ಮಾಸ್ಕ್, ಸ್ಯಾನಿಟೈಸರ್‌ಗಳ ನಡುವೆ

Update: 2020-05-28 17:04 GMT

ವ್ಯಾಪಾರಿಯೊಬ್ಬ ಮುಂಬೈಯ ಕಡೆ ಹೊರಟ್ಟಿದ್ದಾನೆ. ದಾರಿಯಲ್ಲಿ ಅವನು ಕೊರೋನ ಮಾರಿಯನ್ನು ಭೇಟಿ ಮಾಡುತ್ತಾನೆ. ವ್ಯಾಪಾರಿ ಕೇಳುತ್ತಾನೆ..

‘‘ ನೀನು ಎಲ್ಲಿಗೆ ಹೋಗುತ್ತಿರುವೆ?’’
‘‘ನಾನು ಮುಂಬೈಗೆ ಹೋಗುತ್ತಿರುವೆ’’
‘‘ಅಲ್ಲಿ ನೀನು ಎಷ್ಟು ಜನರನ್ನು ಕೊಲ್ಲುವೆ?’’
‘‘5,000 ಸಾವಿರ ಜನರನ್ನು ಕೊಲ್ಲಬೇಕೆಂದಿದ್ದೇನೆ’’
ಕೆಲವು ದಿನಗಳ ನಂತರ ವ್ಯಾಪಾರಿ ಪುನಃ ಕೊರೋನವನ್ನು ಭೇಟಿ ಮಾಡುತ್ತಾನೆ. ಕೇಳುತ್ತಾನೆ:
‘‘5,000 ಜನರನ್ನು ಕೊಲ್ಲುವುದಾಗಿ ಹೇಳಿದ್ದೆಯಲ್ಲವೇ?
ಈಗ ನೋಡು. 60,000 ಸಾವಿರ ಜನ ಸತ್ತಿದ್ದಾರೆ’’
ಕೋಪಗೊಂಡ ಕೊರೋನ ಹೇಳಿತು:
‘‘ನಾನು ಕೊಂದದ್ದು 5,000 ಸಾವಿರ ಜನರನ್ನು ಮಾತ್ರ. ಉಳಿದವರೆಲ್ಲಾ ಸತ್ತದ್ದು ಭಯದಿಂದ’’
ಏನಿದು ಈ ಭಯ? ಯಾರು ಭಯಪಡಿಸಿದವರು?
ಎಲ್ಲ ಕ್ಷೇತ್ರಗಳ ಜನರೂ ಭಯಗೊಂಡಿದ್ದಾರೆ.
ಬ್ಯಾಂಕೊಂದರ ಒಳಗೆ ಹೋದೆ. ಮೊದಲನೇ ಮಹಡಿಯಲ್ಲಿ ದೂರ ದೂರ ಮುರು ಜನ ಸಿಬ್ಬಂದಿ ಕುಳಿತಿದ್ದಾರೆ. ಮೂವರೂ ಮಾಸ್ಕ್ ಧರಿಸಿದ್ದಾರೆ. ಮೂವರೂ ಮಹಿಳೆಯರು. ಮೆಟ್ಟಿಲು ಹತ್ತುತ್ತಿರುವಂತೆಯೇ ಎದುರಿಗೆ ಕಂಡ ಒಬ್ಬಾಕೆ ತಲೆ ಎತ್ತಿ ನೋಡಿದಳು. ಎದುರಿಗೆ ಹಿರಿಯ ನಾಗರಿಕರೊಬ್ಬರು ನಿಂತಿದ್ದಾರೆ. ಅವರನ್ನು ಕಂಡ ಕೂಡಲೇ ಆಕೆ ಗಾಬರಿಯಿಂದ ‘‘ಏನು, ಏನು ಬೇಕು? ಇಲ್ಲಿ ಯಾಕೆ ಬಂದಿರಿ?’’
ಗ್ರಾಹಕ: ‘‘ಡಿಮ್ಯಾಟ್ ಅಕೌಂಟ್ ಬಗ್ಗೆ ವಿಚಾರಿಸಬೇಕಿತ್ತು. ಈ ಸೀಟಿನಲ್ಲಿ ಇರುತ್ತಿದ್ದವರನ್ನು ಕಾಣಬೇಕು. ’’
ಬ್ಯಾಂಕಿನವಳು: ‘‘ಅವರಿಲ್ಲ ಹೋಗಿ, ಹೋಗಿ’’
ಹೆಚ್ಚು ಕಡಿಮೆ ಆಕೆ ಆ ಹಿರಿಯ ನಾಗರಿಕ ಗ್ರಾಹಕನ್ನು ಅಲ್ಲಿಂದ ಓಡಿಸಿಯೇ ಬಿಟ್ಟಳು.
ಸುಮಾರು 10 ಅಡಿ ದೂರದಿಂದಲೇ ಆ ಗ್ರಾಹಕರನ್ನು ಸಾಗ ಹಾಕಿದಳು.
ಸುಮಾರು ಮಧ್ಯವಯಸ್ಸಿನ ಆಕೆಗೆ ಇಷ್ಟೊಂದು ಭಯವನ್ನು ತುಂಬಲಾಗಿದೆ. ಆಕೆಯೂ ಮಾಸ್ಕ್ ಧರಿಸಿದ್ದಳು. ಗ್ರಾಹಕನೂ ಮಾಸ್ಕ್ ಧರಿಸಿದ್ದ. ಬ್ಯಾಂಕ್ ಮುಚ್ಚುವ ಸಮಯ. ನಾಲ್ಕೈದು ಜನ ಹಿರಿಯ, ಮಧ್ಯ ವಯಸ್ಸಿನ ಗ್ರಾಹಕರು ಅವರು ಸಹ ಮಾಸ್ಕ್ ಧರಿಸಿ, ಒಂದು ರೀತಿಯ ಭೀತಿಯಿಂದ ನನ್ನತ್ತ ನೋಡಿದರು. ಅಷ್ಟರಲ್ಲಿ ಬ್ಯಾಂಕಿನ ಅಟೆಂಡರನೊಬ್ಬ ಎದುರಿಗೆ ಸಿಕ್ಕಿದ. ಆಂಜನೇಯನಂತೆ ಕಾಣಿಸುತ್ತಿದ್ದ.
ಆ ಹಿರಿಯ ನಾಗರಿಕರನ್ನು ಕಂಡೊಡನೆ ಅವನೂ ಕೇಳಿದ:
‘‘ಏನು?’’
‘‘ಡಿಮ್ಯಾಟ್ ಅಕೌಂಟ್ ನೋಡುವವರು ಇದ್ದಾರಲ್ಲಾ. ಅವರನ್ನು ಕಾಣಬೇಕಿತ್ತು.’’
‘‘ಅವರಿಲ್ಲ ಇವತ್ತು, ನಾಳೆ ಬೆಳಗ್ಗೆ ಸಿಗುತ್ತಾರೆ’’

