ದೆಹಲಿ ಹಿಂಸಾಚಾರ: ಮನೆ, ಸೊತ್ತುಗಳನ್ನು ಕಳೆದುಕೊಂಡು ದೂರು ನೀಡಿದವರನ್ನೇ ಬಂಧಿಸಿದ ಪೊಲೀಸರು !

Update: 2020-05-23 15:48 GMT

ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 24ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ಮೂರು ದಿನಗಳಲ್ಲಿ 53 ಮಂದಿ ಜೀವ ಕಳೆದುಕೊಂಡರು. ಈ ಪೈಕಿ ಬಹುತೇಕ ಮಂದಿ ಮುಸ್ಲಿಮರು. ಇದಾದ ಒಂದು ತಿಂಗಳಲ್ಲಿ ಕೊರೋನ ವೈರಸ್ ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾಯಿತು. ಸಾಮಾನ್ಯ ಜನಜೀವನ ಸ್ತಬ್ಧಗೊಂಡರೂ, ಹಿಂಸಾಚಾರ ಬಗೆಗಿನ ಪೊಲೀಸ್ ತನಿಖೆಗೆ ಯಾವ ಅಡ್ಡಿಯೂ ಆಗಲಿಲ್ಲ.

ಏಪ್ರಿಲ್ 13ರ ವೇಳೆಗೆ ಪೊಲೀಸರು 800ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು ಎಂದು Indian Express ವರದಿ ಮಾಡಿತ್ತು. ಯಾವುದೇ ಪರಿಸ್ಥಿತಿಯಲ್ಲೂ ಪೊಲೀಸರು ಆರೋಪಿಗಳನ್ನು ಬಂಧಿಸಲೇಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಒತ್ತಡ ತಂದಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ ಹಲವು ಮಂದಿ ವಕೀಲರು ಮತ್ತು ಹೋರಾಟಗಾರರು ಹೇಳುವಂತೆ, ಲಾಕ್‍ಡೌನ್ ಕಾರಣದಿಂದಾಗಿ ಪೊಲೀಸ್ ತನಿಖೆಯಲ್ಲಿ ಯಾವುದೇ ಮೇಲ್ವಿಚಾರಣೆ ಇರಲಿಲ್ಲ ಹಾಗೂ ಬಂಧಿತರು ನ್ಯಾಯ ಪಡೆಯಲು ಅವಕಾಶ ಸಿಗಲಿಲ್ಲ. ಮೇ 16ರಂದು ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಸಂಘಟನೆ ‘ದ ಹಿಂದೂ’ ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನದ ಪ್ರಕಾರ, ಹೆಚ್ಚಿನ ದಿಲ್ಲಿ ಹಿಂಸಾಚಾರ ಪ್ರಕರಣಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇರಲಿಲ್ಲ.

ಸುಮಾರು 40 ಎಫ್‍ಐಆರ್‍ಗಳ ವಿಶ್ಲೇಷಣೆಯ ಆಧಾರದಲ್ಲಿ ತಿಳಿದುಬರುವಂತೆ, ಹಿಂದೂ ಆರೋಪಿಗಳ ವಿರುದ್ಧದ ಪ್ರಕರಣ ದುರ್ಬಲಗೊಳಿಸುವ ಮೂಲಕ ಪೊಲೀಸರು ಮುಸ್ಲಿಮರ ವಿರುದ್ಧ ಕೋಮು ಪಕ್ಷಪಾತ ತೋರಿದ್ದರು ಎಂದು ವರದಿ ತಿಳಿಸಿತ್ತು. “ಈ ಗಲಭೆಗೆ ಸಂಬಂಧಿಸಿದ ಎಲ್ಲ ಎಫ್‍ಐಆರ್‍ಗಳಿಗೆ ನ್ಯಾಯ ದೊರಕಬೇಕಾದರೆ ಸಾರ್ವಜನಿಕ ಪರಿಶೀಲನೆಗಾಗಿ ಇವುಗಳನ್ನು ಮುಕ್ತಗೊಳಿಸುವುದು ಅಗತ್ಯ” ಎಂದು ಹೋರಾಟಗಾರರು ಅಭಿಪ್ರಾಯಪಡುತ್ತಾರೆ.

ಅದೇ ದಿನ ದಿಲ್ಲಿ ಪೊಲೀಸರು ಈ ಲೇಖನಕ್ಕೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿ, ‘ಇದು ವಾಸ್ತವವಾಗಿ ಸರಿಯಲ್ಲ’ ಎಂದು ಹೇಳಿತ್ತು. ‘ಹಿಂಸಾಚಾರಕ್ಕೆ ಸಂಬಂಧಿಸಿದ 750ಕ್ಕೂ ಹೆಚ್ಚು ಪ್ರಕರಣಗಳಲ್ಲಿ 1300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಎರಡೂ ಸಮುದಾಯಗಳ ಮಂದಿ ಬಹುತೇಕ ಸಮ ಪ್ರಮಾಣದಲ್ಲಿದ್ದಾರೆ’ ಎಂದು ಸಮರ್ಥಿಸಿಕೊಂಡಿತ್ತು. ಆದರೂ ಇದುವರೆಗೆ ದಿಲ್ಲಿ ಪೊಲೀಸರು ಎಫ್‍ಐಆರ್‍ಗಳನ್ನು ಬಹಿರಂಗಪಡಿಸಿಲ್ಲ.

