕೊಂಡು ಮುಂದಿನ ತಲೆಮಾರಿನ ಹಿತದೃಷ್ಟಿಯಿಂದ ದೇಶದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.

2012ರಲ್ಲಿ ಈ ಮಾನನಷ್ಟ ಪ್ರಕರಣವನ್ನು ಸರಕಾರ ದಾಖಲಿಸಿತ್ತು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾರ ವಿರುದ್ಧ ಪತ್ರಿಕೆಗಳಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ, ಸರಕಾರವು ಪತ್ರಕರ್ತರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಸಂಪಾದಕರು ಮತ್ತು ಪತ್ರಕರ್ತರು ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News