ಒಲಿಂಪಿಕ್ಸ್ ಚಾನೆಲ್ ಆಯೋಗದ ಸದಸ್ಯರಾಗಿ ನರೇಂದರ್ ಬಾತ್ರಾ ನೇಮಕ

Update: 2020-05-29 05:50 GMT

ಹೊಸದಿಲ್ಲಿ, ಮೇ 28: ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರೇಂದರ್ ಬಾತ್ರಾ ಅವರನ್ನು ಒಲಿಂಪಿಕ್ಸ್ ಚಾನೆಲ್ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಐಒಸಿ ಸದಸ್ಯರಾಗಿದ್ದ ಬಾತ್ರಾ ಅವರು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬ್ಯಾಚ್‌ಗೆ ಬರೆದ ಪತ್ರದಲ್ಲಿ ಈ ಆಯ್ಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘‘ಒಲಿಂಪಿಕ್ಸ್ ಚಾನೆಲ್ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವುದು ತುಂಬಾ ಗೌರವ ದ ವಿಷಯ ವಾಗಿದೆ. ಇದಕ್ಕಾಗಿ ಕೃತಜ್ಞನಾಗಿದ್ದೇನೆ ಮತ್ತು ಈ ನೇಮಕಾತಿಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಈ ಹೆಚ್ಚುವರಿ ಪಾತ್ರದಲ್ಲಿ ಐಒಸಿಯಲ್ಲಿ ಮತ್ತಷ್ಟು ಸೇವೆ ಸಲ್ಲಿಸುವುದು ಅಪಾರ ಹೆಮ್ಮೆಯವಿಷಯವಾಗಿದೆ’’ಎಂದು ಮುಖ್ಯಸ್ಥರಾದ ಬಾತ್ರಾ ಹೇಳಿದರು.

‘‘ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಈ ವಿಷಯದಲ್ಲಿ ಸೂಚಿಸಿದಂತೆ ನಾನು ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತೇನೆ ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಮಿತಿಗೆ ಕೊಡುಗೆ ನೀಡಲು ಎದುರು ನೋಡುತ್ತೇನೆ’’ ಎಂದು ಹೇಳಿದ್ದಾರೆ.

ಒಲಿಂಪಿ ಕ್ಸ್ ಚಾನೆಲ್ ಆಯೋಗವು ಐಒಸಿ ಅಧಿವೇಶನ, ಐಒಸಿ ಕಾರ್ಯನಿರ್ವಾಹಕ ಮಂಡಳಿ ಮತ್ತು ಐಒಸಿ ಅಧ್ಯಕ್ಷರಿಗೆ ಸಲಹೆ ನೀಡುತ್ತದೆ ಮತ್ತು ಒಲಿಂಪಿಕ್ಸ್ ಚಾನೆಲ್‌ನ ಪ್ರಾರಂಭ ಮತ್ತು ಕಾರ್ಯಾಚರಣೆಯ ಉದ್ದಕ್ಕೂ ಮಾರ್ಗದರ್ಶನ ನೀಡುತ್ತದೆ.

63 ವರ್ಷದ ಬಾತ್ರಾ ಈ ಹಿಂದೆ ಹಾಕಿ ಇಂಡಿಯಾ (2014-2016) ಮತ್ತು ಏಷ್ಯನ್ ಹಾಕಿ ಫೆಡರೇಶನ್ (2003-2013) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2003 ರಿಂದ 2013ರ ತನಕ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಖಜಾಂಚಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News