ಮುಂಬೈ: ಕೋವಿಡ್‌ಗೆ ಕಾನ್ಸ್‌ಟೇಬಲ್ ಬಲಿ

Update: 2020-05-25 18:19 GMT

ಮುಂಬೈ, ಮೇ 25: ಮಹಾನಗರದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಸೋಮವಾರ ಕೋವಿಡ್-19ನಿಂದ ಮೃತಪಟ್ಟಿದ್ದು, ಇದರೊಂದಿಗೆ ಮುಂಬೈ ನಗರದಲ್ಲಿ ಸೋಂಕಿಗೆ ಬಲಿಯಾದ ಪೊಲೀಸ್ ಸಿಬ್ಬಂದಿಯ ಸಂಖ್ಯೆ 12ಕ್ಕೇರಿದೆೆ.

ಕೊರೋನ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾನ್ಸ್‌ಟೇಬಲ್‌ನನ್ನು ಮೇ 23ರಂದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 24ರಂದು ಅವರಿಗೆ ಕೊರೋನ ಪಾಸಿಟಿವ್ ಬಂದಿದ್ದು,ಅಂದೇ ಮೃತಪಟ್ಟಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರ ಸಂಚಾರ ಪೊಲೀಸ್ ಇಲಾಖೆಯ ತರಬೇತಿ ವಿಭಾಗದಲ್ಲಿ ನಿಯೋಜಿತರಾಗಿದ್ದ ಕಾನ್ಸ್‌ಟೇಬಲ್‌ಗೆ 55 ವರ್ಷವಾಗಿದ್ದರಿಂದ, ಸರಕಾರಿ ಆದೇಶದಂತೆ ಕಳೆದ ಒಂದು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ 55 ವರ್ಷಕ್ಕಿಂತ ಮೇಲ್ಪಟ್ಟ ಹಾಗ ಅನಾರೋಗ್ಯಪೀಡಿತರಾದ ಪೊಲೀಸ್‌ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಂತೆ ಒಂದು ತಿಂಗಳ ಮೊದಲೇ ಮಹಾರಾಷ್ಟ್ರ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು.

ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 18 ಮಂದಿ ಪೊಲೀಸ್ ಸಿಬ್ಬಂದಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News