ಕೊರೋನ: ಗರಿಷ್ಠ ಪ್ರಕರಣಗಳು ದಾಖಲಾದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 10ನೇ ಸ್ಥಾನ

Update: 2020-05-25 04:23 GMT

ಹೊಸದಿಲ್ಲಿ: ಗರಿಷ್ಠ ಸಂಖ್ಯೆಯ ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾದ ದೇಶಗಳ ಪೈಕಿ ಇರಾನ್ ದೇಶವನ್ನು ಹಿಂದಿಕ್ಕಿದ ಭಾರತ ವಿಶ್ವದಲ್ಲಿ 10ನೇ ಸ್ಥಾನದಲ್ಲಿದೆ. ಮೂರು ಹಂತಗಳ ಲಾಕ್‍ಡೌನ್ ಮುಗಿದು, ನಾಲ್ಕನೇ ಹಂತದ ಲಾಕ್‍ಡೌನಲ್ಲಿ ಒಂದಿಷ್ಟು ಸಡಿಲಿಕೆ ಮಾಡಿರುವ ನಡುವೆಯೇ ದೇಶದ ಒಟ್ಟು ಸೋಂಕಿತರ ಸಂಖ್ಯೆ 1,38,474ಕ್ಕೇರಿದೆ. ಸೋಂಕಿತರ ಸಂಖ್ಯೆ ಕಳೆದ 13 ದಿನಗಳಲ್ಲಿ ಸಂಖ್ಯೆ ದ್ವಿಗುಣಗೊಂಡಿದೆ.

ಮೊಟ್ಟಮೊದಲ ಬಾರಿಗೆ ವೈರಸ್ ಕಾಣಿಸಿಕೊಂಡ ಚೀನಾದಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯ ತಲುಪಿದೆ. ಆದರೆ ಭಾರತ ಹಾಗೂ ದಕ್ಷಿಣ ಅಮೆರಿಕದಲ್ಲಿ ತನ್ನ ದಾಳಿ ಮುಂದುವರಿಸಿದೆ. ದುರ್ಬಲ ಆರೋಗ್ಯ ಸೇವಾ ವ್ಯವಸ್ಥೆ ಇರುವ ಮತ್ತು ಬಡಜನತೆ ಅಧಿಕ ಇರುವ ದೇಶಗಳಲ್ಲಿ ವೈರಸ್ ವಿರುದ್ಧ ಹೋರಾಡುವುದು ಕಷ್ಟಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಮಾರಕ ಸಾಂಕ್ರಾಮಿಕ ಇದೀಗ ಲ್ಯಾಟಿನ್ ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬಿದೆ. ಬ್ರೆಜಿಲ್ ಹಾಗೂ ಮೆಕ್ಸಿಕೊದಲ್ಲಿ ಈ ವಾರ ಪ್ರತಿ ದಿನವೂ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ಸೀಮಿತ ಲಾಕ್‍ಡೌನ್ ಹೇರಿರುವ ಸರ್ಕಾರಗಳ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಪೆರು, ಚಿಲಿ ಮತ್ತು ಈಕ್ವೆಡಾರ್ ನಲ್ಲೂ ಸಾಂಕ್ರಾಮಿಕ ಹೆಚ್ಚುತ್ತಿದ್ದರೂ, ತ್ವರಿತವಾಗಿ ಹಾಗೂ ತೀವ್ರ ಲಾಕ್‍ಡೌನ್ ಘೋಷಣೆಯಿಂದಾಗಿ ಪರಿಸ್ಥಿತಿ ನಿಭಾಯಿಸುತ್ತಿವೆ.

ಭಾರತದಲ್ಲಿ ಸೋಂಕು ಏರಿಕೆ ಪ್ರಮಾಣ ಬ್ರೆಜಿಲ್‍ನಲ್ಲಿ ಇದ್ದ ಪ್ರಮಾಣಕ್ಕೆ ಅನುಸಾರವಾಗಿದೆ. ಬ್ರೆಜಿಲ್ 15 ದಿನಗಳ ಹಿಂದೆ, ಭಾರತದಲ್ಲಿ ಈಗ ಇರುವಷ್ಟು ಸಂಖ್ಯೆಯ ಸೋಂಕಿತರನ್ನು ಹೊಂದಿತ್ತು. ಭಾರತದಲ್ಲಿ ಮೊದಲ 10 ಸಾವಿರ ಪ್ರಕರಣ ದಾಖಲಾಗಲು 43 ದಿನ ತೆಗೆದುಕೊಂಡಿದ್ದರೆ, ಕೊನೆಯ 10 ಸಾವಿರ ಕೇವಲ ಎರಡು ದಿನದಲ್ಲಿ ಹೆಚ್ಚಿದೆ. ಸೋಂಕು ಪ್ರಕರಣಗಳು 20 ರಿಂದ 30 ಸಾವಿರಕ್ಕೇರಲು ಏಳು ದಿನ ಹಿಡಿದಿತ್ತು. ಅಂತೆಯೇ ಭಾರತ ಒಂದು ಲಕ್ಷ ಪ್ರಕರಣ ತಲುಪಿದ ಮೇ 18ಕ್ಕೆ, ಸೋಂಕು ದ್ವಿಗುಣಗೊಳ್ಳಲು ಬೇಕಾಗುವ ಅವಧಿ 13.9 ದಿನ ಇದ್ದರೆ, ಇದೀಗ 13.1 ದಿನಕ್ಕೆ ಇಳಿದಿದೆ. ಹಲವು ಮಂದಿ ತಜ್ಞರ ಪ್ರಕಾರ, ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟೇ ಗರಿಷ್ಠ ಪ್ರಮಾಣ ತಲುಪಬೇಕಿದೆ.

ವಿಶ್ವದಲ್ಲಿ ಗರಿಷ್ಠ ಸೋಂಕಿತರಿರುವ ದೇಶಗಳ ಪೈಕಿ 9ನೇ ಸ್ಥಾನದಲ್ಲಿರುವ ಟರ್ಕಿ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದೆ. ಎಂಟನೇ ಸ್ಥಾನದಲ್ಲಿರುವ ಜರ್ಮನಿ, ಪ್ರಕರಣಗಳನ್ನು ನಿಭಾಯಿಸಿದ್ದಕ್ಕಾಗಿ ಮೆಚ್ಚುಗೆ ಪಡೆದಿತ್ತು. ಎರಡು ವಾರಗಳ ಹಿಂದೆ ವಹಿವಾಟುಗಳು ಇಲ್ಲಿ ಮಾಮೂಲಿನತ್ತ ಬಂದಿದ್ದು, ರೆಸ್ಟೋರೆಂಟ್‍ನಲ್ಲಿ ಏಳು ಹೊಸ ಪ್ರಕರಣಗಳು ಮೊದಲ ಬಾರಿಗೆ ಪತ್ತೆಯಾಗಿವೆ. ಏಳನೇ ಸ್ಥಾನದಲ್ಲಿರುವ ಫ್ರಾನ್ಸ್ ಧಾರ್ಮಿಕ ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಿದೆ. ಅಮೆರಿಕದಲ್ಲಿ ಗರಿಷ್ಠ ಅಂದರೆ 16 ಲಕ್ಷ ಪ್ರಕರಣಗಳು ದಾಖಲಾಗಿದ್ದು, ರಷ್ಯಾ ಹಾಗೂ ಬ್ರೆಜಿಲ್ ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News