ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅಪೌಷ್ಟಿಕತೆ !

Update: 2020-05-22 04:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 21: ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವುದು ಒಂದಡೆಯಾದರೆ ಇನ್ನೊಂದೆಡೆ ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅಪೌಷ್ಟಿಕತೆಯಿಂದ ರಾಜ್ಯದ ಐದು ಲಕ್ಷಕ್ಕೂ ಅಧಿಕ ಮಕ್ಕಳು ನರಳುತ್ತಿದ್ದು, ಈ ಪೈಕಿ 2 ತಿಂಗಳಲ್ಲಿ 185 ಮಕ್ಕಳು ಅಪೌಷ್ಟಿಕತೆಯಿಂದ ಮೃತಪಟ್ಟಿರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ ಅಂಶ ಬಹಿರಂಗ ಪಡಿಸಿದೆ.

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆಗಿಂತ ಅಪೌಷ್ಟಿಕತೆಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ರಾಜ್ಯದಲ್ಲಿ ತೂಕ ಮತ್ತು ಎತ್ತರ ಕಡಿಮೆ ಇರುವ ಮಕ್ಕಳು 5 ಲಕ್ಷ ಗಡಿ ದಾಟಿದ್ದು, ಇದು ಹೀಗೆಯೇ ಮುಂದುವರಿದರೆ ಅಪೌಷ್ಟಿಕತೆಯಿಂದ ಒಂದು ಪೀಳಿಗೆಗೆ ಕುತ್ತು ಬರುವುದರಲ್ಲಿ ಅನುಮಾನವೇ ಇಲ್ಲ.

ಕೊರೋನ ಲಾಕ್ಡೌನ್ ಸಮಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ತಾಯಿಯ ಮಡಿಲಲ್ಲಿ ಮಕ್ಕಳು ವಿಲ ವಿಲ ಒದ್ದಾಡಿ ಪ್ರಾಣ ಬಿಡುತ್ತಿದ್ದಾರೆ. ಇದು ರಾಜ್ಯ ಸರಕಾರ ಅಪೌಷ್ಟಿಕತೆ ನಿವಾರಣೆಯಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿಯಾಗಿದೆ.

ಅಪೌಷ್ಟಿಕತೆಗೆ ಮಾನದಂಡವೇನು?: 6 ತಿಂಗಳಿಂದ 5 ವರ್ಷದೊಳಗಿನ ಮಕ್ಕಳ ತೂಕ, ಎತ್ತರ ಅಳತೆ ಮಾಡುವುದರಿಂದ ಮಕ್ಕಳ ಅಪೌಷ್ಟಿಕತೆ ನಿರ್ಧಾರವಾಗುತ್ತದೆ. ವಯಸ್ಸಿಗೆ ತಕ್ಕ ತೂಕ, ವಯಸ್ಸಿಗೆ ತಕ್ಕ ಎತ್ತರ, ಎತ್ತರಕ್ಕೆ ತಕ್ಕ ತೂಕ, ತೋಳಿನ ಸುತ್ತಳತೆಯನ್ನು ಆಧಾರವಾಗಿ ಇಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ವರದಿ ನೀಡುತ್ತಾರೆ. 

ಉತ್ತರ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಹೆಚ್ಚಳ: ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಗುಳೆ ಹೋಗುವುದರಿಂದ ಮಕ್ಕಳು ಊಟಕ್ಕೂ ಪರಡಾಡುವಂತಾಗಿದೆ. ಈ 5 ಜಿಲ್ಲೆಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಅಪೌಷ್ಟಿಕ ಮಕ್ಕಳು?: ಬೆಳಗಾವಿ (68,962), ಹಾವೇರಿ (26,198), ಚಿತ್ರದುರ್ಗ (13,375), ಕೋಲಾರ (4,500), ಬೀದರ್ (27,921), ಬಳ್ಳಾರಿ (45,196), ಚಾಮರಾಜನಗರ (5,798), ಮೈಸೂರು (12,649), ಕೊಡಗು (1,798), ಉಡುಪಿ (1,850), ಮಂಡ್ಯ (5,022), ವಿಜಯಪುರ (26,842), ದಾವಣಗೆರೆ (11,679), ಯಾದಗಿರಿ (23,097), ಬಾಗಲಕೋಟೆ (26,609), ಗದಗ (18,439), ಹಾಸನ (1,983), ತುಮಕೂರು (10,344), ಬೆಂಗಳೂರು ನಗರ (12,599), ಚಿಕ್ಕಮಗಳೂರು (4,128), ಬೆಂಗಳೂರು ಗ್ರಾಮಾಂತರ (1,111), ಕಲಬುರಗಿ (29,144), ಉತ್ತರಕನ್ನಡ (7,134), ರಾಮನಗರ (3,012), ದಕ್ಷಿಣಕನ್ನಡ (2,817) ಸೇರಿದಂತೆ ಒಟ್ಟು 30 ಜಿಲ್ಲೆಗಳಲ್ಲಿ 5 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಇಲಾಖೆ ಸಚಿವರ ಜಿಲ್ಲೆಯಲ್ಲಿಯೇ ಹೆಚ್ಚು...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಿಶಿಕಲಾ ಜೊಲ್ಲೆ ಅವರ ಜಿಲ್ಲೆ ಬೆಳಗಾವಿಯಲ್ಲಿ 68,962 ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಪೌಷ್ಟಿಕತೆ ನಿವಾರಣೆಗೆ ಸರಕಾರ ಹಲವಾರು ಕ್ರಮ ಕೈಗೊಂಡರೂ, ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಯಶಸ್ವಿಯಾಗದಿರುವುದು ಕಂಡು ಬರುತ್ತಿದೆ.

ಕೊರೋನ ಲಾಕ್ಡೌನ್ ಹಿನ್ನೆಲೆ ಏಪ್ರಿಲ್, ಮೇ ತಿಂಗಳು ಮಕ್ಕಳಿಗೆ ತೂಕ, ಎತ್ತರ ಅಳತೆ ಮಾಡಲಾಗಿಲ್ಲ. ಅಪೌಷ್ಟಿಕತೆ ನಿವಾರಣೆಗಾಗಿ ಮಾತೃಪೂರ್ಣ ಯೋಜನೆಯಡಿ  ಗರ್ಭಿಣಿಯರು, ಬಾಣಂತಿಯರಿಗೆ ಹಾಗೂ 6 ತಿಂಗಳಿಂದ 6 ವರ್ಷದ ಮಕ್ಕಳಿಗೂ ಆಹಾರಧಾನ್ಯ ವಿತರಿಸಲಾಗುತ್ತಿದೆ. ಈವರೆಗೆ 48 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸಲಾಗಿದೆ. ಅಪೌಷ್ಟಿಕತೆಯ ನಿವಾರಣೆಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ.
-ಕೆ.ಎ. ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News