ದಿಲ್ಲಿಯಿಂದ ವಿಮಾನದಲ್ಲಿ ಬಂದು ಕ್ವಾರಂಟೈನ್ ಗೊಳಗಾಗದೆ ಕಾರು ಹತ್ತಿ ಹೊರಟ ಸದಾನಂದ ಗೌಡ!

Update: 2020-05-25 14:42 GMT

ಬೆಂಗಳೂರು: ದಿಲ್ಲಿಯಿಂದ ಬೆಂಗಳೂರಿಗೆ ದೇಶೀಯ ವಿಮಾನದ ಮೂಲಕ ಆಗಮಿಸಿದ ಕೇಂದ್ರ ಸಚಿವ ಸದಾನಂದ ಗೌಡ ಕ್ವಾರಂಟೈನ್ ಗೆ ಒಳಗಾಗದೆ, ಕಾರಿನಲ್ಲಿ ತೆರಳಿದ ಘಟನೆ ನಡೆದಿದೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದ ಗೌಡ ಯಾವುದೇ ಕ್ವಾರಂಟೈನ್ ಗೆ ಒಳಗಾಗದೆ ಕೂಡಲೇ ಕಾರಿನಲ್ಲಿ ಹೊರಟರು. ಈ ಬಗ್ಗೆ ಅವರನ್ನು ಫೋನ್ ನಲ್ಲಿ ಪ್ರಶ್ನಿಸಿದಾಗ ಅವರು, “ನಾನು ಫಾರ್ಮಾ ಸಚಿವನಾಗಿರುವುದರಿಂದ ಕ್ವಾರಂಟೈನ್ ನಿಯಮಗಳಿಗೆ ಒಳಪಡುವುದಿಲ್ಲ” ಎಂದು ಹೇಳಿದ್ದಾಗಿ indiatoday.in ವರದಿ ಮಾಡಿದೆ.

ವಿಮಾನಗಳ ಮೂಲಕ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗಬೇಕು ಎನ್ನುವ ನಿಯಮ ಕರ್ನಾಟಕದಲ್ಲಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದ ಡಿಜಿಪಿ ಪ್ರವೀಣ್ ಸೂದ್, “ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ, ಗುಜರಾತ್,. ತಮಿಳುನಾಡು, ದಿಲ್ಲಿ ಮತ್ತು ಮಧ್ಯಪ್ರದೇಶಗಳಿಂದ ಆಗಮಿಸುವ ಪ್ರಯಾಣಿಕರು 7 ದಿನಗಳ ಕ್ವಾರಂಟೈನ್ ನಲ್ಲಿರಬೇಕು” ಎಂದಿದ್ದರು.

ಆದರೆ ಇದೀಗ ಕೇಂದ್ರ ಸಚಿವರೇ ನಿಯಮ ಮುರಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹೋಂ ಕ್ವಾರಂಟೈನ್

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಹೋಂ ಕ್ವಾರಂಟೈನ್‍ಗೆ ತೆರಳಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಹೋಂ ಕ್ವಾರಂಟೈನ್‍ಗೆ ತೆರಳಿದ್ದು, ಸರಕಾರ ನಿಗದಿಪಡಿಸಿರುವಷ್ಟು ದಿನ ಕ್ವಾರಂಟೈನ್‍ಗೆ ಒಳಪಡುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News