ನಕಲಿ ಅಶ್ಲೀಲ ಫೋಟೊ ಬಳಸಿ ಜಾಮಿಯಾ ವಿದ್ಯಾರ್ಥಿನಿಯ ವಿರುದ್ಧ ಅಪಪ್ರಚಾರ: ಕೀಳುಮಟ್ಟಕ್ಕಿಳಿದ ಕೇಸರಿ ಟ್ರೋಲ್ ಗಳು

Update: 2020-05-26 13:23 GMT

ಹೊಸದಿಲ್ಲಿ : ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಾಮಿಯಾ ವಿದ್ಯಾರ್ಥಿನಿಯೊಬ್ಬರ ಹೆಸರಿಗೆ ಮಸಿ ಬಳಿಯಲು ಕೀಳುಮಟ್ಟಕ್ಕಿಳಿದಿರುವ ಕೇಸರಿ ಟ್ರೋಲ್ ಗಳು ನಕಲಿ ಅಶ್ಲೀಲ ಫೋಟೊವೊಂದನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.

ಎಐಎಂಐಎಂ ನಾಯಕ ಹಾಗೂ ಸಂಸದ ಅಸದುದ್ದೀನ್ ಒವೈಸಿ ಅವರು ಕೆಲ ಮುಸ್ಲಿಂ ಮಹಿಳೆಯರ ಜತೆ ಮಾತನಾಡುತ್ತಿರುವ ಫೋಟೊದ ಜೊತೆಗೆ ಯುವತಿಯೊಬ್ಬಳ ಅಶ್ಲೀಲ ಫೋಟೊವನ್ನು ಈ ಟ್ರೋಲ್ ಗಳು ಶೇರ್ ಮಾಡುತ್ತಿವೆ. ತನ್ನನ್ನು ‘ಸಕ್ರಿಯ ಬಿಜೆಪಿ ಕಾರ್ಯಕರ್ತ' ಎಂದು ತನ್ನನ್ನು ಕರೆಸಿಕೊಳ್ಳುವ @ಗೆಹ್ಲೋಟ್‍ಕಾನ್ಪುರ್ ಎಂಬ ಟ್ವಿಟ್ಟರ್ ಹ್ಯಾಂಡಲ್ ಹೊಂದಿರುವ ವ್ಯಕ್ತಿ ಇತ್ತೀಚೆಗೆ  ಈ ಫೋಟೊಗಳನ್ನು ಪೋಸ್ಟ್ ಮಾಡಿದ್ದ.  ಒವೈಸಿ  ಜತೆ ಮಾತನಾಡುತ್ತಿರುವ ಮಹಿಳೆಯರ ಪೈಕಿ ಕೆಂಪು ವೃತ್ತದ  ಮೂಲಕ ಗುರುತಿಸಲ್ಪಟ್ಟ ಮಹಿಳೆಯೇ ಅಶ್ಲೀಲ ಫೋಟೊದಲ್ಲಿರುವ ಮಹಿಳೆ ಎಂದು ಆರೋಪಿಸಲಾಗಿತ್ತು.  

ಇದೇ ಫೋಟೋವನ್ನು ಹಲವು ಬಿಜೆಪಿ ಕಾರ್ಯಕರ್ತರೆಂದು ತಿಳಿಯಲಾದ ಮಂದಿ ಶೇರ್ ಮಾಡಿದ್ದರು. “ಸಬೀನಾ ಬಾನೋಳ ವರ್ಣರಂಜಿತ ವೀಡಿಯೋ ನೋಡಬೇಕಿದ್ದರೆ ಸಂದೇಶ ಕಳುಹಿಸಿ'' ಎಂದೂ ಕೆಲವರು ಬರೆದಿದ್ದರು.

altnews.in ಈ ಚಿತ್ರವನ್ನು ರಿವರ್ಸ್ ಸರ್ಚ್ ಮಾಡಿದಾಗ  ಹಲವಾರು ಭಾರತೀಯ ಅಶ್ಲೀಲ ವೆಬ್ ಸೈಟ್‍ ಗಳಲ್ಲಿ ಈ ನಕಲಿ ಅಶ್ಲೀಲ ಫೋಟೊ ಕಂಡುಬಂದಿದೆ. ಈ ಅಶ್ಲೀಲ ಫೋಟೊದಲ್ಲಿರುವ ಯುವತಿ ಬೇರೊಬ್ಬ ವ್ಯಕ್ತಿಯ  ಜತೆಗಿರುವ ವೀಡಿಯೋಗಳೂ ಇದ್ದವು. ಆಕೆಗೆ ತಿಳಿಯದೆಯೇ ಈ ಚಿತ್ರಗಳನ್ನು ಆತ ಸೋರಿಕೆ ಮಾಡಿರುವ ಸಾಧ್ಯತೆಯಿದೆ. ಅಶ್ಲೀಲ ಫೋಟೊದಲ್ಲಿರುವ ಮಹಿಳೆ ಮತ್ತು ಒವೈಸಿ ಜತೆ ಮಾತನಾಡುತ್ತಿರುವ ಮಹಿಳೆಯರ ಗುಂಪಿನಲ್ಲಿದ್ದ ವಿದ್ಯಾರ್ಥಿನಿಯ ಮುಖವನ್ನು ಗಮನಿಸಿದಾಗ ಅವರಿಬ್ಬರೂ ಬೇರೆ ಬೇರೆ ಎನ್ನುವುದು ಒಂದೇ ನೋಟಕ್ಕೆ ಸ್ಪಷ್ಟವಾಗುತ್ತದೆ.

ಡಿಸೆಂಬರ್ 2019ರಲ್ಲಿ ಜಾಮಿಯಾ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರಾದ ಲದೀದಾ ಫರ್ಝಾನ ಹಾಗೂ ಆಯೆಷಾ ರೆನ್ನಾ ಅವರು ಒವೈಸಿ ಅವರನ್ನು ಸಿಎಎ ವಿರೋಧಿ ಹೋರಾಟದ ಸಂದರ್ಭ ಭೇಟಿಯಾದ ಫೋಟೋ ಇದಾಗಿದೆ. ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ, ಅದರಲ್ಲೂ ಪ್ರಮುಖವಾಗಿ ಮಹಿಳಾ ಹೋರಾಟಗಾರರ ವಿರುದ್ಧ ದುಷ್ಕರ್ಮಿಗಳು ನಡೆಸುತ್ತಿರುವ ಆನ್ ಲೈನ್ ಅಪಪ್ರಚಾರದಲ್ಲಿ ಇದೂ ಒಂದಾಗಿದೆ. ಆದರೆ ಇದೀಗ ನಕಲಿ ಅಶ್ಲೀಲ ಫೋಟೊವನ್ನು ಬಳಸಿಕೊಂಡು ಕೇಸರಿ ಟ್ರೋಲ್ ಗಳು ಕೀಳುಮಟ್ಟಕ್ಕಿಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News