ಲಾಕ್‌ಡೌನ್‌ನಿಂದ ಭಾರತಕ್ಕಾಗುವ ಆರ್ಥಿಕ ಹಾನಿ ಗಂಭೀರ ಸ್ವರೂಪದ್ದು: ಮೂಡೀಸ್ ವರದಿ

Update: 2020-05-22 16:33 GMT

ಹೊಸದಿಲ್ಲಿ, ಮೇ 22: ಭಾರತದ ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಾನಿಯು ವ್ಯಾಪಕ ಸ್ವರೂಪದ್ದಾಗಲಿರುವ ಸಾಧ್ಯತೆಯಿದೆ ಎಂದು ಮೂಡೀಸ್ ಇನ್ವೆಸ್ಟರ್ ಸರ್ವಿಸ್ ಶುಕ್ರವಾರ ಹೇಳಿದೆ.

ಇದು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ವ್ಯಾಪಕ ಪರಿಣಾಮಗಳನ್ನುಂಟು ಮಾಡಲಿದೆ ಎಂದು ಅದು ಕೊರೋನ ವೈರಸ್ ಮತ್ತು ಭಾರತ ಕುರಿತ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.

‘ಕೊರೋನ ವೈರಸ್ ಪಿಡುಗಿನ ಆರ್ಥಿಕ ದುಷ್ಪರಿಣಾಮಗಳು ಮಂದ ಉದ್ಯಮ ಚಟುವಟಿಕೆಯೊಂದಿಗೆ ತಳುಕು ಹಾಕಿಕೊಂಡಿರುವ, ಈಗಾಗಲೇ ದುರ್ಬಲಗೊಂಡಿರುವ ಬೇಡಿಕೆಗಳನ್ನು ಇನ್ನಷ್ಟು ಕುಂಠಿತಗೊಳಿಸಲಿವೆ ಮತ್ತು ಇದರಿಂದಾಗಿ 2020-21ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿಯಲ್ಲಿ ತೀವ್ರ ಕುಸಿತವುಂಟಾಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ ’ಎಂದು ಮೂಡೀಸ್‌ನ ಸಹಾಯಕ ಉಪಾಧ್ಯಕ್ಷೆ ಹಾಗೂ ವಿಶ್ಲೇಷಕಿ ಡೆಬೋರಾ ಟಾನ್ ವರದಿಯಲ್ಲಿ ಹೇಳಿದ್ದಾರೆ.

ಕೊರೋನ ವೈರಸ್ ಪಿಡುಗು ದಾಳಿಯಿಡುವ ಮೊದಲೇ ಭಾರತದ ಆರ್ಥಿಕತೆಯು ಕಳೆದ ಆರು ವರ್ಷಗಳಲ್ಲಿಯೇ ನಿಧಾನ ವೇಗದಲ್ಲಿ ಬೆಳೆಯುತ್ತಿತ್ತು.

ಶೂನ್ಯ ಬೆಳವಣಿಗೆಯ ಹಿಂದಿನ ಅಂದಾಜಿಗೆ ಹೋಲಿಸಿದರೆ ಮಾರ್ಚ್ 2021ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ನಿಜವಾದ ಜಿಡಿಪಿಯು ಕುಗ್ಗಲಿದೆ ಎಂದು ಮೂಡೀಸ್ ನಿರೀಕ್ಷಿಸಿದೆ.

2021-2022ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದೂ ಮೂಡೀಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News