ಶ್ರೀನಗರ: ಕರ್ತವ್ಯಕ್ಕೆ ತೆರಳುತ್ತಿದ್ದ ಹಿರಿಯ ವೈದ್ಯರಿಗೆ ಥಳಿಸಿದ ಪೊಲೀಸ್

Update: 2020-05-25 18:17 GMT

ಶ್ರೀನಗರ, ಮೇ 25: ಕಳೆದ ವಾರಾಂತ್ಯದಲ್ಲಿ ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಹಿರಿಯ ವೈದ್ಯ ಡಾ. ಸೈಯದ್ ಮಕ್ಬೂಲ್ ಅವರನ್ನು ಪೊಲೀಸರು ಬಂಧಿಸಿ, ಅಪಮಾನಿಸಿದರೆನ್ನಲಾದ ಘಟನೆಯ ಬಗ್ಗೆ ವೈದ್ಯಕೀಯ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಿರಿಯ ಹೃದ್ರೋಗ ತಜ್ಞರಾದ ಡಾ.ಸೈಯದ್ ಮಕ್ಬೂಲ್ , ಮೇ 23ರಂದು ಬೆಳಗ್ಗೆ ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಾಗ, ಹವಾಲ್ ಪ್ರದೇಶದಲ್ಲಿ ಪೊಲೀಸ್ ಒಬ್ಬಾತ ತನ್ನನ್ನು ತಡೆದು ನಿಲ್ಲಿಸಿ, ಹಿಂದೆ ಹೋಗುವಂತೆ ತಿಳಿಸಿದ್ದ. ತಾನು ಗುರುತುಚೀಟಿ ಹಾಗೂ ಕರ್ತವ್ಯದ ಪಾಳಿಯ ರೋಸ್ಟರ್ ಪಟ್ಟಿಯನ್ನು ತೋರಿಸಿದೆ. ಆದರೆ ಅದಕ್ಕೆ ಒಪ್ಪದ ಪೊಲೀಸ್, ತನ್ನನ್ನು ನಿಂದಿಸತೊಡಗಿದನೆಂದು ಪೊಲೀಸರು ತಿಳಿಸಿದ್ದಾರೆ.

‘‘ನಾನು ವಾಹನದಿಂದ ಇಳಿದು, ಹಿರಿಯ ಪೊಲೀಸ್ ಅಧಿಕಾರಿಯ ಜೊತೆ ಮಾತನಾಡಬಯಸುವುದಾಗಿ ಪೊಲೀಸ್‌ಗೆ ತಿಳಿಸಿದಾಗ, ಆತ ಪ್ಲಾಸ್ಟಿಕ್ ದೊಣ್ಣೆಯಿಂದ ತನ್ನ ಹೊಟ್ಟೆಗೆ ಥಳಿಸಿದನು’’ಎಂದು ಡಾ. ಸೈಯದ್ ಆಪಾದಿಸಿದ್ದಾರೆ.

ಆನಂತರ ತನ್ನನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು ಹಾಗೂ ಮೊಬೈಲ್‌ಸೆಟ್ ಅನ್ನು ಕಿತ್ತುಕೊಳ್ಳಲಾಯಿತೆಂದು ಅವರು ದೂರಿದ್ದಾರೆ. ಒಂದು ದಿನ ಠಾಣೆಯಲ್ಲೇ ಕಳೆದ ಬಳಿಕ ತನ್ನಿಂದ ಮುಚ್ಚಳಿಕೆಗೆ ಸಹಿಹಾಕಿಸಿಕೊಂಡು ಬಿಡುಗಡೆ ಮಾಡಲಾಯಿತೆಂದು ಅವರು ಹೇಳಿದ್ದಾರೆ.

ವೈದ್ಯರ ಮೇಲೆ ಹಲ್ಲೆ ನಡೆದ ಘಟನೆಯನ್ನು ಶ್ರೀನಗರದ ಸರಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಪ್ರಾಂಶುಪಾಲೆ ಡಾ. ಸಾಮಿಯಾ ರಶೀದ್ ಖಂಡಿಸಿದ್ದು, ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಮಧ್ಯೆ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸುವುದಾಗಿ ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ ಹಸೀಬ್ ಮುಘಲ್ ತಿಳಿಸಿದ್ದಾರೆ. ಪೊಲೀಸ್‌ಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಡಾ. ಸೈಯದ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News