ಪ್ರೇಕ್ಷಕರ ಅನುಪಸ್ಥಿತಿಯಲ್ಲೂ ಈ ವರ್ಷದ ಐಪಿಎಲ್ ನಡೆಯಲಿದೆ: ಅನಿಲ್ ಕುಂಬ್ಳೆ

Update: 2020-05-29 05:40 GMT

ಹೊಸದಿಲ್ಲಿ, ಮೇ 28: ಕೋವಿಡ್-19 ವೈರಸ್ ಭೀತಿಯ ನಡುವೆ ಅತ್ಯಂತ ಶ್ರೀಮಂತ ಟ್ವೆಂಟಿ-20 ಟೂರ್ನಮೆಂಟ್ ಐಪಿಎಲ್ ಪ್ರೇಕ್ಷಕರ ಅನುಪಸ್ಥಿತಿಯಲ್ಲಿಯೂ ಈ ವರ್ಷ ನಡೆಯಲಿದೆ ಎಂದು ಭಾರತದ ಮಾಜಿ ನಾಯಕ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಆಶಾವಾದ ವ್ಯಕ್ತಪಡಿಸಿದರು.

ಇದು ಇನ್ನೂ ಅಧಿಕೃತವಾಗಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷಾರಂಭದಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯನ್ನು ಅಕ್ಟೋಬರ್‌ನಲ್ಲಿ ನಡೆಸಲು ಬಿಸಿಸಿಐ ಬಯಸುತ್ತಿದೆ ಎಂದು ಊಹಾಪೋಹ ಹಬ್ಬಿತ್ತು.

‘‘ಹೌದು, ಈ ವರ್ಷ ಐಪಿಎಲ್ ನಡೆಸುವ ಕುರಿತು ನಾವೀಗಲೂ ಆತ್ಮವಿಶ್ವಾಸ ಹಾಗೂ ನಂಬಿಕೆ ಇಟ್ಟಿದ್ದೇವೆ. ಪ್ರೇಕ್ಷಕರಿಲ್ಲದೆ ಟೂರ್ನಿ ಆಯೋಜಿಸಲು ಹೊರಟರೆ ಬಹುಶಃ 3-4 ತಾಣಗಳನ್ನು ಸಜ್ಜುಗೊಳಿಸಬಹುದು. ಪ್ರೇಕ್ಷಕರಿಲ್ಲದೆ ಟೂರ್ನಿ ನಡೆಸುವ ಸಾಧ್ಯತೆ ಈಗಲೂ ಇದೆ. ಆ ಬಗ್ಗೆ ನಾವೆಲ್ಲರೂ ಆಶಾವಾದಿಗಳಾಗಿದ್ದೇವೆ’’ಎಂದು ಐಸಿಸಿಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರೂ ಆಗಿರುವ ಮಾಜಿ ಸ್ಪಿನ್ನರ್ ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್ ಶೋ ‘ಕ್ರಿಕೆಟ್ ಕನೆಕ್ಟಡ್’ಗೆ ತಿಳಿಸಿದ್ದಾರೆ. ಕುಂಬ್ಳೆ ಮಾತಿಗೆ ಧ್ವನಿಗೂಡಿಸಿದ ಭಾರತದ ಮಾಜಿ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್, ಆಟಗಾರರು ಪ್ರಯಾಣಿಸುವುದನ್ನು ಕಡಿಮೆ ಮಾಡಲು ಹಲವು ಸ್ಟೇಡಿಯಂ ಗಳಿರುವ ನಗರಗಳಲ್ಲಿ ಭಾಗಿದಾರರು ಲೀಗ್‌ನ್ನು ಆಯೋಜಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘‘ಈ ವರ್ಷ ಖಂಡಿತವಾಗಿಯೂ ಐಪಿಎಲ್ ನಡೆಯುವ ಸಾಧ್ಯತೆಯಿದೆ. ಎಲ್ಲ ಭಾಗಿದಾರರು ಈ ವಿಚಾರದಲ್ಲಿ ಖಚಿತತೆ ವ್ಯಕ್ತಪಡಿಸಬೇಕಾಗಿದೆ. ನೀವು 3ರಿಂದ 4 ಮೈದಾನಗಳಿರುವ ಸ್ಟೇಡಿಯಂನ್ನು ಆಯ್ಕೆ ಮಾಡಬೇಕು. ಕೊರೋನ ಸಮಯದಲ್ಲಿ ಪ್ರಯಾಣಿ ಸುವುದು ಒಂದು ದೊಡ್ಡ ಸವಾಲಾಗಿದೆ.ಏರ್‌ಪೋರ್ಟ್‌ನಲ್ಲಿ ಯಾರು, ಎಲ್ಲಿಗೆ ಹೋಗುತ್ತಾರೆಂದು ಗೊತ್ತಿರುವುದಿಲ್ಲ. ಫ್ರಾಂಚೈಸಿಗಳು ಹಾಗೂ ಬಿಸಿಸಿಐ ಈ ಕುರಿತು ನಿರ್ಧರಿಸಲಿವೆ’’ಎಂದು ಕಲಾತ್ಮಕ ಶೈಲಿಯ ಬ್ಯಾಟ್ಸ್‌ಮನ್ ಲಕ್ಷಣಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News