ಜೂನ್ 6ರ ನಂತರ ವಿಮಾನಗಳಲ್ಲಿ ಮಧ್ಯದ ಆಸನ ಖಾಲಿ ಬಿಡಬೇಕು: ಸುಪ್ರೀಂಕೋರ್ಟ್

Update: 2020-05-25 14:46 GMT

 ಹೊಸದಿಲ್ಲಿ,ಮೇ 25: ವಿದೇಶಗಳಿಂದ ಭಾರತೀಯರನ್ನು ವಾಪಸ್ ಕರೆತರುವ ವಿಶೇಷ ಅಂತರರಾಷ್ಟ್ರೀಯ ವಿಮಾನ ಯಾನಗಳಲ್ಲಿ ಮಧ್ಯದ ಆಸನವನ್ನು ಖಾಲಿ ಬಿಡುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರ್ದೇಶ ನೀಡಿದೆ.

 ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಸುರಕ್ಷಿತ ಅಂತರವು ಮುಖ್ಯ ಎನ್ನುವುದು ‘ಸಾಮಾನ್ಯ ಜ್ಞಾನ ’ವಾಗಿದೆ ಎಂದು ಸರಕಾರವನ್ನು ಕುಟುಕಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು,ಜೂ.6ರವರೆಗೆ ಏರ್‌ಇಂಡಿಯಾ ಯಾನಗಳಲ್ಲಿ ಮಧ್ಯದ ಸೀಟ್‌ಗಳ ಬುಕಿಂಗ್‌ಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿತು. ಸರಕಾರವು ವಾಣಿಜ್ಯಿಕ ವಿಮಾನಯಾನ ಸಂಸ್ಥೆಗಳ ಆರೋಗ್ಯಕ್ಕಿಂತ ತನ್ನ ಪ್ರಜೆಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದೂ ನ್ಯಾಯಾಲಯವು ಒತ್ತಿ ಹೇಳಿತು.

ಸರ್ವೋಚ್ಚ ನ್ಯಾಯಾಲಯದ ಈ ಹೇಳಿಕೆಯು ಕೇವಲ ಅಂತರರಾಷ್ಟ್ರೀಯ ಯಾನಗಳ ಕುರಿತಾಗಿದ್ದರೂ,ಸೋಮವಾರದಿಂದ ಎಲ್ಲ ಸೀಟ್‌ಗಳ ಭರ್ತಿಯೊಂದಿಗೆ ಪುನರಾರಂಭಗೊಂಡಿರುವ ದೇಶಿಯ ವಿಮಾನ ಯಾನಗಳ ಬಗ್ಗೆಯೂ ಪ್ರಶ್ನೆಗಳನ್ನೆತ್ತಿದೆ.

ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯ ಎನ್ನ್ನುವುದು ಸಾಮಾನ್ಯ ಜ್ಞಾನವಾಗಿದೆ. ಹೊರಗಡೆ ಕನಿಷ್ಠ ಆರು ಅಡಿಗಳ ಸುರಕ್ಷಿತ ಅಂತರವಿರಬೇಕಾದರೆ ವಿಮಾನಗಳ ಒಳಗೆ ಅದೇಕಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಿತು.

ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮೇ 7ರಿಂದ ‘ವಂದೇ ಭಾರತ ’ ಯಾನಗಳನ್ನು ನಡೆಸುತ್ತಿದೆ.

