ಸಿಎಎ ಪ್ರತಿಭಟನಕಾರರಿಗೆ ಜಾಮೀನು ನೀಡಿದ ಕೋರ್ಟ್, ಮತ್ತೆ ಬಂಧಿಸಿದ ಪೊಲೀಸರು !

Update: 2020-05-25 14:50 GMT

ಹೊಸದಿಲ್ಲಿ, ಮೇ 19: ಫೆಬ್ರವರಿಯಲ್ಲಿ ಜಫ್ರಾಬಾದ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧಿಸಲ್ಪಟ್ಟು, ಆನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ‘ಪಿಂಜ್ರಾ ತೋಡ್’ ಮಾನವಹಕ್ಕುಗಳ ಸಂಘಟನೆಯ ಇಬ್ಬರು ಸಂಸ್ಥಾಪಕ ಸದಸ್ಯರನ್ನು ದಿಲ್ಲಿ ಪೊಲೀಸರು ಶನಿವಾರ ಮತ್ತೆ ಬಂಧಿಸಿದ್ದಾರೆ.

ದೇವಾಂಗನಾ ಕಾಲಿಟಾ ಹಾಗೂ ನತಾಶಾ ನರ್ವಾಲ್ ಬಂಧಿತ ಯುವತಿಯರಾಗಿದ್ದು, ಇವರಿಬ್ಬರೂ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿನಿಯರು. ಮಹಿಳೆಯರಿಗೆ ಹಾಸ್ಟೆಲ್‌ನಲ್ಲಿ ಹೊರಹೋಗಲು ನಿರ್ಬಂಧ ಗಳನ್ನು ವಿಧಿಸಿರುವ ವಿರುದ್ಧ ಹೋರಾಡಲು ಪಿಂಜ್ರಾ ತೋಡ್ ಚಳವಳಿಯನ್ನು ಆರಂಭಗೊಂಡಿತ್ತು. ದೇವಾಂನಾ ಹಾಗೂ ನತಾಶಾ ಈ ಸಂಘಟನೆಯ ಮುಂಚೂಣಿಯಲ್ಲಿದ್ದಾರೆ.

ಆದರೆ ಈ ಇಬ್ಬರು ಯುವತಿಯರು, 2020ರ ಫೆಬ್ರವರಿ 22ರಂದು ಜಫ್ರಾಬಾದ್ ಮೆಟ್ರೋ ರೈಲು ನಿಲ್ದಾಣದ ಓವರ್‌ಬ್ರಿಜ್‌ನ ಕೆಳಗಡೆ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಹಾಗೂ ಮಕ್ಕಳ ಗುಂಪಿನ ನೇತೃತ್ವ ವಹಿಸಿದರು ಎಂದಷ್ಟೇ ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಕೋರ್ಟ್ ಇವರಿಗೆ ರವಿವಾರ ಜಾಮೀನು ನೀಡಿತ್ತು. ಇಂದು ಬೆಳಗ್ಗೆ ಹೊಸದಿಲ್ಲಿಯ ಕ್ರೈಂಬ್ರಾಂಚ್‌ನ ಪೊಲೀಸ್ ಅಧಿಕಾರಿಗಳ ತಂಡವು ಇವರಿಬ್ಬರನ್ನು ಅವರ ಮನೆಗಳಲ್ಲಿ ವಿಚಾರಣೆಗೊಳಪಡಿಸಿದ ಸ್ವಲ್ಪ ಸಮಯದ ಬಳಿಕ ಜಾಫರಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

ದೇವಾಂಗನಾ ಹಾಗೂ ನತಾಶಾರನ್ನು ಬಂಧಿಸುವ ಮುನ್ನ ಅವರ ಕುಟುಂಬ ಸದಸ್ಯ ರಿಗೆ ಪೊಲೀಸರು ಯಾವುದೇ ಕಾರಣವನ್ನು ನೀಡಿಲ್ಲವೆಂದು ಪಿಂಜರಾ ತೋಡ್‌ನ ಕಾರ್ಯಕರ್ತರು ತಿಳಿಸಿದ್ದಾರೆ. ಪೊಲೀಸರು ಪ್ರಜಾಪ್ರಭುತ್ವವಾದಿ ಕಾರ್ಯಕರ್ತರನ್ನು ಬೇಟೆಯಾಡುತ್ತಿದ್ದಾರೆಂದು ಅವರು ಆಪಾದಿಸಿದ್ದಾರೆ. ಆದರೆ ಇಂದು ಪೊಲೀಸರು ಸಲ್ಲಿಸಿದ ಎಫ್‌ಐಆರ್‌ನಲ್ಲಿ ಬಂಧಿತ ಯುವತಿಯರ ವಿರುದ್ಧ ಕೊಲೆಯತ್ನದ ಆರೋಪವನ್ನು ಕೂಡಾ ಹೊರಿಸಲಾಗಿದೆ.

ಈ ಇಬ್ಬರು ಕಾರ್ಯಕರ್ತೆಯರನ್ನು ಭಾರತೀಯ ದಂಡಸಂಹಿತೆಯ 186 (ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕ ಉದ್ಯೋಗಿಗೆ ಅಡ್ಡಿಪಡಿಸುವುದು) ಹಾಗೂ 353 (ಸಾರ್ವಜನಿಕ ನೌಕರನಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಸೆಕ್ಷನ್‌ಗಳಡಿ ಬಂಧಿಸಲಾಗಿದೆಯೆಂದು ದಿಲ್ಲಿ (ಈಶಾನ್ಯ) ಉಪ ಪೊಲೀಸ್ ಆಯುಕ್ತ ವೇದಪ್ರಕಾಶ್ ಸೂರ್ಯ ಅವರು ತಿಳಿಸಿದ್ದಾರೆ.

ಇದೀಗ ಸಿಬಿಐನ ವಿಶೇಷ ತನಿಖಾ ತಂಡವು ದೇವಾಂಗನಾ ಹಾಗೂ ನಟಾಶಾ ವಿರುದ್ಧ ಕೊಲೆ, ಕೊಲೆಯತ್ನ, ಗಲಭೆ ಹಾಗೂ ಕ್ರಿಮಿನಲ್ ಸಂಚಿನ ಆರೋಪವನ್ನು ಹೊರಿಸಿದೆ. ಇವರಿಬ್ಬರನ್ನು 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ಕ್ರೈಂಬ್ರಾಂಚ್‌ನ ತನಿಖಾಧಿಕಾರಿ ಕುಲದೀಪ್ ಸಿಂಗ್ ಕೋರಿದ್ದರು. ಆದರೆ ನ್ಯಾಯಾಧೀಶರ ಎರಡು ದಿನಗಳ ನ್ಯಾಯಾಂಗ ಕಸ್ಟಡಿಗೆ ಸಮ್ಮತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News