ಲಾಕ್‌ಡೌನ್ ಮತ್ತು ರಮಝಾನ್ ಬಗ್ಗೆ ‘ಸಲಗ’ದ ಮಾತು!

Update: 2020-05-24 18:02 GMT

ದುನಿಯಾ ವಿಜಯ್ ನಟರಾಗಿ ಜನಪ್ರಿಯರು. ಇದೀಗ ಪ್ರಥಮ ಬಾರಿ ನಿರ್ದೇಶನ ರಂಗಕ್ಕೂ ಕಾಲಿಟ್ಟಿದ್ದಾರೆ. ಅವರ ನಿರ್ದೇಶನದ ‘ಸಲಗ’ ಚಿತ್ರದ ಬಗ್ಗೆ, ಅದರ ಬಿಡುಗಡೆಯ ಬಗ್ಗೆ ಮತ್ತು ತಮ್ಮ ದೇಹದಾರ್ಢ್ಯತೆಯ ರಹಸ್ಯಗಳ ಬಗ್ಗೆ ಅವರು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ್ದಾರೆ.

► ‘ಸಲಗ’ ಸಿನೆಮಾ ಯಾವಾಗ ತೆರೆಗೆ?

ಈ ಪ್ರಶ್ನೆ ಎಲ್ಲ ಕನ್ನಡ ಚಿತ್ರ ಪ್ರೇಮಿಗಳಲ್ಲಿಯೂ ಇದೆ. ಯಾಕೆಂದರೆ ‘ಟಗರು’ ಚಿತ್ರವನ್ನು ನೀಡಿದ ನಿರ್ಮಾಪಕ ಕೆ.ಪಿ.ಶ್ರಿಕಾಂತ್, ನಾಗಿಯವರು ಸೇರಿ ನಿರ್ಮಿಸಿರುವ ಚಿತ್ರ ಇದು. ಮಾತ್ರವಲ್ಲ, ಡಾಲಿಯಾಗಿ ಹೆಸರು ಮಾಡಿರುವ ನಟ ಧನಂಜಯ್ ಅವರು ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಮುಗಿದಿದೆ. ಎರಡು ಹಾಡುಗಳನ್ನು ಕೂಡ ಜನತೆ ಹಿಟ್ ಮಾಡಿಕೊಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ರೌಡಿಸಂ ಚಿತ್ರದಲ್ಲಿ ನಾನಿದ್ದೇನೆ ಎಂದಾಕ್ಷಣ ಪ್ರೇಕ್ಷಕರ ನಿರೀಕ್ಷೆ ದೊಡ್ಡಮಟ್ಟದ್ದಾಗಿರುತ್ತದೆ. ಈ ಬಾರಿ ಅಂಥದೊಂದು ನಿರೀಕ್ಷೆಯ ಚಿತ್ರದ ನಾಯಕ ಎನ್ನುವುದರ ಜತೆಗೆ ನಿರ್ದೇಶಕ ಎನ್ನುವ ಜವಾಬ್ದಾರಿ ಕೂಡ ನನ್ನ ಹೆಗಲಲ್ಲಿದೆ. ಹಾಗಾಗಿ ಎಲ್ಲರಿಗಿಂತ ಹೆಚ್ಚಿನ ಕಾತರ ನನ್ನಲ್ಲಿದೆ. ಥಿಯೇಟರ್ ತೆರೆದ ಬಳಿಕ ಪರಿಸ್ಥಿತಿ ಗಮನಿಸಿಕೊಂಡು ಚಿತ್ರವನ್ನು ತೆರೆಗೆ ತರಲಿದ್ದೇವೆ.

► ಸಲಗ ಚಿತ್ರಕ್ಕೆ ನೀವೇ ನಿರ್ದೇಶಕರಾಗುವ ನಿರ್ಧಾರ ಮಾಡಿದ್ದೇಕೆ?

