ಕಾಶ್ಮೀರ: ಇಬ್ಬರು ಶಂಕಿತ ಉಗ್ರರು ಎನ್‌ಕೌಂಟರ್‌ಗೆ ಬಲಿ

Update: 2020-05-25 15:05 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಮೇ 25: ದಕ್ಷಿಣ ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ.

ಕುಲಗಾಂವ್‌ನ ಖುದ್‌ಹಾಂಜಿಪೊವಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಹತ್ಯೆಗೈಯಲಾಗಿದೆಯೆಂದು ಕಾಶ್ಮೀರಿ ವಲಯ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ. ‘‘ಬಂದೂಕು, ಮದ್ದುಗುಂಡುಗಳು ಸೇರಿದಂತೆ ಮಾರಕ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ’’ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಹಾಗೂ ಹತ್ಯೆಯಾದ ಉಗ್ರರ ಗುರುತು ಮತ್ತು ಅವರು ಯಾವ ಸಂಘಟನೆಗೆ ಸೇರಿದವರೆಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖುದ್‌ಹಾಜಿಪೊವಾ ಪ್ರದೇಶದಲ್ಲಿ ಉಗ್ರರ ಉಪಸ್ಥಿತಿಯಿರುವ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಹಾಗೂ ಭಾರತೀಯ ಸೇನೆಯ ಜಂಟಿ ತಂಡವು ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಭಯೋತ್ಪಾದಕರು ಭದ್ರತಾಪಡೆಗಳೆಡೆಗೆ ಗುಂಡಿನ ದಾಳಿ ನಡೆಸಿದರು. ಕೆಲ ಹೊತ್ತು ಗುಂಡಿನ ಚಕಮಕಿ ನಡೆದ ಬಳಿಕ, ಇಬ್ಬರೂ ಉಗ್ರರನ್ನು ಹೊಡೆದುರುಳಿಸಲಾಗಿತ್ತು ಎಂದರು.

ಜಮ್ಮುಕಾಶ್ಮೀರದಲ್ಲಿ ಈ ತಿಂಗಳು ಭದ್ರತಾಪಡೆಗಳು ಹಾಗೂ ಉಗ್ರರ ನಡುವೆ ಹಲವಾರು ಎನ್‌ಕೌಂಟರ್‌ಗಳು ಘಟನೆಗಳು ನಡೆದಿವೆ. ಮಾರ್ಚ್ 19ರಂದು ಶ್ರೀನಗರದ ನವಕಡಾಲ್ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಪ್ರತ್ಯೇಕವಾದಿ ನಾಯಕನ ಪುತ್ರ ಸೇರಿದಂತೆ ಇಬ್ಬರು ಹಿಜ್ಪುಲ್ ಉಗ್ರರು ಸಾವನ್ನಪ್ಪಿದ್ದರು.

ಮೇ 17ರಂದು ದೋಡಾ ಜಿಲ್ಲೆಯಲ್ಲಿ ಹಿಝ್ಬುಲ್ ಮುಜಾಹಿದ್ದೀನ್‌ನ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಮೇ 6ರಂದು ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಹಿಝ್ಭುಲ್ ಮುಜಾಹಿದ್ದೀನ್‌ನ ಕಮಾಂಡರ್ ರಿಯಾಜ್ ನಾಯ್ಕೂನನ್ನು ಭದ್ರತಾಪಡೆಗಳು ಪುಲ್ವಾಮದಲ್ಲಿ ಹತ್ಯೆಗೈದಿವೆ.

ಮೇ 3ರಂದು ಉಗ್ರರ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯೊಂದರಲ್ಲಿ, ಕರ್ನಲ್, ಮೇಜರ್, ಇಬ್ಬರು ಸೇನಾಧಿಕಾರಿಗಳು ಹಾಗೂ ಓರ್ವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News