ವಲಸೆ ಕಾರ್ಮಿಕರ ಮೇಲೆ ರಸ್ತೆಗಳ ಸ್ವಚ್ಛತೆಗೆ ಬಳಸುವ ದ್ರಾವಣ ಸಿಂಪಡಣೆ !

Update: 2020-05-23 17:09 GMT
file photo: PTI

ಹೊಸದಿಲ್ಲಿ,ಎ.23: ರಸ್ತೆಗಳ ಸ್ವಚ್ಛತೆಗೆ ಬಳಸುವ ದ್ರಾವಣವನ್ನು ನಗರಾಡಳಿತದ ಕಾರ್ಮಿಕನೊಬ್ಬನು ವಲಸೆ ಕಾರ್ಮಿಕರ ಮೇಲೆ ಸಿಂಪಡಿಸಿದ ಆಘಾತಕಾರಿ ಘಟನೆ ದಕ್ಷಿಣ ದಿಲ್ಲಿಯ ಲಜಪತ್ ನಗರದಲ್ಲಿ ನಡೆದಿದೆ.

ತಮ್ಮ ಊರುಗಳಿಗೆ ವಾಪಸಾಗಲು ವಿಶೇಷ ಶ್ರಮಿಕ್ ರೈಲುಗಳನ್ನು ಏರುವ ಮುನ್ನ ಆರೋಗ್ಯ ತಪಾಸಣೆಗೆ ಒಳಗಾಗಲು ಈ ವಲಸೆ ಕಾರ್ಮಿಕರು ಲಜಪತ್‌ನಗರದ ಹೇಮು ಕಲಾನಿ ಹಿರಿಯ ಪ್ರೌಢ ಶಾಲೆಯಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ನಗರ ಪಾಲಿಕೆಯ ನೌಕರನೊಬ್ಬ, ವಲಸೆ ಕಾರ್ಮಿಕರ ಮೇಲೆ ಸೋಂಕು ನಿರೋಧಕಗಳನ್ನು ಸಿಂಪಡಿಸಿದ್ದಾನೆ. ಈ ದೃಶ್ಯದ ವಿಡಿಯೋ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಭಾರೀ ವಿವಾದ ಸೃಷ್ಟಿಸಿವೆ.

ಈ ಬಗ್ಗೆ ದಕ್ಷಿಣ ದಿಲ್ಲಿಯ ನಗರಪಾಲಿಕೆ ಹೇಳಿಕೆಯೊಂದನ್ನು ನೀಡಿ, ‘‘ಸಿಬ್ಬಂದಿಗೆ ಭವಿಷ್ಯದಲ್ಲಿ ಹೆಚ್ಚು ಜಾಗರೂಕತೆಯಿಂದ ಮತ್ತು ಸಾವಧಾನದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದೆ. ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಅಧಿಕಾರಿಯು, ಸಾರ್ವಜನಿಕರೊಂದಿಗೆ ಕ್ಷಮೆಯಾಚಿಸಿದ್ದಾರೆಂದು ಅವರು ಹೇಳಿದ್ದಾರೆ.

ವಲಸೆ ಕಾರ್ಮಿಕರ ಮೇಲೆ ಸೋಂಕುನಾಶಕವನ್ನು ಉದ್ದೇಶಪೂರ್ವಕವಾಗಿ ಸಿಂಪಡಿಸಿಲ್ಲವೆಂದು ಲಜಪತ್ ನಗರದ ಕೌನ್ಸಿಲರ್ ಸುನೀಲ್ ಸಹದೇವ್ ತಿಳಿಸಿದ್ದಾರೆ. ‘‘ ಶಾಲೆಯು ವಸತಿ ಬಡಾವಣೆಯಲ್ಲಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ಜನಪ್ರತಿನಿಧಿಗಳು ಆವರಣದಲ್ಲಿ ಸೋಂಕುನಾಶಕವನ್ನು ಸಿಂಪಡಿಸಬೇಕೆಂದು ಆಗ್ರಹಿಸಿದ್ದರು ಎಂದವರು ತಿಳಿಸಿದ್ದಾರೆ. ಶಿಷ್ಟಾಚಾರದ ಪ್ರಕಾರ, ಸೋಂಕುನಾಶಕವನ್ನು ಸಾಮಾನ್ಯವಾಗಿ ಸಂಜೆಯ ಹೊತ್ತು ಶಾಲೆಯ ಆವರಣದಲ್ಲಿ ಸಿಂಪಡಿಸಲಾಗುತ್ತಿದೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಹೇರಿಕೆಯಾದ ಬಳಿಕ ಕಳೆದ ಎರಡು ತಿಂಗಳುಗಳಲ್ಲಿ ವಲಸೆ ಕಾರ್ಮಿಕರ ಸೋಂಕುನಾಶಕವನ್ನು ಸಿಂಪಡಿಸಿದ ಕೆಲವು ಘಟನಗಳು ವರದಿಯಾಗಿವೆ.

ಮೇ 7ರಂದು ದಿಲ್ಲಿಯ ಚಾರ್‌ಭಾಗ್ ರೈಲ್ವೆ ನಿಲ್ದಾಣದಲ್ಲಿ ಹೊರಗೆ ಪೌರಕಾರ್ಮಿಕನೊಬ್ಬ ಬಾಲಕನೊಬ್ಬನ ಮೇಲೆ ನೆಲವನ್ನು ಸ್ವಚ್ಛಗೊಳಿಸಲು ನೀರು ಹಾಗೂ ಬ್ಲಿಚಿಂಗ್ ಪೌಡರ್ ಸಮ್ಮಿಶ್ರಣದ ಸೋಂಕು ನಾಶಕವನ್ನು ಸಿಂಪಡಿಸಿದ್ದ.

ಮಾರ್ಚ್‌ನಲ್ಲಿ ಉತ್ತರಪ್ರದೇಶದ ಬರೇಲಿಯಲ್ಲಿ , ತಮ್ಮ ಊರುಗಳಿಗೆ ವಾಪಸಾಗುತ್ತಿದ್ದ ವಲಸೆ ಕಾರ್ಮಿಕರನ್ನು ಗುಂಪಾಗಿ ಕುಳ್ಳಿರಿಸಿ ಅವರ ಮೇಲೆ ಬ್ಲೀಚ್ ದ್ರಾವಣವನ್ನು ಸಿಂಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News