ಹಿಂಸಾಚಾರದಿಂದ ಹೆಚ್ಚು ಸಂತ್ರಸ್ತರಾದವರು ಮುಸ್ಲಿಮರಾಗಿದ್ದು, ಗಲಭೆಯಲ್ಲಿ ಮೃತಪಟ್ಟ 53 ಮಂದಿಯ ಪೈಕಿ 38 ಮಂದಿ ಮುಸ್ಲಿಮರು. ಆದ್ದರಿಂದ ಪೊಲೀಸರ ಈ ಹೇಳಿಕೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೋರಾಟಗಾರರು ಹೇಳುತ್ತಾರೆ.

ಹಿಂಸೆಯ ಸ್ವರೂಪ

ಚಿಂತಕ, ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಹೇಳುವಂತೆ, ಈಶಾನ್ಯ ದಿಲ್ಲಿಯ ಹಿಂಸಾಚಾರದ ಮೊದಲ ದಿನ ಎರಡೂ ಸಮುದಾಯಗಳು ಹಿಂಸಾಕೃತ್ಯದಲ್ಲಿ ತೊಡಗಿದ್ದವು. ಆದರೆ ಮುಂದಿನ ದಿನಗಳಲ್ಲಿ ಬಹುಸಂಖ್ಯಾತ ಸಮುದಾಯದ ಜನ ಹಾಗೂ ಸಂಘಟನೆ ಕಾರ್ಯಕರ್ತರು, ಸರ್ಕಾರದ ಸಕ್ರಿಯ ರಕ್ಷಣೆ ಮತ್ತು ಬೆಂಬಲದೊಂದಿಗೆ ಮುಸ್ಲಿಂ ನಿವಾಸಿಗಳ ಆಸ್ತಿ ಮತ್ತು ಸಂಘ ಸಂಸ್ಥೆಗಳ ಮೇಲೆ ದಾಳಿ ಮಾಡಿದರು.

“ಗರಿಷ್ಠ ಜೀವಹಾನಿ ಮತ್ತು ಆಸ್ತಿ ನಷ್ಟವಾದದ್ದು ಅಲ್ಪಸಂಖ್ಯಾತ ಸಮುದಾಯಕ್ಕೆ. ವಾಸ್ತವವಾಗಿ ಕೆಲ ಪ್ರಕರಣಗಳನ್ನು ಹೊರತುಪಡಿಸಿದರೆ, ದೇಶ ವಿಭಜನೆಯ ಬಳಿಕ ನಡೆದ ಎಲ್ಲ ಪ್ರಮುಖ ಕೋಮುಗಲಭೆಗಳಲ್ಲೂ ಇದೇ ಸ್ಥಿತಿ” ಎಂದು ಅವರು ವಿವರಿಸುತ್ತಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮೂರು ದಶಕಗಳಲ್ಲೇ ತೀವ್ರ ಎನಿಸುವ ಹಿಂಸಾಚಾರ ನಡೆದ ಮೂರು ತಿಂಗಳ ಬಳಿಕವೂ ಪೊಲೀಸ್ ತನಿಖೆ ಬಗೆಗಿನ ಮಾಹಿತಿ ಸೀಮಿತವಾಗಿದೆ. ಇದರಿಂದಾಗಿ ಯಾವುದೇ ನಿಖರ ನಿರ್ಧಾರಕ್ಕೆ ಬರುವುದು ಕಷ್ಟಸಾಧ್ಯ ಎನಿಸಿದೆ. ಆದರೆ scroll.in ಕೆಲ ಪ್ರಕರಣಗಳನ್ನು ನಿಕಟವಾಗಿ ಪರಿಶೀಲಿಸಿದಾಗ ಪೊಲೀಸರು ಕಳವಳಕಾರಿ ತನಿಖಾ ವಿಧಾನ ಅನುಸರಿಸಿರುವುದು ಕಂಡುಬಂದಿದೆ: ಬಹುತೇಕ ಹಿಂಸಾಚಾರದ ಸಂತಸ್ತರೇ ಪೊಲೀಸರ ವಿಚಾರಣೆಗೆ ಒಳಗಾಗಿದ್ದಾರೆ.

scroll.in ಪ್ರಕರಣದಲ್ಲಿ ಸಂತ್ರಸ್ತರನ್ನು ವಿಚಾರಣೆಗೆ ಗುರಿಪಡಿಸಿದ ಬಗ್ಗೆ ಪೊಲೀಸರಿಗೆ ಕೆಲ ಪ್ರಶ್ನೆಗಳನ್ನು ಕಳುಹಿಸಿತ್ತು. ಪೊಲೀಸರಿಂದ ಇದಕ್ಕೆ ಪ್ರತಿಕ್ರಿಯೆ ಬಂದ ಬಳಿಕ ಲೇಖನ ಪರಿಷ್ಕರಿಸಲಾಗುತ್ತದೆ.

ಎರಡು ಕುಟುಂಬಗಳ ಕರುಣಾಜನಕ ಕಥೆ...

ದುಷ್ಕರ್ಮಿಗಳ ವಿರುದ್ಧ ದೂರು ನೀಡಿ ಬಂಧನಕ್ಕೊಳಗಾದರು

ಮಾರ್ಚ್ 1ರಂದು ಶಿವವಿಹಾರದ ನಿವಾಸಿ 60 ವರ್ಷ ವಯಸ್ಸಿನ ಹಸೀಂ ಅಲಿ ಎಂಬುವವರು ಕಾರವಲ್ ನಗರ ಠಾಣೆಯಲ್ಲಿ ದೂರು ನೀಡಿ, ಫೆಬ್ರವರಿ 25ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಮನೆಯನ್ನು ಹೇಗೆ ಲೂಟಿ ಮಾಡಲಾಯಿತು ಮತ್ತು ಮನೆಯನ್ನು ಧ್ವಂಸಗೊಳಿಸಿ ಹೇಗೆ ಭಸ್ಮ ಮಾಡಲಾಯಿತು ಎಂದು ವಿವರಿಸಿದ್ದರು.

ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನೆರೆಹೊರೆಯವರು ಶಿವ ವಿಹಾರದಲ್ಲಿ ಹೇಗೆ ಮೂರು ದಿನಗಳ ಕಾಲ ತೀವ್ರ ದೊಂಬಿ ನಡೆಯಿತು ಎನ್ನುವುದನ್ನು ನೋಡಿದರು. ಉದ್ರಿಕ್ತ ಗುಂಪುಗಳು ಇಲ್ಲಿ ದಾಂಧಲೆ ನಡೆಸಿ ಅಲಿ ಅವರ ಮನೆ ಇದ್ದ ಲೇನ್‍ನಲ್ಲೇ ಇದ್ದ ಮದೀನಾ ಮಸೀದಿಯನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಹಲವು ಮುಸ್ಲಿಂ ಕುಟುಂಬಗಳು ಅಲ್ಲಿಂದ ಓಡಿಹೋಗಿದ್ದವು. ಅಲಿ ಈ ಮಸೀದಿ ಕಾಮಗಾರಿಯ ಆಡಳಿತಾತ್ಮಕ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು ಎಂದು ಮಗ ಅಬಿದ್ ಅಲಿ (22) ಹೇಳುತ್ತಾರೆ.

ಅಲಿಯವರು ನೀಡಿದ ದೂರಿನ ಪ್ರತಿಯನ್ನು scroll.in ಪರಿಶೀಲಿಸಿದ್ದು, ಅದರಲ್ಲಿ ಅವರು ವಿವರಿಸಿದಂತೆ, ತಮ್ಮ ಮನೆಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದನ್ನು ಸ್ವತಃ ಅಲಿ ನೋಡಿದ್ದಾರೆ. ಆ ಗುಂಪಿನಲ್ಲಿ ದಿವಾನ್, ದಶರಥ್ ಮತ್ತು ಭೂದೇವ ಎಂಬುವವರು ಇದ್ದರು ಎನ್ನುವುದನ್ನು ಗುರುತಿಸಿದ್ದಾಗಿ ತಿಳಿಸಿದ್ದರು. “ದಿವಾನ್ ಹಾಗೂ ದಶರಥ್ ನನ್ನ ಮನೆಯ ಹಿಂದೆಯೇ ವಾಸವಿದ್ದಾರೆ. ಭೂದೇವ ಮನೆ ಎದುರಿಗೆ ವಾಸವಿದ್ದರು. “ಇನ್ ತೀನೋ ಕೋ ಮೈನೇ ಸಾಫ್ ತೌರ್ ಪರ್ ದೇಖಾ (ಸ್ಪಷ್ಟವಾಗಿ ನೋಡಿದ್ದೇನೆ)” ಎಂದು ವಿವರಿಸಿದ್ದಾರೆ.

“ಸಂಜೆ 5.55ರ ವೇಳೆಗೆ ಪಕ್ಕದ ಧರ್ಮೇಂದ್ರ ಎಂಬುವವರು ಇತರರ ಜತೆಗೆ ಆಗಮಿಸಿ ನನ್ನ ಎರಡನೇ ಮನೆಗೆ ಬೆಂಕಿ ಹಚ್ಚಿದರು” ಎಂದು ಅಲಿ ದೂರು ನೀಡಿದ್ದಾರೆ. ‘ಒಂದು ಮನೆ ಸುಡಲು 10 ಸಾವಿರ ರೂಪಾಯಿ ಹಾಗೂ ಅಂಗಡಿಗೆ ಕೊಳ್ಳಿ ಇಡಲು 5 ಸಾವಿರ ರೂಪಾಯಿ ನೀಡಿದ್ದಾಗಿ’ ಗುಂಪಿನಲ್ಲಿದ್ದ ಕೆಲವರು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದಾಗಿಯೂ ವಿವರಿಸಿದ್ದರು. “ಎಲ್ಲ ಮುಲ್ಲಾಗಳನ್ನು ಕೊಲ್ಲಬೇಕು ಹಾಗೂ ಅವರ ಮನೆಗಳನ್ನು ಸುಟ್ಟುಹಾಕಬೇಕು ಎಂದು ಕೂಗಾಡುತ್ತಿದ್ದುದನ್ನೂ ನಾನು ಕೇಳಿದ್ದೇನೆ ಎಂದು ಅಲಿ ಆಪಾದಿಸಿದ್ದರು. ಆ ದಿನ ಸಂಜೆ ಪೊಲೀಸರಿಗೆ ಕರೆ ಮಾಡಿದಾಗ, ಬರುತ್ತೇವೆ ಎಂದು ಹೇಳಿ ಪೊಲೀಸರು ಬರಲೇ ಇಲ್ಲ ಎಂದೂ ಅಲಿ ದೂರಿದ್ದಾರೆ.

ಹಸೀಂ ಅಲಿ ತಮ್ಮ ಮನೆಯಲ್ಲೇ ಟೈಲರಿಂಗ್ ಕೆಲಸ ಮಾಡುತ್ತಾರೆ. ಅವರ ಎರಡೂ ಮನೆಗಳು ಭಸ್ಮವಾಗಿರುವುದರಿಂದ ಅವರ ಪತ್ನಿ ಅನಿಶಾ ಬೇಗಂ (53), ನಾಲ್ವರು ಪುತ್ರರು ಹಾಗೂ ಸೊಸೆ ಸೇರಿದಂತೆ ಅವರ ಕುಟುಂಬ ಎಲ್ಲವನ್ನೂ ಕಳೆದುಕೊಂಡಿದೆ. ಈ ಕೃತ್ಯದಿಂದಾಗಿ ಸುಮಾರು 90 ಲಕ್ಷ ರೂಪಾಯಿ ನಷ್ಟವಾಗಿದ್ದು, ಇದಕ್ಕೆ ಪರಿಹಾರ ನೀಡಬೇಕು ಹಾಗೂ ದೊಂಬಿ ನಡೆಸಿದ ಬಗ್ಗೆ ತನಿಖೆ ನಡೆಸಬೇಕು ಎಂದು ಅಲಿ ಮನವಿ ಮಾಡಿದ್ದರು.

