‘ಆಹಾರವಿಲ್ಲ, ನೀರಿಲ್ಲ, ಪ್ರಯಾಣವೂ ವಿಳಂಬ’: ಶ್ರಮಿಕ್ ರೈಲುಗಳ ವಲಸೆ ಕಾರ್ಮಿಕರಿಂದ ಪ್ರತಿಭಟನೆ

Update: 2020-05-23 17:17 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 23: ಕೇಂದ್ರ ಸರಕಾರವು ವಿವಿಧ ರಾಜ್ಯಗಳಿಂದ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ವ್ಯವಸ್ಥೆ ಮಾಡಿರುವ ವಿಶೇಷ ಶ್ರಮಿಕ್ ರೈಲುಗಳಲ್ಲಿ ತಮ್ಮ ಸ್ವಗ್ರಾಮಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರು ಪ್ರಯಾಣದ ಹೀನಾಯ ಸ್ಥಿತಿ ಮತ್ತು ವಿಳಂಬಗಳಿಂದ ರೋಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪ್ರಯಾಣದುದ್ದಕ್ಕೂ ತಮಗೆ ಆಹಾರ-ನೀರನ್ನು ನೀಡಿಲ್ಲ ಎಂದು ಹಲವರು ದೂರಿದ್ದರೆ,ತಮಗೆ ಹಳಸಿದ ಆಹಾರ ನೀಡಲಾಗಿತ್ತು ಎಂದು ಇತರರು ಆರೋಪಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಶ್ರಮಿಕ್ ರೈಲೊಂದನ್ನು ಶುಕ್ರವಾರ ಉತ್ತರ ಪ್ರದೇಶದ ದೀನದಯಾಳ ಉಪಾಧ್ಯಾಯ ರೈಲ್ವೆ ಜಂಕ್ಷನ್‌ನ ಹೊರವಲಯದ ಸಿಗ್ನಲ್ ಬಳಿ 10 ಗಂಟೆಗೂ ಹೆಚ್ಚು ಸಮಯ ತಡೆಹಿಡಿಯಲಾಗಿದ್ದು,ಆಕ್ರೋಶಗೊಂಡ ವಲಸೆ ಕಾರ್ಮಿಕರು ರೈಲ್ವೆ ಹಳಿಗಳನ್ನು ತಡೆದು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಎರಡು ದಿನಗಳಿಂದ ನಮಗೆ ಆಹಾರ-ನೀರು ನೀಡಿಲ್ಲ. ಈ ಪ್ರಯಾಣಕ್ಕಾಗಿ ನಮ್ಮಿಂದ ತಲಾ 1,500 ರೂ.ಗಳನ್ನು ಕಿತ್ತುಕೊಳ್ಳಲಾಗಿದೆ ’ಎಂದು ಪ್ರಯಾಣಿಕರು ದೂರಿದರು.

 ಬೆಂಗಳೂರಿನಿಂದ ಬಿಹಾರಕ್ಕೆ ಸಾಗುತ್ತಿದ್ದ ರೈಲು ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯಲ್ಲಿ ಅನಿಗದಿತ ನಿಲುಗಡೆಯನ್ನು ಮಾಡಿದಾಗ ಅದರಲ್ಲಿದ್ದ ವಲಸೆ ಕಾರ್ಮಿಕರು ಪ್ರಯಾಣದಲ್ಲಿ ಆಹಾರದ ಕೊರತೆಯನ್ನು ವಿರೋಧಿಸಿ ನಿಲ್ದಾಣದ ಕಿಟಕಿಗಳ ಗಾಜುಗಳನ್ನು ಹುಡಿ ಮಾಡಿ ಪ್ಲಾಟ್‌ಫಾರ್ಮ್ ಮೇಲೆ ಕಲ್ಲುಗಳನ್ನು ತೂರಿದರು. ಘಟನೆಯಲ್ಲಿ ಸ್ಟೇಷನ್ ಮಾಸ್ಟರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶುಕ್ರವಾರ ಸಂಜೆ ಗುಜರಾತಿನಿಂದ ಬಿಹಾರಕ್ಕೆ ಸಾಗುತ್ತಿದ್ದ ರೈಲಿನಲ್ಲಿದ್ದ ವಲಸೆ ಕಾರ್ಮಿಕರು ಉತ್ತರ ಪ್ರದೇಶದ ಕಾನ್ಪುರ ಜಂಕ್ಷನ್‌ನಲ್ಲಿ ತಮಗೆ ನೀಡಲಾಗಿದ್ದ ಹಳಸಿದ ಆಹಾರವನ್ನು ಹೊರಗೆಸೆದಿದ್ದಾರೆ.

ಮಹಾರಾಷ್ಟ್ರದ ಪನ್ವೇಲ್‌ನಿಂದ ಉತ್ತರ ಪ್ರದೇಶದ ಜಾನಪುರಕ್ಕೆ ಸಾಗುತ್ತಿದ್ದ ಇನ್ನೊಂದು ರೈಲನ್ನು ವಾರಣಾಸಿ ಬಳಿ 10 ಗಂಟೆಗೂ ಅಧಿಕ ಕಾಲ ತಡೆಹಿಡಿದಿದ್ದರಿಂದ ಕುಪಿತ ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News