ಸಾವಿರಾರು ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಿದ ಸ್ವರಾ ಭಾಸ್ಕರ್

Update: 2020-05-28 18:02 GMT

ಹೊಸದಿಲ್ಲಿ: ಲಾಕ್‍ಡೌನ್‍ ನಿಂದಾಗಿ ಸಂಕಷ್ಟಕ್ಕೀಡಾದ ವಲಸೆ ಕಾರ್ಮಿಕರ ನೆರವಿಗೆ ಹಲವು ಮಂದಿ ಖ್ಯಾತನಾಮರು ಮುಂದಾಗಿದ್ದಾರೆ. ಸೋನು ಸೂದ್ ಅವರು ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಬೆನ್ನಲ್ಲೇ ನಟಿ ಸ್ವರಾ ಭಾಸ್ಕರ್ ಅವರು ವಲಸೆ ಕಾರ್ಮಿಕರತ್ತ ಸಹಾಯಹಸ್ತ ಚಾಚಿದ್ದಾರೆ.

“ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿರುವಾಗ ನಾವು ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುವುದು ನಾಚಿಕೆಗೇಡು” ಎಂದು ಸ್ವರಾ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಲಸೆ ಕಾರ್ಮಿಕರ ಸಮಸ್ಯೆ ನಮ್ಮ ಕಾಲಘಟ್ಟದ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಇದು ನಮ್ಮ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ.

ಸ್ವರಾ ಭಾಸ್ಕರ್ ಮತ್ತು ಅವರ ತಂಡ, ಹುಟ್ಟೂರಿಗೆ ಮರಳಲು ಬಯಸಿರುವ ವಲಸೆ ಕಾರ್ಮಿಕರ ಹೆಸರು ಸಂಗ್ರಹಿಸಿ, ದೆಹಲಿ ಸರ್ಕಾರದ ಜತೆ ಸಮಾಲೋಚಿಸಿ ಈ ವಲಸೆ ಕಾರ್ಮಿಕರು ರೈಲು ಟಿಕೆಟ್ ಪಡೆಯಲು ನೆರವಾಗಿದ್ದಾರೆ. ಇದುವರೆಗೆ ಸುಮಾರು 1350 ಮಂದಿ ವಲಸೆ ಕಾರ್ಮಿಕರನ್ನು ಅವರು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿರುವ ಅವರವರ ಮನೆಗೆ ಕಳುಹಿಸಲು ನೆರವಾಗಿದ್ದಾರೆ. ಈ ಕಾರ್ಯದಲ್ಲಿ ನೆರವಾದ ಎಎಪಿ ಶಾಸಕ ದಿಲೀಪ್ ಪಾಂಡೆಯವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಸ್ವರಾ ಭಾಸ್ಕರ್ ಅವರು ವಲಸೆ ಕಾರ್ಮಿಕರಿಗೆ ಚಪ್ಪಲಿಗಳನ್ನು ವಿತರಿಸಿದ್ದರು. ಟ್ವಿಟ್ಟರ್ ನಲ್ಲಿ ತಮ್ಮ ಈ ಸಮಾಜ ಕಾರ್ಯವನ್ನು ಅವರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News