ಹಸೀಂ ಅಲಿ ಅವರ ದೂರನ್ನು ಪೊಲೀಸರು ಶಿವವಿಹಾರದ ನರೇಶ್ ಚಂದ್ ಎಂಬವರು ಫೆಬ್ರವರಿ 28ರಂದು ನೀಡಿದ್ದ ದೂರಿನ ಜತೆಗೆ ಸೇರಿಸಿದ್ದಾರೆ ಎಂದು ಅಲಿಯವರ ವಕೀಲ ಬ್ರಿಜ್‍ ಶ್ಯಾಮ್ ಹೇಳುತ್ತಾರೆ.

ಎಫ್‍ಐಆರ್ ಜೋಡಣೆ

ಫೆಬ್ರವರಿ 25ರಂದು ಸಂಜೆ 5 ಗಂಟೆ ವೇಳೆಗೆ ತಮ್ಮ ಕುಟುಂಬ ಉದ್ರಿಕ್ತ ಗುಂಪಿನಿಂದ ಹೇಗೆ ತಪ್ಪಿಸಿಕೊಂಡಿತು ಎಂಬುದನ್ನು ನರೇಶ್‍ಚಂದ್ ತಮ್ಮ ದೂರಿನಲ್ಲಿ ವಿವರಿಸಿದ್ದರು. ಮನೆಯನ್ನು ಉದ್ರಿಕ್ತರ ಗುಂಪು ಲೂಟಿ ಮಾಡಿ ಬೆಂಕಿ ಹಚ್ಚಿದ್ದು, ಕುಟುಂಬ ಫ್ರಿಡ್ಜ್, 40 ಇಂಚಿನ ಎಲ್‍ಇಡಿ ಟಿವಿ ಪರದೆ, ಮೋಟರ್‍ ಸೈಕಲ್ ಹಾಗೂ ಚಿನ್ನಾಭರಣ ಕಳೆದುಕೊಂಡಿದೆ ಎಂದು ದೂರಿನಲ್ಲಿ ಹೇಳಿದ್ದರು.

ಎಫ್‍ಐಆರ್ ಮೇಲೆ ಪೊಲೀಸರು ಟಿಪ್ಪಣಿ ಬರೆದು, ಅಲಿಯವರು ನೀಡಿದ ದೂರನ್ನು ಎಲ್ಲ ಕಾನೂನಾತ್ಮಕ ಉದ್ದೇಶಗಳಿಗಾಗಿ ಈ ಎಫ್‍ಐಆರ್ ಜತೆ ಲಗತ್ತಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾರಕ ಆಯುಧಗಳೊಂದಿಗೆ ದೊಂಬಿ, ಕಾನೂನುಬಾಹಿರವಾಗಿ ಗುಂಪು ಸೇರಿದ್ದು ಹಾಗೂ ಸ್ಫೋಟಕಗಳ ಬಳಕೆಯಂತಹ ಅಪರಾಧಗಳನ್ನು ಪಟ್ಟಿ ಮಾಡಲಾಗಿದೆ. ಅಲಿಯವರ ದೂರಿನ ಮೇಲೆ ಪೊಲೀಸರು ಪ್ರತ್ಯೇಕ ಎಫ್‍ಐಆರ್ ಏಕೆ ದಾಖಲಿಸಿಲ್ಲ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಹಿಂಸೆಯ ಕಾರಣದಿಂದ ಅಲಿ ಕುಟುಂಬ ಅಲ್ಲಿಂದ ಓಡಿಹೋದ ಬಳಿಕ ಅಂದರೆ ಫೆಬ್ರವರಿ 25ರ ಬಳಿಕ ಇಡೀ ಕುಟುಂಬ ದೆಹಲಿಯ ಮುಸ್ತಫಾಬಾದ್‍ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದೆ. ಏಪ್ರಿಲ್ 4ರಂದು ಸಂಜೆ 4ರ ಸುಮಾರಿಗೆ ಪೊಲೀಸರು ಮನೆಗೆ ಆಗಮಿಸಿದ್ದರು. ಹಿರಿಯ ಮಗ ರಶೀದ್ ಬಗ್ಗೆ ಪೊಲೀಸರು ಪ್ರಶ್ನಿಸಿದರು ಎಂದು ಹಸೀಂ ಅಲಿಯವರ ಪತ್ನಿ ಅನಿಶಾ ಬೇಗಂ ಹೇಳುತ್ತಾರೆ.  ಆತ ಮನೆಯಲ್ಲಿ ಇಲ್ಲದ ಕಾರಣ ಹಸೀಂ ಅಲಿಯವರನ್ನು ಪೊಲೀಸರು ಕರೆದೊಯ್ದಿದ್ದಾರೆ.

ಇದಕ್ಕೂ ಮುನ್ನ ನಾಲ್ಕೈದು ಬಾರಿ ಪೊಲೀಸರು ತಂದೆಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಕೆಲ ಗಂಟೆಗಳ ಬಳಿಕ ವಾಪಾಸು ಕಳುಹಿಸಿದ್ದಾಗಿ ಎಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡುತ್ತಿರುವ ಆಬಿದ್ ಅಲಿ ವಿವರಿಸಿದ್ದಾರೆ.

