ಮಿಡತೆ ಹಾವಳಿ ತಡೆಗೆ ಡ್ರೋನ್ ನೆರವು !

Update: 2020-05-28 05:47 GMT

ಜೈಪುರ: ರಾಜಸ್ಥಾನದಲ್ಲಿ ವ್ಯಾಪಕವಾಗಿ ಇರುವ ಮಿಡತೆ ಹಾವಳಿ ತಡೆಗೆ ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳುವ ವಿನೂತನ ಪ್ರಯತ್ನಕ್ಕೆ ರಾಜ್ಯ ಕೃಷಿ ಇಲಾಖೆ ಮುಂದಾಗಿದೆ.

ಇದಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಡ್ರೋನ್ ‌ಗಳನ್ನು ಕೇಂದ್ರ ಕೃಷಿ ಸಚಿವಾಲಯ, ರಾಜ್ಯ ಕೃಷಿ ಅಭಿವೃದ್ಧಿ ಇಲಾಖೆಗೆ ಮಂಗಳವಾರ ಹಸ್ತಾಂತರಿಸಿದೆ. ಬುಧವಾರ ಇದರ ಕಾರ್ಯಾಚರಣೆ ಆರಂಭವಾಗಿದ್ದು, ಚೋಮು ತಾಲೂಕಿನ ಸಮೋದ್ ಗ್ರಾಮದಲ್ಲಿ ಮಿಡತೆಗಳನ್ನು ತಡೆಯಲು ಇದನ್ನು ಬಳಸಲಾಗಿದೆ.

ಈ ವಿಶೇಷ ಉದ್ದೇಶದ ಡ್ರೋನ್ ‌ಗಳು 10 ಮೀಟರ್ ರಾಸಾಯನಿಕಗಳನ್ನು ಸಿಂಪಡಿಸುವ ಜತೆಗೆ ಮಿಡತೆಗಳನ್ನು ವಿಭಿನ್ನ ಕಡೆಗಳಿಗೆ ಚದುರುವಂತೆ ಮಾಡುವ ಸಲುವಾಗಿ ದೊಡ್ಡ ಶಬ್ದವನ್ನು ಹೊರಸೂಸುತ್ತದೆ. ಮುಕ್ತ ಪ್ರದೇಶದಲ್ಲಿ ಮತ್ತು ಇದು ಟ್ರ್ಯಾಕ್ಟರ್ ತಲುಪಲಾಗದ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಮಿಡತೆಗಳ ಸಂಚಾರವನ್ನು ಯಶಸ್ವಿಯಾಗಿ ತಡೆದಿದೆ. ಕ್ಷೇತ್ರ ಅಧಿಕಾರಿಗಳು ಈ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಎಂದು ರಾಜ್ಯ ಕೃಷಿ ಇಲಾಖೆ ಆಯುಕ್ತ ಓಂಪ್ರಕಾಶ್ ಹೇಳಿದ್ದಾರೆ. ಈ ಉದ್ದೇಶಕ್ಕಾಗಿ 30 ಡ್ರೋನ್ ‌ಗಳನ್ನು ನಿಯೋಜಿಸುವ ಸಂಬಂಧ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡ್ರೋನ್ ‌ಗೆ ಅಳವಡಿಸಿದ ಸಿಂಪಡಣೆ ಟ್ಯಾಂಕ್ 10 ನಿಮಿಷಗಳ ಅವಧಿಯಲ್ಲಿ ಖಾಲಿಯಾಗುತ್ತದೆ. ಆದ್ದರಿಂದ ಟ್ರ್ಯಾಕ್ಟರ್ ಸಹಾಯದಿಂದ ಹ್ಯಾಂಡ್ಲರ್ ಮೂಲಕ ಅದರ ಮರುಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಮಿತವೆಚ್ಚದ ಕ್ರಮವಾಗಿದೆ ಎಂದು ಕೃಷಿ ಇಲಾಖೆ ಮತ್ತು ಮಿಡತೆ ಎಚ್ಚರಿಕೆ ಸಂಸ್ಥೆ ಅಭಿಪ್ರಾಯಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News