ಎಲ್ಲ ನಟರಿಗೂ ಒಂದಲ್ಲ ಒಮ್ಮೆ ತಾನೇ ಯಾಕೆ ನಿರ್ದೇಶನ ಮಾಡಬಾರದು ಅನಿಸಿರುತ್ತೆ. ಎಲ್ಲರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ನನಗೆ ನಿರ್ದೇಶನ ಅಷ್ಟೇ ಅಲ್ಲ; ಎಲ್ಲ ವಿಭಾಗದಲ್ಲಿಯೂ ಆಸಕ್ತಿ ಇತ್ತು. ಕ್ಯಾರವಾನ್‌ನಿಂದ ಇಳಿದು ಹೋಗಿ ನಟನೆಯನ್ನಷ್ಟೇ ಮಾಡಿ ಮತ್ತೆ ವಾಪಸ್ ಕ್ಯಾರವಾನ್‌ಗೆ ಮರಳುವ ನಟ ನಾನಾಗಿರಲಿಲ್ಲ. ರಂಗಭೂಮಿಯಿಂದ ಬಂದ ಕಾರಣ ಎಲ್ಲ ವಿಭಾಗವನ್ನು ಕೂಡ ಕಲಿತಿರಬೇಕು ಎನ್ನುವ ಆಸೆ ನನ್ನೊಳಗೆ ಇತ್ತು. ಅದಕ್ಕೆ ಸಲಗ ಚಿತ್ರದ ಮೂಲಕ ಉತ್ತಮ ಅವಕಾಶ ಸಿಕ್ಕಿತು. ಕತೆಯಿಂದ ಹಿಡಿದು ಎಲ್ಲದರಲ್ಲಿಯೂ ನಾನು ಆರಂಭದಿಂದಲೇ ಇನ್ವಾಲ್ವ್ ಆಗಿರುವ ಕಾರಣ ನಿರ್ದೇಶನಕ್ಕೆ ಸುಲಭವಾಯಿತು. ಅದರಲ್ಲಿಯೂ ಉತ್ತಮ ಅಸೋಸಿಯೇಟ್ ಡೈರೆಕ್ಟರ್ ಕೂಡ ನನಗಿದ್ದಿದ್ದು ತುಂಬ ಸಹಾಯಕ ವಾಯಿತು. ಸಿನೆಮಾ ವಿಚಾರ ಬಂದರೆ ನಿರ್ದೇಶಕನೇ ಅಂತಿಮ. ಅಂಥದೊಂದು ಸ್ಥಾನ ನಿರ್ವಹಿಸಿರುವುದಕ್ಕೆ ಸಾರ್ಥಕತೆ ಇದೆ. ಹಾಗಂತ ಬೇರೆಯವರ ಚಿತ್ರ ನಿರ್ದೇಶಿಸುವ ಆಕಾಂಕ್ಷೆಯೇನೂ ನನಗಿಲ್ಲ. ಎಲ್ಲಕ್ಕಿಂತ ಮೊದಲು ನನ್ನ ಚೊಚ್ಚಲ ನಿರ್ದೇಶನದ ಸಲಗ ತೆರೆಕಾಣಬೇಕು.

 ► ಚಿತ್ರರಂಗಕ್ಕೆ ಬರುವಾಗಲೇ ನಿಮ್ಮ ಅಂತಿಮ ಗುರಿ ನಿರ್ದೇಶಕನಾಗುವುದೇ ಆಗಿತ್ತೇ?

 ಇಲ್ಲ. ಆಗ ನಾನು ಒಬ್ಬ ಸಣ್ಣ ಪೋಷಕ ಕಲಾವಿದನಾಗಿ ಮುಖ ತೋರಿಸುವ ಅವಕಾಶ ಸಿಕ್ಕರೆ ಸಾಕು; ಖರ್ಚಿಗೆ ದುಡ್ಡು ಸಿಕ್ಕರೆ ಸಾಕು ಎಂದುಕೊಂಡಿದ್ದೆ. ‘ದುನಿಯಾ’ ಚಿತ್ರದಲ್ಲಿ ನಾಯಕನಾಗುವಾಗಲೂ ನಾನು ಅಲ್ಲಿಂದ ನಾಯಕನಾಗಿ ಮುಂದುವರಿಯುತ್ತೇನೆ ಎನ್ನುವ ನಂಬಿಕೆ ಹೊಂದಿರಲಿಲ್ಲ. ‘ದುನಿಯಾ’ ಚಿತ್ರದಲ್ಲಿ ಪ್ರಧಾನ ಪಾತ್ರ ಮಾಡಿರುವ ಇನ್ನೊಂದಷ್ಟು ಒಳ್ಳೆಯ ಅವಕಾಶಗಳು ದೊರಕಬಹುದೇನೋ ಎಂದುಕೊಂಡಿದ್ದೆ. ನಿರ್ದೇಶಕರ ಪ್ರತಿಭೆಯಿಂದಾಗಿ ಚಿತ್ರ ಹಿಟ್ ಆಯಿತು. ಪರಿಶ್ರಮಕ್ಕೆ ದೇವರು ಏನಾದರೂ ನೀಡುತ್ತಾನೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ನಾನು ಸ್ಟಾರ್ ಆದೆ. ಒಂದು ರೀತಿಯಲ್ಲಿ ಅದು ನನಗೆ ಅನಿರೀಕ್ಷಿತ. ಆದರೆ ಪರಿಶ್ರಮ ಪಡುವ ವಿಚಾರದಲ್ಲಿ ನಾನು ಮೊದಲಿನಿಂದಲೂ ಹಠವಾದಿಯಾಗಿದ್ದೆ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕನಾಗಿ ಗುರುತಿಸಿಕೊಳ್ಳಲು ನನ್ನ ಆ ಪರಿಶ್ರಮ, ಪ್ರೇಕ್ಷಕರ ಅಭಿಮಾನವೇ ಕಾರಣ ಎಂದುಕೊಳ್ಳುತ್ತೇನೆ.