ಗಲಭೆಯ ವೇಳೆ ಏನು ಸಂಭವಿಸಿತು ಮತ್ತು ಹೇಗೆ ಗಲಭೆ ಉಂಟಾಯಿತು ಎಂಬ ಬಗ್ಗೆ ಪೊಲೀಸರು ತಂದೆಯನ್ನು ಪ್ರಶ್ನಿಸಿದ್ದಾಗಿ ಅಬೀದ್ ಅಲಿ ವಿವರಿಸುತ್ತಾರೆ. “ಏನು ನಡೆಯಿತು, ಮನೆಯನ್ನು ಹೇಗೆ ಲೂಟಿ ಮಾಡಿ ಮನೆಗೆ ಬೆಂಕಿ ಹಚ್ಚಲಾಯಿತು, ಎರಡು ಬೈಕ್ ಹಾಗೂ ಒಂದು ಸ್ಕೂಟಿಯನ್ನು ಹೇಗೆ ಸುಟ್ಟುಹಾಕಲಾಯಿತು ಎನ್ನುವುದನ್ನು ತಂದೆ ವಿವರಿಸಿದ್ದರು” ಎಂದು ಆಬಿದ್ ಅಲಿ ನೆನಪಿಸಿಕೊಳ್ಳುತ್ತಾರೆ.

ಆದರೆ ಏಪ್ರಿಲ್ 4ರಂದು ಹಸೀಂ ಅಲಿ ವಾಪಸ್ಸಾಗಲಿಲ್ಲ. ಸಂಜೆ 6.14ರ ವೇಳೆಗೆ ಅಬಿದ್ ಅಲಿ ಕರೆ ಮಾಡಿದ್ದರು. “ಈಗಷ್ಟೇ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಆತಂಕಪಡುವಂಥದ್ದೇನೂ ಇಲ್ಲ ಎಂದು ತಂದೆ ಹೇಳಿದರು” ಎಂದು ಆಬಿದ್ ವಿವರಿಸಿದರು. ಮತ್ತೆ 6.39ಕ್ಕೆ ತಂದೆಗೆ ಕರೆ ಮಾಡಿದಾಗ, “ನಾನಿನ್ನೂ ಕಾಯುತ್ತಿದ್ದೇನೆ. ಪೊಲೀಸರು ಇನ್ನೂ ಏನೂ ಕೇಳಿಲ್ಲ” ಎಂಬ ಉತ್ತರ ಬಂತು ಎಂದು ಆಬಿದ್ ಹೇಳಿದರು.

ರಾತ್ರಿ 9ರ ಸುಮಾರಿಗೂ ಹಸೀಂ ವಿಚಾರಣೆಗಾಗಿ ಕಾಯುತ್ತಿದ್ದರು. ಅಂತಿಮವಾಗಿ 10 ಗಂಟೆಗೆ ಅಬಿದ್ ಅಲಿಗೆ ಕರೆ ಮಾಡಿ, ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದೊಯ್ಯುತ್ತಿದ್ದಾರೆ ಎಂದು ಹಸೀಂ ಹೇಳಿದರು. ಆಗ ಕೆಲವರು ಹಿಂದಿನಿಂದ “ಅವರ ಫೋನ್ ಕಿತ್ತುಕೊಳ್ಳಿ. ಅತಿಯಾಗಿ ಮಾತನಾಡುತ್ತಿದ್ದಾರೆ” ಎಂದು ಹೇಳುವುದು ಕೇಳಿಸಿತು ಎಂದು ಆಬಿದ್ ಅಲಿ ನೆನಪಿಸಿಕೊಂಡರು. “ತಂದೆ ಮಾತನಾಡಿದ್ದು ಅದೇ ಕೊನೆಯ ಬಾರಿ”

ದೂರು ಮತ್ತು ಬಂಧನ

ರಾತ್ರಿ 11ರ ಸುಮಾರಿಗೆ ಆಬಿದ್ ಅಲಿ ತಂದೆಗೆ ಕರೆ ಮಾಡಿದಾಗ ಅಪರಿಚಿತರೊಬ್ಬರು ಉತ್ತರಿಸಿದರು. “ನನ್ನ ತಂದೆಯನ್ನು ಬಂಧಿಸಿದ್ದಾಗಿ ಅವರು ತಿಳಿಸಿದರು. ಯಾರು ಮಾತನಾಡುವುದು ಎಂದು ಕೇಳಿದಾಗ ನನ್ನನ್ನೂ ವಿಚಾರಣೆಗೆ ಗುರಿಪಡಿಸಿದ್ದಾಗಿ ತಿಳಿಸಿದರು”.

ಪೊಲೀಸರು ವಿಚಾರಣೆ ಬಳಿಕ ತನ್ನನ್ನು ಬಿಡುಗಡೆ ಮಾಡಿದರು ಎಂದು ಆ ವ್ಯಕ್ತಿ ವಿವರಿಸಿದರು. ಹಸೀಂ ಅಲಿಯವರ ಪತ್ನಿ ಅನಿಶಾ ಬೇಗಂ ಶಿವವಿಹಾರಕ್ಕೆ ಅಂದು ರಾತ್ರಿ ತೆರಳಿ ಫೋನ್ ಮತ್ತು ಹಣವನ್ನು ಆ ವ್ಯಕ್ತಿಯಿಂದ ಪಡೆದರು.