ಅವನೂ ಕಡ್ಡಿಮುರಿದಂತೆ ಮಾತಾಡಿ ಮುಂದೆ ಹೊರಟ. ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರ ನಡೆದರು. ಸುರಕ್ಷಿತ ಅಂತರ ಕಾಪಾಡಿಕೊಳ್ಳಿ ಎನ್ನುತ್ತಿದ್ದಂತೆ ಜನ ಅಂಗಡಿ, ಬ್ಯಾಂಕ್, ಪೋಸ್ಟ್ ಆಫೀಸ್ ಮುಂತಾದ ಕಡೆ ದೂರ ದೂರವೇನೋ ನಿಲ್ಲುತ್ತಿದ್ದಾರೆ. ಆದರೆ ಜನರನ್ನು ಸ್ವಲ್ಪ ಗಮನಿಸಿದರೆ ಅದೆಷ್ಟು ಭಯ ಭೀತರಾಗಿದ್ದಾರೆ ಎಂಬುದು ಎದ್ದು ಕಾಣುತ್ತದೆ. ಮಾಸ್ಕ್ ಹಾಕಿಕೊಂಡಿರುವುದರಿಂದ ಎದುರಿಗೆ ಬಂದ ಅಥವಾ ಪಕ್ಕದಲ್ಲಿ ನಿಂತ ವ್ಯಕ್ತಿಯ ಮುಖಚಹರೆ ತಿಳಿಯುವುದಿಲ್ಲ. ಸಾಮಾನ್ಯವಾಗಿ ಯಾರನ್ನಾದರೂ ಕಂಡಾಗ ಕೆಲವೊಮ್ಮೆ ಮಾತನಾಡಿಸಬಹುದು ಎನ್ನುವ ಮುಖಭಾವದವರಿರುತ್ತಾರೆ. ಮಾತನಾಡಿಸಿದಾಗ ಅವರು ಸ್ಪಂದಿಸುತ್ತಾರೆ. ಮತ್ತೆ ಕೆಲವರು ಮಾತನಾಡಿಸದಿದ್ದರೆ ಸಾಕು ಎಂಬಂತಿರುತ್ತಾರೆ. ಆದರೀಗ ಮಾಸ್ಕ್ ಧರಿಸಿದವರ ಮುಖಭಾವ ಗೊತ್ತಾಗುವುದೇ ಇಲ್ಲ. ಈಗಂತೂ ಮಾಸ್ಕ್ ಧರಿಸಿದವರು ಇನ್ನೊಬ್ಬ ಮಾಸ್ಕ್ ಧರಿಸದವರನ್ನು ಅನುಮಾನಾಸ್ಪದವಾಗಿಯೇ ನೋಡುತ್ತಾರೆ. ಅಥವಾ ನನಗೆ ಹಾಗೆ ಅನ್ನಿಸುತ್ತದೆ. ‘ಮಡಿ, ಮಡಿ’ ಎಂದು ದೂರ ನಿಲ್ಲುವವರಂತೆ ಇವರೂ. ಬ್ಯಾಂಕ್, ಪೋಸ್ಟ್ ಆಫೀಸ್ ಇತ್ಯಾದಿ ಕೌಂಟರ್‌ನಲ್ಲಿ ನಮ್ಮ ಕೆಲಸ ಮುಗಿಸಿ ಹೊರಟಾಗ ನಮ್ಮ ಹಿಂದೆ ನಿಂತವರು ನಿಟ್ಟುಸಿರು ಬಿಡುತ್ತಾರೆ. ‘ಸದ್ಯ ಹೋದನಲ್ಲ’ ಎಂದುಕೊಳ್ಳಬಹುದು.

ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರು ಪೊಲೀಸರನ್ನು ಅನತಿ ದೂರದಲ್ಲಿ ಕಾಣುತ್ತಿದ್ದಂತೆ ಹೆಲ್ಮೆಟ್ ಧರಿಸುತ್ತಾರೆ. ಒಂದಷ್ಟು ದೂರ ಮುಂದೆ ಹೋದ ಮೇಲೆ ಹೆಲ್ಮೆಟ್ ತೆಗೆದು ಹಾಯಾಗಿ ಹೋಗುತ್ತಾರೆ. ಹೆಲ್ಮೆಟ್ ಧರಿಸದವರ ಮನೋಭಾವವೇ ಹಾಗೆ: ನನಗೇನೂ ಅಪಘಾತ ಆಗುವುದಿಲ್ಲ. ಎಲ್ಲರಿಗೂ ಅಪಘಾತ ಆಗುವುದೇನೂ ಇಲ್ಲವಲ್ಲ. ಸುಮ್ಮನೆ ಇದೊಂದು ಕಿರಿಕಿರಿ ಎಂದುಕೊಳ್ಳುತ್ತಾರೆ.

ಉಳಿದವರು ಹಾಗಲ್ಲ. ಅವರು ಹೆಲ್ಮೆಟ್ ಇಲ್ಲದೆ ವಾಹನ ಹತ್ತುವುದೇ ಇಲ್ಲ. ಹಿಂಬದಿ ಸವಾರರಾಗಿ ಯಾರಾದರೂ ದಾರಿಯಲ್ಲಿ ಸಿಕ್ಕಿದವರಿಗೆ ಎಂದು ಗಾಡಿಯಲ್ಲೇ ಒಂದು ಎಕ್ಸ್‌ಟ್ರಾ ಹೆಲ್ಮೆಟ್ ಸಹಾ ಇಟ್ಟಿರುತ್ತಾರೆ.