 ► ನಿಮ್ಮ ಪ್ರವೇಶದ ಬಳಿಕವೇ ಕನ್ನಡದಲ್ಲಿ ದೇಹದಾರ್ಢ್ಯತೆ ಪ್ರದರ್ಶನದ ಟ್ರೆಂಡ್ ಶುರುವಾದ ಹಾಗಿದೆ?

 ಟ್ರೆಂಡ್ ಆಮೇಲೆ ಶುರುವಾಗಿರಬಹುದು. ಆದರೆ ದೇಹದಾರ್ಢ್ಯತೆ ತೋರಿದ ಹಲವಾರು ಪ್ರಮುಖ ಕಲಾವಿದರಿದ್ದಾರೆ. ಕನ್ನಡ ಚಿತ್ರರಂಗದ ಐಕಾನ್ ಆಗಿರುವ ಅಣ್ಣಾವ್ರೇ ಅದಕ್ಕೆ ದೊಡ್ಡ ಉದಾಹರಣೆ! ಅವರು ಯೋಗ, ಸಾಮು ಎಲ್ಲ ಬಲ್ಲವರಾಗಿದ್ದರು. ಟೈಗರ್ ಪ್ರಭಾಕರ್ ಅವರ ಕಟ್ಟು ಮಸ್ತು ದೇಹವನ್ನು ಮರೆಯಲು ಸಾಧ್ಯವಿಲ್ಲ. ಅರ್ಜುನ್ ಸರ್ಜಾ ಬಾಲನಟನಾಗಿರುವಾಗಲೇ ಮಸಲ್ಸ್ ತೋರಿಸಿಕೊಂಡೇ ಬಂದವರು. ಹೀಗೆ ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬರು ಇದ್ದರು. ಆದರೆ ಕಾಕತಾಳೀಯ ಎನ್ನುವಂತೆ ನಾನು ಬರುವುದಕ್ಕೂ, ನಾಯಕರೆಲ್ಲ ಫಿಟ್ ಆಗಿರಲೇಬೇಕು ಎನ್ನುವುದು ಎಲ್ಲ ಭಾಷೆಗಳಲ್ಲಿ ಟ್ರೆಂಡ್ ಆಗುವುದಕ್ಕೂ ಸರಿ ಹೋಯಿತು. ಇಂದು ನನ್ನ ಕಟ್ಟುಮಸ್ತು ಫಿಟ್ನೆಸ್ ಉಳಿಸಿಕೊಳ್ಳಲು ನಾನು ಸಿಕ್ಸ್‌ಪ್ಯಾಕ್ ಮಾಡಬೇಕಾದಷ್ಟು ಕಷ್ಟ ಪಡುವುದಿಲ್ಲ. ಮನಸ್ಸಿಟ್ಟು ಎಲ್ಲರೂ ಮಾಡಬೇಕಾದ ವ್ಯಾಯಾಮ ಮಾಡುತ್ತೇನೆ. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ನಿತ್ಯದ ಬಳಕೆಯಿಂದ ಸಾಧ್ಯವಾದಷ್ಟು ದೂರ ಇರಿಸುವುದು, ಮುಂಜಾನೆ ಎದ್ದು ಎರಡು ಗಂಟೆಗಳ ಕಾಲ ವ್ಯಾಯಾಮ ಎನ್ನುವುದು ನಾನು ಪಾಲಿಸಿಕೊಂಡು ಬಂದಿರುವ ನಿಯಮ. ಅಂದಹಾಗೆ ಒಬ್ಬ ಕಮರ್ಷಿಯಲ್‌ಸಿನೆಮಾ ನಾಯಕನಾಗಲು ಅಭಿನಯವೊಂದೇ ಸಾಲದು. ಸ್ಟಾರ್ ಆಗಲು ಬೇಕಾದ ಎತ್ತರ, ಬಣ್ಣ ಯಾವುದು ಕೂಡ ನನ್ನಲ್ಲಿಲ್ಲ. ಹಾಗಾಗಿ ನನ್ನಿಂದ ಸಾಧ್ಯವಾಗುವ ಮಟ್ಟಿಗೆ ದೇಹದಾರ್ಢ್ಯತೆ ತೋರಿಸಿಯಾದರೂ ವಿಶೇಷ ಸ್ಥಾನ ಗಿಟ್ಟಿಸಬೇಕು ಎಂದು ಆರಂಭಿಸಿದ ಪ್ರಯತ್ನಕ್ಕೆ ಇಂದು ಗುರುತಿಸುವಿಕೆ ಲಭಿಸಿದೆ.