ಮರುದಿನ ಆಬಿದ್ ಅಲಿಯವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಒಂದಷ್ಟು ಬಟ್ಟೆ ಮತ್ತು ಆಹಾರವನ್ನು ತರುವಂತೆ ತಂದೆ ಕೋರಿದ್ದರು. ಅರ್ಧ ಗಂಟೆಯಲ್ಲಿ ಆಬಿದ್ ಅಲಿ ಹಾಗೂ ಮಾವ ಶೌಕತ್ ಅಲಿ ಪೊಲೀಸ್ ಠಾಣೆ ತಲುಪಿದರು. ಶೌಕತ್ ಅಲಿ ಮಾತ್ರ ಠಾಣೆಯೊಳಕ್ಕೆ ಹೋಗಲು ಅವಕಾಶ ನೀಡಲಾಯಿತು. “ದೂರದಿಂದ ನಾನು ತಂದೆಯನ್ನು ನೋಡಿದೆ. ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ” ಎಂದು ಆಬಿದ್ ವಿವರಿಸುತ್ತಾರೆ.

ಹಸೀಂ ಅಲಿಯವರನ್ನು ಯಾವ ಎಫ್‍ಐಆರ್ ಅಡಿಯಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿಯನ್ನೂ ಪೊಲೀಸರು ಕೊಡಲಿಲ್ಲ.

“ನಮ್ಮ ಮನೆಯನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿದೆ. ನಾವು ಈ ಬಗ್ಗೆ ದೂರು ನೀಡಿದರೆ ಯಾರನ್ನೂ ಈ ಸಂಬಂಧ ಬಂಧಿಸಿಲ್ಲ. ಇನ್ನೂ ಅವರು ತಿರುಗಾಡುತ್ತಿದ್ದಾರೆ”ಎಂದು ಅಬಿದ್ ಅಲಿ ಹೇಳುತ್ತಾರೆ. “ಬದಲಾಗಿ ಪೊಲೀಸರು ತಂದೆಯನ್ನು ಬಂಧಿಸಿದ್ದು, ಅಣ್ಣನಿಗಾಗಿ ಹುಡುಕುತ್ತಿದ್ದಾರೆ” ಎಂದವರು ಅಳಲು ತೋಡಿಕೊಳ್ಳುತ್ತಾರೆ.

ಹಸೀಂ ಅಲಿಯವರ ಎಫ್‍ಐಆರ್ ಜತೆಗೆ ಲಗತ್ತಿಸಿದ ಮತ್ತೊಂದು ಎಫ್‍ಐಆರ್‍ನ ಸಂಬಂಧ ಹಸೀಂ ಅಲಿಯವರನ್ನು ಬಂಧಿಸಲಾಗಿದೆ ಎಂದು ಕಾರವಲ್‍ನಗರ ಠಾಣೆಯ ತನಿಖಾಧಿಕಾರಿ ಸುಮನ್ ಕುಮಾರ್ ಹೇಳಿದ್ದಾರೆ. “ನಮ್ಮ ಪ್ರದೇಶದಿಂದ ಸುಮಾರು 1500-1600 ದೂರುಗಳು ಬಂದಿವೆ. ಪ್ರತಿಯೊಂದಕ್ಕೂ ಎಫ್‍ಐಆರ್ ಮಾಡಿಲ್ಲ. ಒಂದು ಎಫ್‍ಐಆರ್‍ನಲ್ಲಿ 15-20 ದೂರುಗಳನ್ನು ಸೇರಿಸಲಾಗಿದೆ. ಆ ಎಫ್‍ಐಆರ್ ಅಡಿಯಲ್ಲಿ ವಿಚಾರಣೆ ನಡೆಯುತ್ತಿದೆ”ಎಂದು ಕುಮಾರ್ ವಿವರಿಸಿದರು.

ಎಫ್‍ಐಆರ್‍ನಲ್ಲಿ ಯಾರನ್ನೂ ಹೆಸರಿಸಿಲ್ಲ. ಆದರೆ ಹಸೀಂ ಅಲಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಹಸೀಂ ಅಲಿಯವರ ಹಿರಿಯ ಮಗ ರಶೀದ್ ಅಲಿ ಸೇರಿದಂತೆ ನಾಲ್ವರು ತಲೆ ಮರೆಸಿಕೊಂಡಿದ್ದಾರೆ ಎಂದು ಕುಮಾರ್ ಹೇಳಿದರು.

ಯಾವ ಆಧಾರದಲ್ಲಿ ಹಸೀಂ ಅಲಿಯವರನ್ನು ಬಂಧಿಸಲಾಗಿದೆ ಎಂದು ಕೇಳಿದಾಗ, ಫೆಬ್ರುವರಿ 25ರಂದು ಶಿವವಿಹಾರದಲ್ಲಿ ಸೆರೆಹಿಡಿದ ಹಲವು ಚಿತ್ರ ಹಾಗೂ ವಿಡಿಯೊದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿ ವಿವರ ನೀಡಿದರು.

ಈ ದೃಶ್ಯ ತುಣುಕಿನಲ್ಲಿ ಹಸೀಂ ಅಲಿ ದೊಣ್ಣೆ, ರಾಡ್ ಹಾಗೂ ಖಡ್ಗ ಹಿಡಿದ ಉದ್ರಿಕ್ತರ ಗುಂಪನ್ನು ಪ್ರಚೋದಿಸುತ್ತಿರುವುದು ಕಾಣಿಸುತ್ತಿದೆ. ಕೈಸನ್ನೆ ಮೂಲಕ ಬೇಗ ಮುನ್ನುಗ್ಗಿ ಎಂದು ಆದೇಶ ನೀಡುತ್ತಿದ್ದಾರೆ ಎಂದು ತನಿಖಾಧಿಕಾರಿ ಹೇಳಿದರು. ಆದರೆ ಆ ದೃಶ್ಯ ತುಣುಕಿನ ಧ್ವನಿ ಕೇಳಿಸುತ್ತಿಲ್ಲ ಎಂದು ಹೇಳಿದ ಅವರು, ಆ ಗುಂಪು ಬಳಿಕ ಸಿಸಿ ಟಿವಿಯನ್ನು ಹಾಳುಗೆಡವಿದೆ ಎಂದು ತಿಳಿಸಿದರು.