ಈ ಎರಡನೆಯವರ ರೀತಿ ಮಾಸ್ಕ್ ಧರಿಸುವವರು ಅಲ್ಲಲ್ಲಿ ಕೆಲವು ಕಡೆ ಇವರು ಮೂಗಿನಿಂದ ಕೆಳಕ್ಕೆ ಮಾಸ್ಕ್ ಅನ್ನು ಎಳೆದುಕೊಳ್ಳುತ್ತಿರುತ್ತಾರೆ. ಈಗಂತೂ ಎಲ್ಲರಿಗೂ ಒಳ್ಳೆಯ ಗುಣಮಟ್ಟದ್ದೇ ಮಾಸ್ಕ್ ಬೇಕು. ಕೆಲವರು ಸುಮಾರಾದ, ತೆಳ್ಳನೆಯ ಒಂದೆರಡು ಸಾರಿ ಧರಿಸಿ ಬಿಸಾಡುವಂತಹ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಮತ್ತೆ ಕೆಲವರು ಅರ್ಧ ಮುಖವನ್ನೇ ಮುಚ್ಚಿದ ಮಾಸ್ಕ್ ಹಾಕುತ್ತಾರೆ. ಮೂಗಿನಿಂದ 2 ಅಂಗುಲ ಮುಂದೆ ಚಾಚಿಕೊಂಡಿರುವ ಮಾಸ್ಕ್ ಸಹಾ ಧರಿಸುತ್ತಾರೆ. ಹೆಣ್ಣು ಮಕ್ಕಳಂತೂ ಬಣ್ಣ ಬಣ್ಣದ ಮಾಸ್ಕ್‌ಗಳನ್ನು ಧರಿಸಿ, ಅವರ ಡ್ರೆಸ್‌ಗೆ ಮ್ಯಾಚ್ ಆಗುವಂತಹ ಮಾಸ್ಕ್ ಧರಿಸಿ, ಬೀಗುತ್ತಾ ರಸ್ತೆಗಳಲ್ಲಿ ಓಡಾಡುತ್ತಾರೆ. ಒಂದೇ ಬಣ್ಣದ ಮಾಸ್ಕ್ ಕೊಂಡುಕೊಂಡ ದಂಪತಿಗೆ ಗೊಂದಲವುಂಟಾಗಿ ಹೆಂಡತಿ ತನ್ನ ಮಾಸ್ಕ್‌ಗೆ ಬಣ್ಣದ ದಾರದಿಂದ ತನ್ನ ಇನಿಷಿಯಲ್ ಅನ್ನು ಹೊಲಿದುಕೊಳ್ಳುತ್ತಾಳೆ.

