ಜೂನ್ 1ರಿಂದ ರೈಲು ಸಂಚಾರ ಆರಂಭ: ಗೋಯಲ್

Update: 2020-05-21 18:01 GMT

ಹೊಸದಿಲ್ಲಿ, ಮೇ 21: ಜೂನ್ 1ರಿಂದ 200 ಪ್ರಯಾಣಿಕರ ರೈಲುಗಳ ಸಂಚಾರ ಪುನರಾರಂಭವಾಗಲಿದೆ. ಇದಕ್ಕೆ ಮೇ 22ರಿಂದ (ಶುಕ್ರವಾರ)ಆನ್‌ಲೈನ್ ಮೂಲಕ ಹಾಗೂ ಸುಮಾರು 1.7 ಲಕ್ಷದಷ್ಟಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಟಿಕೆಟ್ ಬುಕಿಂಗ್ ನಡೆಸಬಹುದು ಎಂದು ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.

ಕಂಪ್ಯೂಟರ್ ಮತ್ತು ಇಂಟರ್‌ನೆಟ್ ವ್ಯವಸ್ಥೆ ಅಲ್ಪಪ್ರಮಾಣದಲ್ಲಿ ಇರುವ ಗ್ರಾಮೀಣ ಮತ್ತು ದೂರದ ಊರುಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸರಕಾರ ಆರಂಭಿಸಿದೆ. ಇವುಗಳ ಮೂಲಕ ಸರಕಾರದ ಇ-ಸೇವೆಗಳು ಜನಸಾಮಾನ್ಯರಿಗೆ ಲಭ್ಯವಾಗುತ್ತದೆ.

ಜೂನ್ 1ರಿಂದ ಆರಂಭವಾಗಲಿರುವ ರೈಲುಗಳಲ್ಲಿ 73 ಮೈಲ್/ಎಕ್ಸ್‌ಪ್ರೆಸ್ ರೈಲುಗಳು, 17 ಜನಶತಾಬ್ಧಿ ರೈಲುಗಳು ಹಾಗೂ ದುರಂತೊ ರೈಲುಗಳು ಸೇರಿವೆ. ಮುಂದಿನ ಎರಡು- ಮೂರು ದಿನಗಳಲ್ಲಿ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕಿಂಗ್ ಆರಂಭಿಸಲಾಗುವುದು. ಬುಕಿಂಗ್ ಮಾಡಬಹುದಾದ ಸ್ಟೇಷನ್‌ಗಳನ್ನು ಗುರುತಿಸಿ ಅಲ್ಲಿ ಟಿಕೆಟ್ ಕೌಂಟರ್‌ಗಳನ್ನು ಆರಂಭಿಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಲವು ವಾರಗಳ ಲಾಕ್‌ಡೌನ್ ಬಳಿಕ ಇದೀಗ ದೇಶವನ್ನು ಸಹಜ ಸ್ಥಿತಿಯತ್ತ ಸಾಗಿಸುವ ಅಗತ್ಯವಿದೆ. ಆದ್ದರಿಂದ ಶೀಘ್ರದಲ್ಲೇ ಇನ್ನಷ್ಟು ರೈಲುಗಳ ಸಂಚಾರದ ಬಗ್ಗೆ ಘೋಷಿಸಲಾಗುವುದು ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರರೊಂದಿಗೆ ನಡೆಸಿದ ಮಾತುಕತೆ ಸಂದರ್ಭ ಗೋಯಲ್ ಹೇಳಿದ್ದಾರೆ.

ವಲಸೆ ಕಾರ್ಮಿಕರು ಹಾಗೂ ಇತರರನ್ನು ಅವರ ಊರಿಗೆ ಕರೆದೊಯ್ಯುವ ವಿಶೇಷ ಶ್ರಮಿಕ್ ರೈಲುಗಳ ಪ್ರಯಾಣಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರೈಲ್ವೇ ಇಲಾಖೆಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದ ಗೋಯಲ್, ಪಶ್ಚಿಮಬಂಗಾಳ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳು ಅಸಹಾಕಾರ ತೋರಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News