×
Ad

‘ಕೋಣೆಯಲ್ಲಿ ಕೂಡಿ ಹಾಕಿ ಬೆಲ್ಟಿನಲ್ಲಿ ಹೊಡೆಯಲು ಗೊತ್ತು’

Update: 2020-05-25 14:47 IST

ರಾಯಪುರ್ : “ಕೋಣೆಯಲ್ಲಿ ಕೂಡಿ ಹಾಕಿ ಬೆಲ್ಟುಗಳಲ್ಲಿ  ಹೊಡೆಯಲು ನನಗೆ ಗೊತ್ತು'' ಎಂದು ಬುಡಕಟ್ಟು ವ್ಯವಹಾರಗಳ ಕೇಂದ್ರ ಸಹಾಯಕ ಸಚಿವೆ ರೇಣುಕಾ ಸಿಂಗ್ ಅವರು ಛತ್ತೀಸಗಢದ ಬಲರಾಂಪುರ್ ಎಂಬಲ್ಲಿನ ಕೋವಿಡ್-19 ಕ್ವಾರಂಟೈನ್ ಕೇಂದ್ರವೊಂದಕ್ಕೆ ರವಿವಾರ ಭೇಟಿ ನೀಡಿದ ಸಂದರ್ಭ  ಅಧಿಕಾರಿಗಳ ಜತೆ ಮಾತನಾಡುತ್ತಾ ಕ್ಯಾಮರಾ ಎದುರೇ ಧಮ್ಕಿ ಹಾಕಿದ ಘಟನೆ ಸಾಕಷ್ಟು ಆಕ್ರೋಶ ಮೂಡಿಸಿದೆ.

 ‘ದಾದಾಗಿರಿ ನಹೀ ಚಲೇಗಿ’ ಎಂದೂ ಸಚಿವೆ ಹೇಳುವುದು  ವೀಡಿಯೋದಲ್ಲಿ ಕೇಳಿಸುತ್ತದೆ. “ನಮ್ಮ ಸರಕಾರ ಅಧಿಕಾರದಲ್ಲಿಲ್ಲ ಎಂದು ಯಾರೂ ಅಂದುಕೊಳ್ಳಬಾರದು. ನಾವು 15 ವರ್ಷ ಇಲ್ಲಿ ಆಳ್ವಿಕೆ ನಡೆಸಿದ್ದೇವೆ. ಕೇಂದ್ರ ಸರಕಾರದ ಬಳಿ ಕೋವಿಡ್-19 ವಿರುದ್ಧ ಹೋರಾಡಲು ಸಾಕಷ್ಟು ಹಣವಿದೆ. ಈ ಕೇಸರಿಧಾರಿ ಬಿಜೆಪಿ ಕಾರ್ಯಕರ್ತರು ದುರ್ಬಲರು ಎಂದು ತಿಳಿಯಬೇಡಿ'' ಎಂದು  ಸಚಿವೆ ಅಧಿಕಾರಿಗಳ ಜತೆ ತಮ್ಮ ದರ್ಪದ ಮಾತುಗಳನ್ನಾಡುವ ಈ ವೀಡಿಯೋದಲ್ಲಿ ಅಧಿಕಾರಿಗಳು ಕಾಣಿಸುತ್ತಿಲ್ಲ.

ದಿಲೀಪ್ ಗುಪ್ತಾ ಎಂಬ ಸ್ಥಳೀಯ ನಿವಾಸಿ ಈ ನಿರ್ದಿಷ್ಟ ಕ್ವಾರಂಟೈನ್ ಕೇಂದ್ರದಲ್ಲಿನ ಅವ್ಯವಸ್ಥೆ ಹಾಗೂ ಅಲ್ಲಿ ಒದಗಿಸಲಾಗುತ್ತಿದೆಯೆನ್ನಲಾದ ಕಳಪೆ ಆಹಾರದ ಕುರಿತು ವೀಡಿಯೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರಲ್ಲದೆ  ತಾಲೂಕು ಪಂಚಾಯತ್ ಸಿಇಒ ಹಾಗೂ ತಹಶೀಲ್ದಾರ್ ಈ ವೀಡಿಯೋ ಅಪ್ಲೋಡ್ ಮಾಡಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಿದ್ದರೆಂದೂ ಆರೋಪಿಸಿದ್ದರು. ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ವೇಳೆ ಸಚಿವೆ ಗುಪ್ತಾ ಜತೆ ಮಾತನಾಡಿದ್ದರು. ದಿಲ್ಲಿಯಿಂದ ವಾಪಸಾದ ನಂತರ ಗುಪ್ತಾ ಅವರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್‍ ನಲ್ಲಿರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News