 ಲಾಕ್‌ಡೌನ್ ದಿನಗಳ ಅಂತ್ಯದಲ್ಲಿ ಬದುಕು ಹೇಗೆ ಅನಿಸುತ್ತಿದೆ?

ಲಾಕ್‌ಡೌನ್ ಸಂದರ್ಭವನ್ನು ಎಲ್ಲರಂತೆ ನಾನು ಕೂಡ ಮನೆಯಲ್ಲಿ ತಂದೆ, ತಾಯಿ, ಪತ್ನಿ, ಮಗನ ಜತೆಗೆ ಕಳೆದೆ. ಮನೆಯೊಳಗಿದ್ದೇ ಹೊರಗೆ ಕಾಣುವ ಒಂದಷ್ಟು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಪ್ರಯತ್ನ ಮಾಡಿದೆ. ಎಲ್ಲರ ಸಹಕಾರದಿಂದ ಒಂದಷ್ಟು ಒಳ್ಳೆಯ ಕೆಲಸಗಳು ನಡೆಯಿತು. ಈಗ ಲಾಕ್‌ಡೌನ್ ಮುಗಿದಿದೆ. ಸ್ನೇಹಿತರು ಬರುತ್ತಿದ್ದಾರೆ. ಕೊರೋನ ಕೂಡ ಸಂಪೂರ್ಣವಾಗಿ ತೊಲಗಿದರೆ ಅದೊಂದು ಹಬ್ಬದಂತೆ. ಜತೆಗೆ ರಮಝಾನ್ ಹಬ್ಬವೂ ಬಂದಿದೆ. ನನಗೆ ಬಾಲ್ಯದಿಂದಲೂ ಇರುವ ಸ್ನೇಹಿತರಲ್ಲಿ ಮುಸಲ್ಮಾನರು ಕೂಡ ತುಂಬ ಮಂದಿ ಇದ್ದಾರೆ. ನನ್ನ ಬರ್ತ್ ಡೇಯಂದು ಕೂಡ ನೀವು ಗಮನಿಸಿದ್ದರೆ ಹಾರ, ತುರಾಯಿ, ಕೇಕ್ ಜತೆಗೆ ಬಂದಿದ್ದ ಸಾಕಷ್ಟು ಮಂದಿಯನ್ನು ನೀವು ನೋಡಿರುತ್ತೀರಿ. ಅದೇನೋ ಅವರಿಗೂ ನನಗೂ ಸ್ನೇಹ ಒಲಿದಿದೆ. ಮುಸಲ್ಮಾನ ಅವಧೂತರ ಮೇಲೆ ನಂಬಿಕೆ ಇರಿಸಿದ್ದೇನೆ. ದರ್ಗಾಗಳಿಗೆ ಹೋಗಿ ಪ್ರಾರ್ಥಿಸುತ್ತೇನೆ. ಸ್ನೇಹದ ವಿಚಾರದಲ್ಲಿ ನಾನು ಜಾತಿ ನೋಡುವುದಿಲ್ಲ. ನನಗೆ ಅವರು ಕೊಡುಗೆಯಾಗಿ ನೀಡಿದ ಕುರ್ ಆನ್ ಮಾತುಗಳಿರುವ ಅರೆಬಿಕ್ ಬರವಣಿಗೆ ಗಳನ್ನು ನಾನು ಪ್ರೀತಿಯಿಂದ ದೇವರ ಕೋಣೆಯ ಗೋಡೆಯ ಮೇಲೆ ಇರಿಸಿಕೊಂಡಿ ದ್ದೇನೆ. ಅಲ್ಲಿಗೆ ನಾನು ಸ್ನೇಹಕ್ಕೆ ಕೊಡುವ ವ್ಯಾಲ್ಯು ನಿಮಗೆ ಅರ್ಥವಾಗಿರಬಹುದು. ಹಾಗಾಗಿ ಕೊರೋನ ತೊಲಗಿದ ಖುಷಿ ಯಾಗಿ ರಮಝಾನ್ ಹಬ್ಬದ ಆಚರಣೆಯಾಗಲಿ, ಅದೇ ಖುಷಿಯಲ್ಲಿ ನಾಡು ರಮಝಾನ್‌ನ ಖೀರು ಸೇವಿಸು ವಂತಾಗಲಿ ಎಂದು ಹಾರೈಸುತ್ತೇನೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News