ಅಂಫಾನ್ ಚಂಡಮಾರುತದಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ತ: ಪ. ಬಂಗಾಳದಲ್ಲಿ ಜನರ ಪ್ರತಿಭಟನೆ

Update: 2020-05-23 16:51 GMT

ಕೋಲ್ಕತಾ,ಮೇ 24: ಪಶ್ಚಿಮಬಂಗಾಳದಲ್ಲಿ ಅಂಫಾನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 86ಕ್ಕೇರಿದೆಯೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ತಿಳಿಸಿದ್ದಾರೆ.

ಬುಧವಾರ ಒಡಿಶಾ, ಪಶ್ಚಿಮಬಂಗಾಳಗಳ ಬಂಗಾಳಕೊಲ್ಲಿ ತೀರಪ್ರದೇಶಗಳಿಗೆ ಅಪ್ಪಳಿಸಿದ್ದು, ತಗ್ಗುಪ್ರದೇಶಗಳಲ್ಲಿರುವ ಸಾವಿರಾರು ಮನೆಗಳು ಸಾಗರದಲೆಗಳಿಗೆ ಕೊಚ್ಚಿಹೋಗಿದ್ದವು ಹಾಗೂ ಹಲವಾರು ನಗರಗಳಲ್ಲಿ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಸ್ಥಗಿತಗೊಂಡಿದ್ದವು.

ಅಂಫಾನ್ ಚಂಡಮಾರುತದ ರೌದ್ರವತಾರಕ್ಕೆ ಸಾಕ್ಷಿಯಾಗಿರುವ ಕೋಲ್ಕತಾ ನಗರದಲ್ಲಿ ಸತತ ಮೂರನೆಯ ದಿನವೂ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ. ವಿದ್ಯುತ್ ಸಂಪರ್ಕವನ್ನು ಇನ್ನೂ ಸರಿಪಡಿಸಲಾಗದೆ ಇರುವುದನ್ನು ಖಂಡಿಸಿ, ಕೋಲ್ಕತಾದಲ್ಲಿ ಶನಿವಾರ ನೂರಾರು ಮಂದಿ ಪ್ರತಿಭಟನೆ ನಡೆಸಿದರು.

ಕೋಲ್ಕತಾದ ಆಸುಪಾಸಿನ ಜಿಲ್ಲೆಗಳಾದ ಹೌರಾ ಹಾಗೂ ಹೂಗ್ಲಿಗೂ ಪ್ರತಿಭಟನೆಗಳು ಹರಡಿದ್ದು ನೂರಾರು ಜನರು ಬೀದಿಗಿಳಿದು ಪ್ರದರ್ಶನ ನಡೆಸಿದರು.

ಬಂಗಾಳಕೊಲ್ಲಿಗೆ ಈವರೆಗೆ ಅಪ್ಪಳಿಸಿದ ಚಂಡಮಾರುತಗಳಲ್ಲೇ ಅತ್ಯಂತ ಪ್ರಬಲವೆನ್ನಲಾದ ಅಂಫಾನ್, ಪಶ್ಚಿಮಬಂಗಾಳದ ಹಲವೆಡೆ ಭಾರೀ ನಾಶ ನಷ್ಟವನ್ನುಂಟು ಮಾಡಿತ್ತು. ಕೋಲ್ಕತ್ತಾ ಹಾಗೂ ಆಸುಪಾಸಿನ ಪ್ರದೇಶಗಳ ಹಲವೆಡೆ ನೂರಾರು ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ್ದವು.

ಕೋಲ್ಕತ್ತಾದಲ್ಲಿ 5 ಸಾವಿರಕ್ಕೂ ಅಧಿಕ ಮರಗಳು ಹಾಗೂ ಸುಮಾರು ನಾಲ್ಕು ಸಾವಿರ ವಿದ್ಯುತ್‌ ತಂತಿಗಳು ಧರಾಶಾಯಿಯಾಗಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

ವಿದ್ಯುದಾಘಾತವನ್ನು ತಡೆಯಲು ನಗರದ ಹಲವೆಡೆ ವಿದ್ಯುತ್‌ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂಫಾನ್ ಚಂಡಮಾರುತ ಹಾವಳಿಯಿಂದಾಗಿ ಪಶ್ಚಿಮಬಂಗಾಳದಲ್ಲಿ 10 ಲಕ್ಷಕ್ಕೂ ಅಧಿಕ ಮನೆಗಳು ನಾಶವಾಗಿವೆ ಹಾಗೂ 1.5 ಕೋಟಿ ಮಂದಿ ಸಂತ್ರಸ್ತರಾಗಿದ್ದಾರೆ.

ಕೋಲ್ಕತ್ತಾ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಶನಿವಾರ ಮೊಬೈಲ್‌ಫೋನ್ ಹಾಗೂ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಸಾಧ್ಯವಾಗಿದೆಯಾದರೂ, ಹಲವು ಪ್ರದೇಶಗಳು ಇಂದೂ ಕೂಡಾ ಕತ್ತಲಲ್ಲೇ ಉಳಿದಿವೆ.

ನೆರವಿಗೆ ಸೇನೆಗೆ ಬುಲಾವ್

ಅಂಫಾನ್ ಚಂಡಮಾರುತ ಆರ್ಭಟದಿಂದ ತತ್ತರಿಸಿರುವ ಪಶ್ಚಿಮಬಂಗಾಳದ ಕೋಲ್ಕತಾ ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿ ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳ ಮರುಸ್ಥಾಪನೆಗಾಗಿ ಶನಿವಾರ ಸೇನೆಯನ್ನು ನಿಯೋಜಿಸಲಾಗಿದೆ.

ಆಂಫಾನ್ ಚಂಡಮಾರುತದಿಂದ ಕೋಲ್ಕತಾ ನಗರ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಸೇನೆಯ ಐದು ತುಕಡಿಗಳನ್ನು ನಿಯೋಜಿಸಲಾಗಿದೆಯೆಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯುತ್ ಮತ್ತಿತರ ಮೂಲಸೌಕರ್ಯಗಳ ಮರುಸ್ಥಾಪನೆಗೆ ನೆರವಾಗುವಂತೆ ಪಶ್ಚಿಮಬಂಗಾಳ ಸರಕಾರದ ಮನವಿ ಮಾಡಿದ ಮೇರೆಗೆ ಸೇನೆಯನ್ನು ನಿಯೋಜಿಸಲಾಗಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News