ಇನ್ನೂ ಶಾಲೆಗಳು ಆರಂಭವಾಗಿಲ್ಲ. ಶಾಲೆಗಳ ಪಕ್ಕದಲ್ಲಿರುವ ಸ್ಟೇಷನರಿ, ಯುನಿಫಾರ್ಮ್ ಒದಗಿಸುವ ಅಂಗಡಿಗಳನ್ನು ನೋಡಿ. ಆ ಅಂಗಡಿಗಳಲ್ಲಿ ಇನ್ನು ಮುಂದೆ ಬಣ್ಣ ಬಣ್ಣದ ತರಹೇವಾರಿ ಮಾಸ್ಕ್‌ಗಳು ಮಾರಾಟಕ್ಕೆ ಲಭ್ಯವಾಗುತ್ತವೆ. ತಂದೆ ತಾಯಿಯರು ಒಮ್ಮೆಲೆ ವಾರಕ್ಕೆ ಬೇಕಾದ ಸಂಖ್ಯೆಯ ಮಾಸ್ಕ್‌ಗಳನ್ನು ಕೊಳ್ಳುತ್ತಾರೆ. ದಿನಕ್ಕೊಂದು ಬಣ್ಣದ್ದು ಬೇಕು ಎಂದು ಮಗು ಹಟ ಹಿಡಿಯಲೂಬಹುದು. ಶಾಲೆಯಿಂದ ವಾಪಸ್ ಬರುವಾಗ ಮಗುವಿನ ಮುಖದ ಮೇಲೆ ಮಾಸ್ಕ್ ಇಲ್ಲದೆ ಬರಬಹುದು. ಸಹಪಾಠಿ ಕಿತ್ತು ಹಾಕಿದನೆಂಬ ಕಂಪ್ಲೇಂಟ್ ಬರಬಹುದು. ಮಗು ಟಾಯ್ಲೆಟ್‌ಗೆ ಹೋದಾಗ ಅಲ್ಲಿ ಮಾಸ್ಕ್ ಬಿದ್ದು ಹೋಯಿತೆನ್ನಬಹುದು. ಕೆಲವು ತಾಯಂದಿರು ಇಂತಹ ಸಂದರ್ಭಗಳನ್ನು ಮೊದಲೇ ಊಹಿಸಿ, ಮಗುವಿನ ಬ್ಯಾಗಿನೊಳಗೆ ಇನ್ನೊಂದು ಮಾಸ್ಕ್ ಅನ್ನು ಇಟ್ಟಿರಬಹುದು. ಆಕಸ್ಮಾತ್ ಮಾಸ್ಕ್ ಧರಿಸದೇ ಶಾಲೆಗೆ ಬಂದ ಮಗುವನ್ನು ವಾಪಸ್ ಮನೆಗೆ ಕಳುಹಿಸಲೂಬಹುದು. ಕೆಲವು ಶಾಲೆಗಳು ನಮ್ಮ ಶಾಲೆಯಲ್ಲಿ ಮಾಸ್ಕ್ ಅನ್ನು ನಾವೇ ಕೊಡುತ್ತೇವೆ. ಅವುಗಳನ್ನೇ ಮಕ್ಕಳು ಧರಿಸಬೇಕು ಎಂದು ಹೇಳಬಹುದು. ಬೇರೆ ಮಾಸ್ಕ್ ಧರಿಸಿದವರಿಗೆ ಫೈನ್ ಹಾಕುವ ವ್ಯವಸ್ಥೆ ಜಾರಿಗೆ ಬಂದರೂ ಆಶ್ಚರ್ಯವಿಲ್ಲ. ಮಾಸ್ಕ್ ಮರೆತು ಬಂದ ಮಗುವಿಗೆ ಶಾಲೆಯವರೇ ಒಂದು ಮಾಸ್ಕ್ ಕೊಟ್ಟು ಅದರ ಹಣವನ್ನು ಮಾರನೆಯ ದಿನ ಶಾಲೆಗೆ ತಂದು ಕಟ್ಟುವಂತೆ ಅಪ್ಪಣೆ ಮಾಡಬಹುದು. ಅಕಸ್ಮಾತ್ ಮಗು ಶಾಲೆಯ ಆವರಣದಲ್ಲೆಲ್ಲೊ ಮಾಸ್ಕ್ ಬೀಳಿಸಿಕೊಂಡಿದ್ದರೆ ಮಾಸ್ಕ್ ಕಳೆದುಕೊಂಡ ಮಗುವಿಗೆ ಶಿಕ್ಷೆಯಾಗಬಹುದೇನೋ.