ತಪ್ಪಾಗಿ ಸಿಲುಕಿಸಿದರು

“ಹಸೀಂ ಅಲಿ ದೂರಿನಲ್ಲಿ ಹೆಸರಿಸಿರುವ ನಾಲ್ಕು ಮಂದಿಯ ಬಗ್ಗೆ ಏನು ಮಾಡಿದ್ದೀರಿ? ಅವರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆಯೇ?” ಎಂಬ ಪ್ರಶ್ನೆಗೆ ಉತ್ತರಿಸುವ ಪೊಲೀಸರು, “ಅಲಿಯವರ ಸಾಕ್ಷಿ ಹೇಳಿಕೆಯನ್ನು ಅಪರಾಧ ದಂಡಸಂಹಿತೆಯ ಸೆಕ್ಷನ್ 161ರ ಅನ್ವಯ ಪರಿಗಣಿಸಲಾಗುತ್ತದೆ. ನೀವು ಜನರನ್ನು ಹೆಸರಿಸಿದಾಗ ಅವರ ವಿರುದ್ಧ ಪುರಾವೆ ನೀಡಬೇಕಾಗುತ್ತದೆ. ಮುಖ್ಯ ದೂರುದಾರ ನರೇಶ್‍ಚಂದ್ ಸಿಸಿಟಿವಿ ದೃಶ್ಯಾವಳಿಯ ಪುರಾವೆ ನೀಡಿದ್ದು ಅದನ್ನು ಆ ದಿನವೇ ದಾಖಲಿಸಿಕೊಳ್ಳಲಾಗಿದೆ” ಎಂದು ಕುಮಾರ್ ವಿವರಿಸಿದರು.

ದೂರುದಾರರಿಂದ ಪುರಾವೆಯನ್ನು ಕೇಳುವುದು ಮೇಲ್ನೋಟಕ್ಕೆ ಸರಿಯಲ್ಲ ಎಂದು ಹಿರಿಯ ವಕೀಲ ಅಭಿಷೇಕ್ ಚಿಮ್ನಿ ಹೇಳುತ್ತಾರೆ. ತನಿಖೆಯ ಮುಖ್ಯ ಉದ್ದೇಶವೇ ದೂರಿನ ಪ್ರತಿಪಾದನೆಯ ಬಗ್ಗೆ ನಿರ್ಣಯಕ್ಕೆ ಬರುವುದು. ಪೊಲೀಸರು ದೂರುದಾರರಿಂದ ಪುರಾವೆ ಬಯಸುವುದು ವಿಚಿತ್ರ ಎಂದು ಅವರು ಹೇಳುತ್ತಾರೆ.

ಹಸೀಂ ಅಲಿಯವರ ವಕೀಲ ಬ್ರಿಜ್ ಶ್ಯಾಮ್ ಮೇ 3ರಂದು ಕರ್ಕರದೂಮ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆರೋಪಿ, ಈ ಹಿಂಸಾಚಾರದ ಸಂತ್ರಸ್ತರಾಗಿದ್ದು, ಅವರು ದೂರು ನೀಡಿದಾಗ ಅವರನ್ನೇ ತಪ್ಪಾಗಿ ಪೊಲೀಸರು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಮೇ 6ರಂದು ನಡೆದ ಮೊದಲ ವಿಚಾರಣೆಯಲ್ಲಿ ನ್ಯಾಯಾಲಯ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ತನಿಖಾಧಿಕಾರಿ ಸುಮನ್ ಕುಮಾರ್ ಅವರಿಗೆ ಆದೇಶಿಸಿದೆ. ಮೇ 12ರಂದು ನಡೆದ ಮುಂದಿನ ವಿಚಾರಣೆಗೆ ತನಿಖಾಧಿಕಾರಿ ಹಾಜರಾಗಲಿಲ್ಲ. ಮತ್ತೆ ಮೇ 13ಕ್ಕೆ ಪ್ರಕರಣದ ವಿಚಾರಣೆ ನಡೆದಿದೆ. ಮೇ 13ರಂದು ವಾದ ಪ್ರತಿವಾದ ನಡೆದ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಯೋಗಿತಾ ಸಿಂಗ್ ಹಸೀಂ ಅಲಿಯವರಿಗೆ ಜಾಮೀನು ನೀಡಿದ್ದಾರೆ.

ಹಸೀಂ ಅಲಿಯವರನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ಅವರು ಇಡೀ ಕುಟುಂಬದ ಆಧಾರಸ್ತಂಭ ಎಂಬ ವಾದವನ್ನು ಜಾಮೀನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಸೀಂ ಅಲಿ ಗಂಭೀರ ಅಪರಾಧದಲ್ಲಿ ಶಾಮೀಲಾಗಿದ್ದಾರೆ ಎಂಬ ಆಧಾರದಲ್ಲಿ ತನಿಖಾಧಿಕಾರಿ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದನ್ನೂ ಉಲ್ಲೇಖಿಸಲಾಗಿದೆ. 20 ಸಾವಿರ ರೂಪಾಯಿ ಭದ್ರತಾ ಬಾಂಡ್ ಸಲ್ಲಿಸುವಂತೆ ಆರೋಪಿಗೆ ಸೂಚಿಸಿ, ಆರೋಪಿ ಕುಟುಂಬದ ಆಧಾರಸ್ತಂಭ ಎಂಬ ವೈಯಕ್ತಿಕ ಸಂಕಷ್ಟವನ್ನು ಗಮನಿಸಿ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲು ಅವಕಾಶ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ದೊಂಬಿಯ ಬಗ್ಗೆ ದೂರು ನೀಡಿ ಬಂಧನಕ್ಕೊಳಗಾದ ವ್ಯಕ್ತಿ

