ಮೊದಲ ದಿನವೇ ದಿಲ್ಲಿಯಲ್ಲಿ 80ಕ್ಕೂ ಅಧಿಕ ದೇಶಿಯ ವಿಮಾನ ಯಾನಗಳು ರದ್ದು

Update: 2020-05-25 14:49 GMT

ಮುಂಬೈ,ಮೇ 25: ಎರಡು ತಿಂಗಳ ಹಿಂದೆ ಕೊರೋನ ವೈರಸ್ ಲಾಕ್‌ಡೌನ್ ಹೇರಿಕೆಯಿಂದಾಗಿ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನಗಳು ಸೋಮವಾರ ದೇಶಾದ್ಯಂತ ಹಲವಾರು ಸ್ಥಳಗಳಿಂದ ಪುನರಾರಂಭಗೊಂಡಿವೆ. ಇದೇ ವೇಳೆ ಭಾರೀ ಸಂಖ್ಯೆಯಲ್ಲಿ ಯಾನಗಳು ರದ್ದುಗೊಂಡಿದ್ದು,ಈ ಬಗ್ಗೆ ವಿಮಾನಯಾನ ಸಂಸ್ಥೆಗಳು ತಮಗೆ ಸೂಚನೆಯನ್ನು ನೀಡಿರಲಿಲ್ಲ ಎಂದು ಪ್ರಯಾಣಿಕರು ದೂರಿದ್ದು, ದಿಲ್ಲಿ, ಮುಂಬೈ ಇತ್ಯಾದಿ ನಗರಗಳಲ್ಲಿಯ ವಿಮಾನ ನಿಲ್ದಾಣಗಳಲ್ಲಿ ಗೊಂದಲದ, ಅಯೋಮಯ ಸ್ಥಿತಿ ಸೃಷ್ಟಿಯಾಗಿತ್ತು.

ದಿಲ್ಲಿಗೆ ಬರಬೇಕಿದ್ದ ಮತ್ತು ದಿಲ್ಲಿಯಿಂದ ತೆರಳಬೇಕಿದ್ದ 82 ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ತಮಗೆ ಕೊನೆಯ ಗಳಿಗೆಯವರೆಗೂ ಮಾಹಿತಿ ನೀಡಿರಲಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಮೊದಲು ಒಪ್ಪಿಕೊಂಡಂತೆ ಯಾನಗಳನ್ನು ನಿರ್ವಹಿಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಹಲವಾರು ರಾಜ್ಯಗಳು ಕೇಂದ್ರಕ್ಕೆ ತಿಳಿಸಿರುವ ಹಿನ್ನೆಲೆಯಲ್ಲಿ ಯಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಸೋಮವಾರ ದಿಲ್ಲಿ ವಿಮಾನ ನಿಲ್ದಾಣಕ್ಕೆ 118 ವಿಮಾನಗಳು ಆಗಮಿಸಿದ್ದರೆ, 125 ವಿಮಾನಗಳು ನಿರ್ಗಮಿಸಿವೆ.

 ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇಂತಹುದೇ ಸನ್ನಿವೇಶವಿತ್ತು. ತಮ್ಮ ಯಾನಗಳು ರದ್ದಾಗಿದ್ದರಿಂದ ಹಲವಾರು ಪ್ರಯಾಣಿಕರು ನಿಲ್ದಾಣದ ಹೊರಗೆ ಕುಳಿತಿದ್ದರು.

ತನ್ಮಧ್ಯೆ ವಿಮಾನದ ಸಿಬ್ಬಂದಿ ರಕ್ಷಣಾ ಗೌನ್‌ಗಳು, ಮಾಸ್ಕ್‌ಗಳು ಮತ್ತು ಫೇಸ್‌ ಶೀಲ್ಡ್‌ ಗಳನ್ನು ಧರಿಸಿ ಸ್ವಾಗತಿಸಿದ್ದು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡಿತ್ತು.

ದಿಲ್ಲಿಯಿಂದ ನಸುಕಿನ 4:45ಕ್ಕೆ ಪುಣೆಗೆ ಮೊದಲ ಯಾನವಾಗಿದ್ದರೆ, ಮುಂಬೈನಲ್ಲಿ ಬೆಳಿಗ್ಗೆ 6:45ಕ್ಕೆ ಮೊದಲ ಯಾನವಾಗಿ ಪಾಟ್ನಾಕ್ಕೆ ವಿಮಾನವು ನಿರ್ಗಮಿಸಿತ್ತು.

ದೇಶದ ಎರಡನೇ ಅತ್ಯಂತ ವ್ಯಸ್ತ ನಿಲ್ದಾಣವಾಗಿರುವ ಮುಂಬೈ ಪ್ರತಿದಿನ 25 ಆಗಮನ ಮತ್ತು 25 ನಿರ್ಗಮನ ಸೇರಿದಂತೆ 50 ಯಾನಗಳನ್ನು ನಿರ್ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News