ಮಾಸ್ಕ್‌ನ ಉಪಯೋಗ, ಅದರ ವಿಲೇವಾರಿ ಬಗ್ಗೆ ಮಕ್ಕಳಿಗೆ ವಾರಕ್ಕೊಂದು ಪಿರಿಯಡ್ ಪಾಠ ಮಾಡಬಹುದು. ಇದನ್ನು ಶಾಲೆಯ ಪಿಟಿ ಮಾಸ್ಟರ್ ಮಾಡಬಹುದು. ಇದಲ್ಲದೆ ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು, ಇತರ ಎಲ್ಲಾ ಸಿಬ್ಬಂದಿಯ ಬಳಿಯೂ ಅವರದೇ ಆದ ಸ್ಯಾನಿಟೈಸರ್ ಇರತಕ್ಕದ್ದು. ಇಲ್ಲವಾದರೆ ಶಾಲೆಯಲ್ಲಿರುವ ವಿಶೇಷ ‘ಮಾಸ್ಕ್ ಆ್ಯಂಡ್ ಸ್ಯಾನಿಟೈಸರ್ ಕೌಂಟರ್’ನಲ್ಲಿ ಹಣ ಕೊಟ್ಟು ಕೊಂಡುಕೊಳ್ಳಬೇಕು. ಮಕ್ಕಗಳಿಗಂತೂ ತಂದೆ ತಾಯಿಯರು ಸ್ಕೂಲ್‌ಬ್ಯಾಗ್‌ನಲ್ಲಿ ಒಂದು ಸ್ಯಾನಿಟೈಸರ್ ಬಾಟಲ್ ಇಟ್ಟಿರಬೇಕು. ‘ಮಿಸ್, ನನ್ನ ಸ್ಯಾನಿಟೈಸರ್ ಬಾಟಲ್ ಕಾಣ್ತಾ ಇಲ್ಲ. ಯಾರೋ ತೆಗೆದುಕೊಂಡಿದ್ದಾರೆ’ ಎಂಬ ವಿದ್ಯಾರ್ಥಿಗಳ ಕಂಪ್ಲೇಂಟ್ ತುಂಬಾ ಸಾಮಾನ್ಯವಾಗಬಹುದು. ಸ್ಟಾಫ್‌ರೂಮಿನಲ್ಲಿ ಸ್ಯಾನಿಟೈಸರ್ ಇದ್ದೇ ಇರುತ್ತದೆ. ಪ್ರಿನ್ಸಿಪಾಲರಿಗೆ ಪ್ರತ್ಯೇಕವಾಗಿ ಅವರ ಚೇಂಬರಿನಲ್ಲೇ ದೊಡ್ಡ ಬಾಟಲ್‌ನ ಸ್ಯಾನಿಟೈಸರ್ ಇರುತ್ತದೆ. ಪ್ರಿನ್ಸಿಪಾಲರು ಸಹ ಆಗಾಗ ‘ಮಾಸ್ಕ್ ಆ್ಯಂಡ್ ಸ್ಯಾನಿಟೈಸರ್ ಯೂಸೇಜ್’ ಕ್ಲಾಸ್ ತೆಗೆದುಕೊಳ್ಳಬಹುದು. ಮಕ್ಕಳಿಗೆ ‘ಮಾಸ್ಕ್ ಆ್ಯಂಡ್ ಸ್ಯಾನಿಟೈಸರ್’ ಕಲ್ಚರ್ ಬಗ್ಗೆ ತಿಳುವಳಿಕೆ ಕೊಡಲು ಅವರ ತಂದೆ ತಾಯಿಯರಿಗಾಗಿ ಶಾಲೆಗಳು ಸ್ಪೆಷಲ್ ಕ್ಲಾಸ್‌ಗಳನ್ನು ವ್ಯವಸ್ಥೆ ಮಾಡಿ ಅದಕ್ಕೆ ಇಂತಿಷ್ಟು ಫೀಸು ಎಂದು ಚಾರ್ಜ್ ಮಾಡಬಹುದು. ಇದು ಕಂಪಲ್ಸರಿ ಕ್ಲಾಸು. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ಪ್ರಿನ್ಸಿಪಾಲರು, ಕಾಲೇಜು ಸಿಬ್ಬಂದಿ ವರ್ಗದವರಿಗೆಲ್ಲ ಮಾಸ್ಕ್ ಸ್ಯಾನಿಟೈಸರ್‌ಗಳನ್ನು ಕಾಲೇಜುಗಳಲ್ಲೇ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳ ಫೀಸ್‌ನ ಜೊತೆಗೇ ಮಾಸ್ಕ್, ಸ್ಯಾನಿಟೈಸರ್‌ಗಳ ಚಾರ್ಜ್‌ನ್ನು ಕಟ್ಟಬೇಕು.