ಸುಭಾಷ್ ತ್ಯಾಗಿ (51) ದೆಹಲಿಯ ಸರ್ಕಾರಿ ಆಸ್ಪತ್ರೆಯ ಉದ್ಯೋಗಿ. ಪತ್ನಿ ಹಾಗೂ ಮಕ್ಕಳ ಜತೆ ಯಮುನಾ ವಿಹಾರದಲ್ಲಿ ಇವರು ವಾಸವಿದ್ದಾರೆ. ಅವರ ಮೂವರು ಸಹೋದರರು, ಅವರ ಕುಟುಂಬದವರು ಉತ್ತರ ಘೋಂಡಾದಲ್ಲಿ ವಾಸವಿದ್ದಾರೆ.

ಫೆಬ್ರುವರಿ 23ರಂದು ಉತ್ತರ ಪ್ರದೇಶದ ಭಾಗ್‍ಪತ್ ಜಿಲ್ಲೆಯ ಫಿರೋಜಾಪುರದಲ್ಲಿ ನಡೆಯುವ ವಿವಾಹದಲ್ಲಿ ಪಾಲ್ಗೊಳ್ಳಲು ಇಡೀ ಕುಟುಂಬ ದೆಹಲಿಯಿಂದ ಹೊರಟಿತ್ತು. ತ್ಯಾಗಿ, 26 ವರ್ಷದ ಅವರ ಸೊಸೆ ಹಾಗೂ 16 ವರ್ಷದ ಅಳಿಯ ದೆಹಲಿಯಲ್ಲೇ ಉಳಿದಿದ್ದರು.

ಮರುದಿನ ಈಶಾನ್ಯ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಾಗ ಉತ್ತರ ಪ್ರದೇಶಕ್ಕೆ ಹೋಗಿದ್ದವರಿಗೆ ಕರೆ ಮಾಡಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎಂದು ಹೇಳಿದ್ದರು. ತ್ಯಾಗಿ ಕೆಲಸ ಮುಗಿಸಿ ರಾತ್ರಿ 7ರ ಸುಮಾರಿಗೆ ಉತ್ತರ ಘೋಂಡಾ ತಲುಪಿದರು. ಮನೆ ಮುಂದೆ ಬೈಕ್ ನಿಲ್ಲಿಸಿದಾಗ ಕೆಲವರು ಬಂದು ಅವರ ಮೇಲೆ ದಾಳಿ ನಡೆಸಿದರು. ದೊಣ್ಣೆ, ಕಲ್ಲು ಮತ್ತು ಬಂದೂಕು ಹಿಡಿದಿದ್ದ ಗುಂಪು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗಿತು ಎಂದು ಅವರು ಆರೋಪಿಸಿದ್ದಾರೆ.

ತ್ಯಾಗಿ ಅಲ್ಲೇ ಬೈಕ್ ಬಿಟ್ಟು ಪಕ್ಕದ ಮನೆಗೆ ಓಡಿದರು. ಗುಂಪು ಚದುರಿದ ಬಳಿಕ ರಾತ್ರಿ 9ರ ಸುಮಾರಿಗೆ ಬಂದಾಗ ಅವರ ಬೈಕ್ ಸುಟ್ಟುಹಾಕಲಾಗಿತ್ತು. ಮನೆಯ ಗೇಟು ಹಾಗೂ ಕಿಟಕಿಗಳನ್ನು ಧ್ವಂಸಗೊಳಿಸಲಾಗಿತ್ತು. ಅವರ ಸೊಸೆ ಹಾಗೂ ಅಳಿಯ ಈ ದೊಂಬಿಯನ್ನು ಚಿತ್ರೀಕರಿಸಿಕೊಂಡಿದ್ದರು. ಪೊಲೀಸ್ ಸಹಾಯವಾಣಿಗೆ ಅವರು ಕರೆ ಮಾಡಿದರೂ ಪ್ರತಿಕ್ರಿಯೆ ದೊರಕಲಿಲ್ಲ ಎಂದು ಅವರು ದೂರುತ್ತಾರೆ.

ಹಿಂಸಾಚಾರ ನಡೆದ ದಿನ ರಾತ್ರಿ ತ್ಯಾಗಿ ತಮ್ಮ ಯಮುನಾ ವಿಹಾರ ನಿವಾಸಕ್ಕೆ ಮರಳದೇ ಉತ್ತರ ಘೋಂಡಾದಲ್ಲಿರುವ ಮನೆಯಲ್ಲಿ ಕುಟುಂಬದ ಜತೆಯೇ ನಾಲ್ಕು ದಿನಗಳವರೆಗೆ ಉಳಿದರು. ಸಹೋದರರು ಫೆಬ್ರವರಿ 24ರಂದು ರಾತ್ರಿ 11ರ ಸುಮಾರಿಗೆ ಭಾಗ್‍ಪತ್‍ನಿಂದ ಆಗಮಿಸಿದರು ಎಂದು ತ್ಯಾಗ

Writer - ವಿಜಯ್ತಾ ಲಲ್ವಾನಿ, scroll.in

contributor

Editor - ವಿಜಯ್ತಾ ಲಲ್ವಾನಿ, scroll.in

contributor

Similar News