ಭಾರತಕ್ಕೆ ವಿಜಯ್ ಮಲ್ಯ ಗಡಿಪಾರು ಮತ್ತಷ್ಟು ವಿಳಂಬ

Update: 2020-05-28 04:14 GMT

ಲಂಡನ್ : ವಿವಾದಾತ್ಮಕ ಉದ್ಯಮಿ ವಿಜಯ್ ಮಲ್ಯ ರನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಕಾನೂನಾತ್ಮಕ ಕಾರಣಗಳಿಂದಾಗಿ ಈ ಪ್ರಕ್ರಿಯೆ ಮುಂದೂಡಲು ಬ್ರಿಟನ್‌ನ ಗೃಹ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮಲ್ಯ ಬ್ರಿಟನ್‌ನಲ್ಲಿ ಆಶ್ರಯ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದ್ದು, ಇದರ ಜತೆಗೆ ಬ್ರಿಟನ್‌ನಲ್ಲಿ ಮಲ್ಯ ಸಿವಿಲ್ ದಾವೆಗಳನ್ನು ಎದುರಿಸುತ್ತಿರುವ ಅಂಶ ಗೃಹ ಇಲಾಖೆಗೆ ತೊಡಕಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ಗೃಹ ಕಾರ್ಯದರ್ಶಿ ಪ್ರೀತಿ ಪಾಟೀಲ್ ಅವರ ಅನುಮತಿ ಇಲ್ಲದೇ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗದು. ಬ್ರಿಟನ್‌ನಿಂದ ಗಡಿಪಾರು ಮಾಡುವ ಕ್ರಮವನ್ನು ಪ್ರಶ್ನಿಸಿದ್ದ ಎಲ್ಲ ಪ್ರಕರಣಗಳಲ್ಲಿ ಮಲ್ಯಗೆ ಮೇ 14ರಂದು ಸೋಲು ಉಂಟಾಗಿದ್ದರೂ, ಗೃಹ ಕಾರ್ಯದರ್ಶಿ ಇನ್ನೂ ಉದ್ಯಮಿಯ ಗಡಿಪಾರಿಗೆ ಹಸಿರು ನಿಶಾನೆ ತೋರಿಲ್ಲ.

2020ರ ಮೇ 14ರಿಂದ 28 ದಿನಗಳ ಒಳಗಾಗಿ ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ ಎಂದು ಭಾರತೀಯ ಹೈಕಮಿಷನ್ ಮೂಲಗಳು ಹೇಳಿವೆ. ಖಚಿತವಾಗಿ ಒಂದಷ್ಟು ವಿಳಂಬವಾಗಲಿದೆ. ಎಲ್ಲವೂ ಬ್ರಿಟನ್ ಸರ್ಕಾರದ ಕೈಯಲ್ಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮಲ್ಯ ಬ್ರಿಟನ್ ರಾಜಾಶ್ರಯಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ ಹಾಗೂ ಲಂಡನ್‌ನಲ್ಲಿರುವ ಭಾರತೀಯ ಹೈ ಕಮಿಷನ್, ಪ್ರತಿ ದಿನ ಈ ಸಂಬಂಧ ಅಪ್‌ಡೇಟ್ ನೀಡುವಂತೆ ಗೃಹ ಇಲಾಖೆ ಮೇಲೆ ಒತ್ತಡ ಹೇರಿದೆ ಎಂದು ಮೂಲಗಳು ಹೇಳಿವೆ.

ಭಾರತ ಸರ್ಕಾರದ ಆದ್ಯತೆ ಚೀನಾ ಜತೆಗಿನ ಸಂಘರ್ಷ ಮತ್ತು ಕೋವಿಡ್-19 ಕಡೆಗೆ ಇರುವ ಕಾರಣದಿಂದ ಕೆಲ ತಿಂಗಳ ಕಾಲ ವಿಳಂಬವಾದರೂ ಈ ಬಗ್ಗೆ ಭಾರತ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News