ಲಾಕ್‍ ಡೌನ್‍ನಿಂದ ಕಳೆದ ತಿಂಗಳು 12 ಕೋಟಿ ಭಾರತೀಯರ ಉದ್ಯೋಗ ನಷ್ಟ: ವರದಿ

Update: 2020-05-28 08:10 GMT

ಹೊಸದಿಲ್ಲಿ: ಕೋವಿಡ್-19 ತಡೆಗಟ್ಟುವ ಸಲುವಾಗಿ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್‍ನಿಂದಾಗಿ ಕಳೆದ ತಿಂಗಳೊಂದರಲ್ಲಿಯೇ ಸುಮಾರು 12 ಕೋಟಿ ಭಾರತೀಯರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆಂದು  ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಎಂಬ ಖಾಸಗಿ ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

ದಿನಗೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರ ಸಂಸ್ಥೆಗಳ ನೌಕರರು ಈ ಉದ್ಯೋಗ ನಷ್ಟದಿಂದ ತೀವ್ರವಾಗಿ ಬಾಧಿತರಾದವರು. ಹೀಗೆ ಬಾಧಿತರಾದವರಲ್ಲಿ  ಬೀದಿ ಬದಿ ವ್ಯಾಪಾರಿಗಳು, ನಿರ್ಮಾಣ ಕ್ಷೇತ್ರದ ಕಾರ್ಮಿಕರು, ತಳ್ಳುಗಾಡಿ ಕೂಲಿ ಕಾರ್ಮಿಕರು ಸೇರಿದ್ದಾರೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಎಪ್ರಿಲ್ ತಿಂಗಳಲ್ಲಿ  ದೇಶದ 27 ರಾಜ್ಯಗಳ 5,800 ಕುಟುಂಬಗಳನ್ನೊಳಗೊಂಡ ಸಮೀಕ್ಷೆ ಮುಖಾಂತರ ಸಂಗ್ರಹಿಸಿದ್ದ ನಿರುದ್ಯೋಗ ಸಂಬಂಧಿಸಿದ ದತ್ತಾಂಶವನ್ನು ಚಿಕಾಗೋ ವಿವಿಯ ರುಸ್ಟಾಂಡಿ ಸೆಂಟರ್ ಫಾರ್ ಸೋಶಿಯಲ್ ಸೆಕ್ಟರ್ ಇನ್ನೊವೇಶನ್ ಪರಿಶೀಲಿಸಿದೆ. 

ಲಾಕ್ ಡೌನ್‍ನಿಂದಾಗಿ ಗ್ರಾಮೀಣ ಭಾಗಗಳು ತೀವ್ರವಾಗಿ ಬಾಧಿತವಾಗಿದ್ದು, ಆರ್ಥಿಕ ಸಮಸ್ಯೆಯು ಕೊರೋನ ವೈರಸ್‍ನಿಂದಾಗಿ ಅಲ್ಲ ಬದಲಾಗಿ ಲಾಕ್ ಡೌನ್‍ನಿಂದಾಗಿ ಕಾಡಿದೆ. ಶೇ 80ರಷ್ಟು ಕುಟುಂಬಗಳು  ತಮ್ಮ ಆದಾಯ  ಕುಸಿತಗೊಂಡಿದೆ ಹಾಗೂ ಆರ್ಥಿಕ ಸಹಾಯವಿಲ್ಲದೆ ಹೆಚ್ಚು ಕಾಲ ದಿನ ದೂಡಲಾಗದು ಎಂದು ತಿಳಿಸಿವೆ ಎಂದು ವರದಿಯಲ್ಲಿ ಅಧ್ಯಯನಕಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News