ಮಧ್ಯದ ಸೀಟನ್ನು ಖಾಲಿ ಬಿಡಬೇಕೆಂಬ ಮಾ.23ರ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ದ ನಿರ್ದೇಶವನ್ನು ಏರ್‌ಇಂಡಿಯಾ ತನ್ನ ವಿಶೇಷ ಯಾನಗಳಲ್ಲಿ ಪಾಲಿಸುತ್ತಿಲ್ಲ ಎಂದು ದೂರಿ ಸಂಸ್ಥೆಯ ಪೈಲಟ್ ಡಿ.ಜಿ.ಕನಾನಿ ಅವರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಸರಕಾರದ ಇತ್ತೀಚಿನ ನಿಯಮಗಳಿಂದಾಗಿ ಡಿಜಿಸಿಎ ನಿರ್ದೇಶ ಅಸ್ತಿತ್ವ ಕಳೆದುಕೊಂಡಿದೆ ಎಂದು ಏರ್ ಇಂಡಿಯಾ ನ್ಯಾಯಾಲಯಕ್ಕೆ ತಿಳಿಸಿತ್ತು. ವಿಮಾನಗಳಲ್ಲಿ ಮಧ್ಯದ ಸೀಟ್‌ಗಳ ಟಿಕೆಟ್ ಮಾರಾಟದ ವಿರುದ್ಧ ಮಧ್ಯಂತರ ಆದೇಶವನ್ನು ಉಚ್ಚ ನ್ಯಾಯಾಲಯವು ಹೊರಡಿಸಿತ್ತು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದ ಏರ್ ಇಂಡಿಯಾ ಮತ್ತು ಸರಕಾರ ತುರ್ತು ವಿಚಾರಣೆಗೆ ಕೋರಿದ್ದವು.

  ಸೋಮವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ವಿಚಾರಣೆಯಲ್ಲಿ ಏರ್ ಇಂಡಿಯಾ ಮತ್ತು ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೊರೋನ ವೈರಸ್ ಸೋಂಕು ಪ್ರಸಾರವನ್ನು ತಡೆಯಲು ಪರೀಕ್ಷೆ ಮತ್ತು ಕ್ವಾರಂಟೈನ್ ಅತ್ಯುತ್ತಮ ವಿಧಾನಗಳಾಗಿವೆ, ಸೀಟ್ ಅಂತರವಲ್ಲ ಎಂದು ಹೇಳಿದರು. ತಜ್ಞರೊಂದಿಗೆ ಚರ್ಚೆಯ ಬಳಿಕ ಮಧ್ಯದ ಸೀಟನ್ನು ಖಾಲಿ ಬಿಡದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮು.ನ್ಯಾ.ಬೊಬ್ಡೆ ಅವರು, ಕೋರೋನ ವೈರಸ್ ಪ್ರಯಾಣಿಕರನ್ನು ಬಾಧಿಸುವುದಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ತಾನು ವಿಮಾನದಲ್ಲಿದ್ದೇನೆ ಮತ್ತು ಯಾರಿಗೂ ಸೋಂಕನ್ನುಂಟು ಮಾಡಬಾರದು ಎನ್ನುವುದು ವೈರಸ್‌ಗೆ ಗೊತ್ತೇ? ಒಬ್ಬರ ಪಕ್ಕ ಒಬ್ಬರು ಕುಳಿತರೆ ಸೋಂಕು ಹರಡುತ್ತದೆ ಎಂದರು.

ಜೂ.6ರವರೆಗೆ ಬುಕಿಂಗ್ ಮಾಡಲಾಗಿದೆ ಎಂದು ಸರಕಾರವು ತಿಳಿಸಿದಾಗ,ಜೂ.6ರ ನಂತರ ಮಧ್ಯದ ಸೀಟ್‌ಗಳನ್ನು ಖಾಲಿ ಬಿಡುವಂತೆ ನ್ಯಾಯಾಲಯವು ನಿರ್ದೇಶಿಸಿತು. ಪ್ರಕರಣವು ವಿಚಾರಣಾಧೀನವಾಗಿರುವಾಗ ಸರಕಾರವು ಸಾರ್ವಜನಿಕ ಆರೋಗ್ಯ ಹಿತಾಸಕ್ತಿಯ ದೃಷ್ಟಿಯಿಂದ ತನ್ನ ನಿಯಮಗಳನ್ನು ಬದಲಿಸಬಹುದು ಎಂದು ತಿಳಿಸಿದ ಪೀಠವು,ಜೂ.2ರಂದು ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಆಗ್ರಹಿಸಿತು. ಬೇಕಾದರೆ ದೇಶಿಯ ಯಾನಗಳನ್ನೂ ವಿಚಾರಣೆಯಲ್ಲಿ ಸೇರಿಸಿಕೊಳ್ಳಬಹುದು ಎಂದೂ ಅದು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News