ಸಿಬಿಎಸ್‌ಇ: ಜುಲೈ 1ರಿಂದ 15ರವರೆಗೆ 10,12ನೇ ತರಗತಿ ಪರೀಕ್ಷೆ

Update: 2020-05-25 15:08 GMT

ಹೊಸದಿಲ್ಲಿ, ಎ.25: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಸಂಸ್ಥೆ (ಸಿಬಿಎಸ್‌ಇ)ಯ 10 ಹಾಗೂ 12ನೇ ತರಗತಿಗಳ ಬಾಕಿಯಿರುವ ಪರೀಕ್ಷೆಗಳನ್ನು ಜುಲೈ 1ರಿಂದ ಜುಲೈ 15ರವರೆಗೆ ದೇಶಾದ್ಯಂತದ 15 ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದೆಂದು ಕೇಂದ್ರ ಮಾನವಸಂಪನ್ಮೂಲಾಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಸೋಮವಾರ ತಿಳಿಸಿದ್ದಾರೆ.

ಇದಕ್ಕೂ ಮುನ್ನ 3 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸುವುದಾಗಿ ಕೇಂದ್ರ ಸರಕಾರ ಘೋಷಿಸಿತ್ತು.

ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಸುರಕ್ಷಿತ ಅಂತರ ಹಾಗೂ ಅವರ ಪ್ರಯಾಣದ ಅವಧಿಯನ್ನು ಕನಿಷ್ಠಗೊಳಿಸುವ ಉದ್ದೇಶದಿಂದ 10 ಹಾಗೂ 12ನೇ ತರಗತಿಗಳ ಪರೀಕ್ಷೆಗಳನ್ನು ಆಯೋಜಿಸಲಾಗುವುದು ಎಂದು ಪೋಖ್ರಿಯಾಲ್ ತಿಳಿಸಿದರು. “ಇದಕ್ಕೂ ಮೊದಲು ಸಿಬಿಎಸ್‌ಇ ಕೇವಲ 3 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿತ್ತು’’ ಎಂದವರು ಹೇಳಿದರು.

ಬಾಕಿಯುಳಿದಿರುವ 29 ಪಠ್ಯವಿಷಯಗಳ ಪರೀಕ್ಷೆಗಳನ್ನು ಮಾತ್ರವೇ ನಡೆಸಲಾಗುವುದೆಂದು ಪರೀಕ್ಷಾ ಮಂಡಳಿ ಕಳೆದ ತಿಂಗಳು ಘೋಷಿಸಿತ್ತು.

ಹತ್ತು ಹಾಗೂ 12ನೇ ತರಗತಿಗೆ ಬಾಕಿಯುಳಿದಿರುವ ಎಲ್ಲಾ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೊರಗಿನ ಪರೀಕ್ಷಾ ಕೇಂದ್ರಗಳ ಬದಲು ಅವರು ದಾಖಲಾಗಿರುವ ಶಾಲೆಗಳಲ್ಲಿಯೇ ಬರೆಯಲಿದ್ದಾರೆಂದು ಪೋಖ್ರಿಯಾಲ್ ತಿಳಿಸಿದ್ದರು. ಸಾಮಾನ್ಯವಾಗಿ 10 ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆಂದು ನಿಯೋಜಿಸಲಾದ ನಿಯೋಜಿತ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದೆಂದು ಅವರು ತಿಳಿಸಿದರು.

ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಾರ್ಚ್ 16ರಿಂದೀಚೆಗೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ, ಕಾಲೇಜುಗಳನ್ನು ಮುಚ್ಚುಗಡೆಗೊಳಿಸಲಾಗಿತ್ತು. ಮಾರ್ಚ್ 18ರ ಬಳಿಕ ನಡೆಯಲಿದ್ದ ಎಲ್ಲಾ ಪರೀಕ್ಷೆಗಳನ್ನು ಸಿಬಿಎಸ್‌ಇ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

12ನೇ ತರಗತಿಯ ಪರೀಕ್ಷೆಗಳು ದೇಶಾದ್ಯಂತ ನಡೆಯಲಿದ್ದರೆ, ಹತ್ತನೇ ತರಗತಿ ಪರೀಕ್ಷೆಗಳು ಈಶಾನ್ಯ ದಿಲ್ಲಿಯಲ್ಲಿ ಮಾತ್ರವೇ ನಡೆಯಲು ಬಾಕಿಯುಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News