ಮಲಯಾಳಂ ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಚರ್ಚ್ ಸೆಟ್ ಧ್ವಂಸಗೊಳಿಸಿದ ಸಂಘಪರಿವಾರ ಕಾರ್ಯಕರ್ತರು

Update: 2020-05-25 09:43 GMT

ತಿರುವನಂತಪುರಂ:  ಕೇರಳದ ಕಲಡಿ ಎಂಬಲ್ಲಿ ಮಲಯಾಳಂ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿದ್ದ ಚರ್ಚ್ ಸೆಟ್ ಒಂದನ್ನು ಸಂಘಪರಿವಾರ ಕಾರ್ಯಕರ್ತರು ಧ್ವಂಸಗೊಳಿಸಿದ ಘಟನೆ ರವಿವಾರ ನಡೆದಿದೆ.

ಬಾಸಿಲ್ ಜೋಸೆಫ್ ಅವರ ನಿರ್ದೇಶನದ ಹಾಗೂ ಟೊವಿನೊ ಥಾಮಸ್ ಹಾಗೂ ಫೆಮಿನಾ ತಾರಾಗಣದ `ಮಿನ್ನಲ್ ಮುರಳಿ' ಎಂಬ ಮಲಯಾಳಂ ಚಿತ್ರೀಕರಣಕ್ಕಾಗಿ ಈ ಚರ್ಚ್ ಸೆಟ್ ನಿರ್ಮಿಸಲಾಗಿತ್ತು.

ಅಂತರಾಷ್ಟ್ರ ಹಿಂದು ಪರಿಷದ್ ತನ್ನ ಸಹ ಸಂಸ್ಥೆ ಅಂತರಾಷ್ಟ್ರ ಬಜರಂಗದಳ ಜತೆ ಸೇರಿ ಕಲಡಿ ಎಂಬಲ್ಲಿ ಪೆರಿಯಾರ್ ನದಿಯಲ್ಲಿನ ದ್ವೀಪವೊಂದರಲ್ಲಿ ನಿರ್ಮಿಸಲಾಗಿದ್ದ ಈ ಚರ್ಚ್ ಸೆಟ್  ಅನ್ನು ಧ್ವಂಸಗೈದಿದ್ದಾಗಿ ಎಎಚ್‍ಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹರಿ ಪಲೊಡೆ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ತಮಗೆ ಯಾರಲ್ಲಿಯೂ ಬೇಡಿ ಅಭ್ಯಾಸವಿಲ್ಲ,  ಆದುದರಿಂದ ಆದಿ ಶಂಕರಾಚಾರ್ಯ ಮಠದ ಸಮೀಪ ನಿರ್ಮಿಸಲಾಗಿದ್ದ ಈ ಸೆಟ್ ಅನ್ನು ಧ್ವಂಸಗೈದಿದ್ದಾಗಿ ಅವರು ಬರೆದಿದ್ದಾರೆ.

ಅನುಮತಿ ಪಡೆಯದೆಯೇ ಈ ಸೆಟ್ ನಿರ್ಮಿಸಲಾಗಿದೆ ಎಂದು ಸಂಘಟನೆ ಹೇಳಿಕೊಂಡಿದ್ದರೂ ಸ್ಥಳೀಯ ಪಂಚಾಯತ್ ಈ ಆರೋಪ ನಿರಾಕರಿಸಿದೆ ಹಾಗೂ ಚಿತ್ರ ತಂಡ ಅನುಮತಿ ಪಡೆದಿದೆ ಎಂದು ಪಂಚಾಯತ್ ಸದಸ್ಯ ಮಿನಿ ಬಿಜು ದೃಢೀಕರಿಸಿದ್ದಾರೆ. ಫೆಬ್ರವರಿಯಲ್ಲಿ ಅನುಮತಿ ನೀಡಲಾಗಿತ್ತು ಆದರೆ ನಂತರ ಲಾಕ್ ಡೌನ್‍ನಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು.

ಸೆಟ್ ಭಾಗವಾಗಿ ಚರ್ಚ್ ಕಟ್ಟಡ ಹಾಗೂ ಗಂಟೆ ಗೋಪುರ ನಿರ್ಮಿಸಲಾಗಿತ್ತು.

ಘಟನೆ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ಬಾಸಿಲ್ ಜೋಸೆಫ್ “ಈ ದ್ವೀಪದಲ್ಲಿ ಸಣ್ಣ ದೇವಾಲಯವಿದೆ ಹಾಗೂ ಅಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿ ಆಚರಿಸಲಾಗುತ್ತದೆ.  ನದಿಯ ವಿರುದ್ಧ ದಿಕ್ಕಿನ ದಂಡೆಯಲ್ಲಿ ಖ್ಯಾತ ಆದಿ ಶಂಕರಾಚಾರ್ಯ ಮಠವಿದೆ. ಸ್ಥಳೀಯ ದೇವಳ, ಪಂಚಾಯತ್ ಹಾಗೂ ನೀರಾವರಿ ಇಲಾಖೆಯಿಂದಲೂ ಅನುಮತಿ ಪಡೆದಿದ್ದೆವು'' ಎಂದು  ಹೇಳಿದ್ದಾರೆ.

ಈಗ ಸೆಟ್ ಧ್ವಂಸಗೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕುರಿತಂತೆ ಚಿತ್ರ ನಿರ್ಮಾಕರು ಚಿತ್ರ ಸಂಘಟನೆಗಳ ಜತೆ ಚರ್ಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News