ಸಿಬ್ಬಂದಿ ವರ್ಗದವರಿಗೆ ಅವರು ಬಳಸಿದ ಸಂಖ್ಯೆಯ ಮಾಸ್ಕ್, ಸ್ಯಾನಿಟೈಸರ್‌ಗಳ ಲೆಕ್ಕ ಇಟ್ಟು ಅಕೌಂಟ್ಸ್ ಡಿಪಾರ್ಟ್ ಮೆಂಟ್‌ನವರು ಅವರ ಸಂಬಳದಲ್ಲಿ ಹಿಡಿದುಕೊಳ್ಳುತ್ತಾರೆ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ‘ಮಾಸ್ಕ್, ಸ್ಯಾನಿಟೈಸರ್ ಸೇಲ್ಸ್ ಕೌಂಟರ್’ ತೆರೆಯಲಾಗುತ್ತದೆ. ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳ ಮಾಸ್ಕ್, ಸ್ಯಾನಿಟೈಸರ್‌ಗಳ ಬಳಕೆ, ಅನುಕೂಲ, ಅನನುಕೂಲಗಳ ಬಗ್ಗೆ ಸಮೀಕ್ಷೆ, ಅಧ್ಯಯನ, ಸಂಶೋಧನೆಗಳನ್ನು ಮಾಡಲು ರೀಸರ್ಚ್ ಪ್ರಾಜೆಕ್ಟ್‌ಗಳನ್ನು ತಯಾರು ಮಾಡುತ್ತಾರೆ. ಯುಜಿಸಿ ಸಹ ಇದಕ್ಕೆ ಅನುದಾನ ಕೊಡುತ್ತದೆ. ಈ ಬಗ್ಗೆ ಸೆಮಿನಾರ್‌ಗಳು, ಸಿಂಪೋಸಿಯಾಗಳು, ವರ್ಕ್‌ಶಾಪುಗಳು ನಡೆಯುತ್ತವೆ.

ಪ್ರಬಂಧಗಳ ಮಂಡನೆಯಾಗುತ್ತವೆ. ಪಿಎಚ್‌ಡಿ ಮಹಾಪ್ರಬಂಧಗಳು ತಯಾರಾಗುತ್ತವೆ. ಅಂತರ್‌ರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಸಹ ಭಾಗವಹಿಸುವ ಅವಕಾಶ ಸಿಗಬಹುದು. ಬಗೆಬಗೆಯ ಅಧ್ಯಯನಗಳಾಗಬಹುದು. ಮಾಸ್ಕ್ ಧರಿಸುವ ಆಚರಣೆ ಜಾರಿಗೆ ಬರಲಾಗಿ ಲಿಪ್‌ಸ್ಟಿಕ್ ವ್ಯಾಪಾರ ಕುಂಠಿತವಾದ ಅಧ್ಯಯನ, ವಿಧವಿಧ ಡಿಸೈನ್‌ಗಳ ಮಾಸ್ಕ್‌ಗಳ ತಯಾರಿಕೆ, ಮಾಸ್ಕ್ ಧರಿಸಿದ್ದರಿಂದ ಒಬ್ಬರಿಗೊಬ್ಬರು ಗುರುತು ಸಿಗದೇ ಸ್ನೇಹಿತರು, ಬಂಧುಗಳು ಕಂಡರೂ ಮಾತನಾಡಿಸಲಿಲ್ಲವೆಂಬ ದೂರು. ಮಾಸ್ಕ್ ಧರಿಸದೆ, ಫೈನ್ ಕಟ್ಟಬೇಕಾದ ಪ್ರಸಂಗಗಳು, ‘ಮಾಸ್ಕ್ ಧಿರಿಸದೆ ಹೋದ ಮಾನ..’ ಎಂಬ ನುಡಿಗಟ್ಟುಗಳೂ ಜಾರಿಗೆ ಬರಬಹುದು. ಹೀಗೆ ಕೊರೋನ ವೈರಸ್‌ನಿಂದಾಗಿ ಜಗತ್ತಿನಲ್ಲಿ ವೈವಿಧ್ಯಮಯವಾದ ನಡಾವಳಿಗಳು, ಬಿಸಿನೆಸ್‌ಗಳು, ಅಧ್ಯಯನಗಳು ಆಗುತ್ತವೆ.

Writer - ಡಾ.ಎನ್.ಗೋಪಾಲಕೃಷ್ಣ

contributor

Editor - ಡಾ.ಎನ್.ಗೋಪಾಲಕೃಷ್ಣ

contributor

Similar News