ಗಡಿಯಲ್ಲಿ ಗಸ್ತು ತಿರುಗುವುದಕ್ಕೆ ಚೀನಾದಿಂದ ಅಡ್ಡಿ: ಭಾರತ ಆರೋಪ

Update: 2020-05-21 18:14 GMT

ಹೊಸದಿಲ್ಲಿ,ಮೇ 21: ಚೀನಾದ ಗಡಿಯನ್ನು ತಾನು ಅತಿಕ್ರಮಣ ಮಾಡುತ್ತಿದ್ದೇನೆಂಬ ಬೀಜಿಂಗ್‌ನ ಆರೋಪವನ್ನು ಭಾರತವು ಗುರುವಾರ ಬಲವಾಗಿ ನಿರಾಕರಿಸಿದೆ. ಬದಲಾಗಿ ಚೀನಾವು ಲಡಾಕ್ ಹಾಗೂ ಸಿಕ್ಕಿಂನಲ್ಲಿನ ನೈಜ ಗಡಿನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಸಾಮಾನ್ಯ ಗಸ್ತು ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದೆ ಎಂದು ದೂರಿದೆ.

 ಭಾರತದ ವಿದೇಶಾಂಗ ಸಚಿವಾಲಯವು ಇಂದು ಈ ಬಗ್ಗೆ ಹೇಳಿಕೆ ನೀಡಿ, ಭಾರತದ ಎಲ್ಲಾ ಚಟುವಟಿಕೆಗಳನ್ನು ಅದರದ್ದೇ ಆದ ಗಡಿಯೊಳಗೆ ನಡೆಸಲಾಗುತ್ತದೆ ಹಾಗೂ ಗಡಿನಿರ್ವಹಣೆಯಲ್ಲಿ ಭಾರತವು ಅತ್ಯಂತ ಜವಾಬ್ದಾರಿಯುತವಾದ ನಿಲುವನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ. ಇದೇ ವೇಳೆ ತನ್ನ ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತವು ಗಾಢವಾದ ಬದ್ಧತೆಯನ್ನು ಹೊಂದಿದೆಯೆಂದು ಹೇಳಿದೆ.

 ಲಡಾಖ್ ಹಾಗೂ ಉತ್ತರ ಸಿಕ್ಕಿಂನ ಹಲವು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರತ ಹಾಗೂ ಚೀನಾಗಳೆರಡೂ ತಮ್ಮ ಗಡಿಗಳಲ್ಲಿ ಸೇನಾಬಲವನ್ನು ಹೆಚ್ಚುತ್ತಿರುವುದು, ಎರಡೂ ಕಡೆಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರ ಸೂಚನೆಯಾಗಿದೆ ಎಂದು ವರದಿಗಳು ತಿಳಿಸಿವೆ.

 ತನಗೆ ಸೇರಿದ ಪ್ರಾಂತದೊಳಗೆ ಭಾರತವು ಅತಿಕ್ರಮಣ ನಡೆಸುತ್ತಿದೆಯೆಂದು ಚೀನಾವು ಮಂಗಳವಾರ ಆಪಾದಿಸಿತ್ತು ಹಾಗೂ ಸಿಕ್ಕಿಂ ಹಾಗೂ ಲಡಾಖ್‌ನಲ್ಲಿರುವ ನೈಜ ಗಡಿನಿಯಂತ್ರಣ ರೇಖೆಯ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News