ಕೋವಿಡ್-19 ವಿರಾಮದ ಬಳಿಕ ವಿಂಡೀಸ್ ಕ್ರಿಕೆಟಿಗರಿಂದ ತರಬೇತಿ ಪುನರಾರಂಭ

Update: 2020-05-27 05:51 GMT

ಕಿಂಗ್‌ಸ್ಟನ್, ಮೇ 26: ಜುಲೈನಲ್ಲಿ ನಡೆಯಲಿರುವ ಪ್ರಸ್ತಾವಿತ ಇಂಗ್ಲೆಂಡ್ ಪ್ರವಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ವೆಸ್ಟ್‌ಇಂಡೀಸ್ ಟೆಸ್ಟ್ ತಂಡದ ಕೆಲವು ಆಟಗಾರರು ನಾಯಕ ಜೇಸನ್ ಹೋಲ್ಡರ್ ನೇತೃತ್ವದಲ್ಲಿ ಸಣ್ಣ ಗುಂಪುಗಳಾಗಿ ತರಬೇತಿ ಪುನರಾರಂಭಿಸಿದರು. ಕೊರೋನ ವೈರಸ್ ಹತೋಟಿಗೆ ತರಲು ಘೋಷಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ದೀರ್ಘ ಸಮಯ ವಿರಾಮ ಪಡೆದಿದ್ದ ವಿಂಡೀಸ್ ಕ್ರಿಕೆಟಿಗರು ನೆಟ್ ಪ್ರಾಕ್ಟೀಸ್‌ನಿಂದ ದೂರವೇ ಉಳಿದಿದ್ದರು. ಸೋಮವಾರ ಕೆನ್ಸಿಂಗ್‌ಟನ್ ಓವಲ್‌ನ ಮುಚ್ಚಿದ ಬಾಗಿಲೊಳಗೆ ಕ್ರೆಗ್ ಬ್ರಾತ್‌ವೇಟ್, ಶೈ ಹೋಪ್, ಕೆಮಾರ್ ರೋಚ್, ಶೇನ್ ಡೌರಿಚ್, ಶಾಮ್ರಾಹ್ ಬ್ರೂಕ್ಸ್ ಹಾಗೂ ರೇಮನ್ ರೆಫರ್ ತರಬೇತಿ ಆರಂಭಿಸಿದರು.

‘‘ಅಧಿಕಾರಿಗಳು ಹಾಗೂ ಕ್ರಿಕೆಟ್ ವೆಸ್ಟ್‌ಇಂಡೀಸ್‌ನ ವೈದ್ಯಕೀಯ ಸಲಹಾ ಸಮಿತಿ ಸಿದ್ಧ್ದಪಡಿಸಿರುವ ಸುರಕ್ಷಿತ ಅಂತರ, ಮಾರ್ಗಸೂಚಿಯಂತಹ ಕಟ್ಟುನಿಟ್ಟಿನ ಶಿಷ್ಟಾಚಾರದೊಂದಿಗೆ ಸ್ಥಳೀಯ ಸರಕಾರ ಮುಚ್ಚಿದ ಬಾಗಿಲೊಳಗೆ ತರಬೇತಿ ಆರಂಭಿಸಲು ಅನುಮತಿ ನೀಡಿತ್ತು’’ ಎಂದು ಕ್ರಿಕೆಟ್ ಮಂಡಳಿಯು ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಆಟಗಾರರು ವೆಸ್ಟ್‌ಇಂಡೀಸ್ ಸಹಾಯಕ ಕೋಚ್ ರಾಡ್ಡಿ ಎಸ್ಟ್ ವಿಕ್ ಹಾಗೂ ಬಾರ್ಬಡೊಸ್ ಕ್ರಿಕೆಟ್ ಸಂಸ್ಥೆಯ ಇತರ ಕೋಚ್‌ಗಳ ಹದ್ದಿನ ಕಣ್ಣಿನಡಿ ತರಬೇತಿ ನಡೆಸಿದರು.

  ‘‘ಕಳೆದ ಕೆಲವು ವಾರಗಳಿಂದ ಮನೆಯಲ್ಲೇ ಫಿಟ್ನೆಸ್ ಹಾಗೂ ಕಂಡೀಶನಿಂಗ್ ಕೆಲಸಕ್ಕೆ ಸೀಮಿತವಾಗಿದ್ದ ಆಟಗಾರರು ಇದೀಗ ಕ್ರಿಕೆಟ್ ತರಬೇತಿಯನ್ನು ಆರಂಭಿಸಿದ್ದು ಒಳ್ಳೆಯ ಸುದ್ದಿ. ನಾವು ವಿಸ್ಡನ್ ಟ್ರೋಫಿ ಉಳಿಸಿಕೊಳ್ಳುವತ್ತ ತಯಾರಿ ಆರಂಭಿಸಿದ್ದೇವೆ’’ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಂಬಂಧಿಸಿ ಕ್ರಿಕೆಟ್ ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಯೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ. ಸರಣಿಯು ಯೋಜನೆಯಂತೆ ನಡೆಯುವ ಸಂಪೂರ್ಣ ವಿಶ್ವಾಸದಲ್ಲಿದೆ.

ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಸಹಿತ ಇಂಗ್ಲೆಂಡ್ ಆಟಗಾರರು ತರಬೇತಿಯನ್ನು ಪುನರಾರಂಭಿಸಿದ್ದು, ಕೊರೋನ ವೈರಸ್ ಬಳಿಕ ಕ್ರಿಕೆಟ್ ಚಟುವಟಿಕೆಗೆ ಮರಳಿದ ಮೊದಲ ತಂಡ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News