ಸಂಕಷ್ಟದಲ್ಲಿದ್ದ 150 ವಲಸೆ ಕಾರ್ಮಿಕ ಮಹಿಳೆಯರನ್ನು ವಿಮಾನದಲ್ಲಿ ತವರಿಗೆ ತಲುಪಿಸಿದ ಸೋನು ಸೂದ್

Update: 2020-05-29 11:23 GMT

ಮುಂಬೈ: ಲಾಕ್‍ ಡೌನ್‍ ನಿಂದಾಗಿ ಕೇರಳದ ಎರ್ಣಾಕುಳಂ ಜಿಲ್ಲೆಯಲ್ಲಿ ಅತಂತ್ರರಾಗಿದ್ದ ಒಡಿಶಾ ಮೂಲದ ಸುಮಾರು 150 ವಲಸಿಗ ಮಹಿಳಾ ಕಾರ್ಮಿಕರನ್ನು ಅವರ  ತವರು ರಾಜ್ಯಕ್ಕೆ ಕಳುಹಿಸಲು ಚಾರ್ಟರ್ಡ್ ವಿಮಾನದ ಏರ್ಪಾಟು ಮಾಡಿ ಬಾಲಿವುಡ್ ನಟ ಸೋನು ಸೂದ್ ಹೃದಯವೈಶಾಲ್ಯ ಮೆರೆದಿದ್ದಾರೆ.

ಎರ್ಣಾಕುಳಂನಲ್ಲಿ ಟೆಕ್ಸ್‍ಟೈಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆಯರು ಕೋವಿಡ್-19ನಿಂದಾಗಿ ಇದ್ದ ಅನಿಶ್ಚಿತತೆಯ ವಾತಾವರಣದಿಂದಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರು ರಾಜ್ಯಕ್ಕೆ ತೆರಳಲು ತೀರ್ಮಾನಿಸಿದ್ದರು. ಆದರೆ ಶ್ರಮಿಕ್ ರೈಲುಗಳು ಅವರಿಗೆ ಸಿಗದೆ ಕೊನೆಗೆ ಕೈಯ್ಯಲ್ಲಿದ್ದ ಹಣವೂ ಮುಗಿದು ಅವರೆಲ್ಲಾ ಕಂಗಾಲಾಗಿದ್ದರು. ಅವರ ಸಮಸ್ಯೆ ತಿಳಿದು ಸೋನು ಸೂದ್ ಅವರಿಗೆ ಚಾರ್ಟರ್ಡ್ ವಿಮಾನದ ಏರ್ಪಾಟು ಮಾಡಿದ್ದಾರೆ.

ಈ ವಿಮಾನ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಿಗ್ಗೆ 8 ಗಂಟೆಗೆ ಭುವನೇಶ್ವರಕ್ಕೆ ನಿರ್ಗಮಿಸಿದೆ. ಕಿಟೆಕ್ಸ್ ಗಾರ್ಮೆಂಟ್ಸ್ ಸಂಸ್ಥೆಯ 150 ಮಹಿಳಾ ಕಾರ್ಮಿಕರ ಹೊರತಾಗಿ  ರಾಜ್ಯದ ಬಾವಾ ವುಡ್ ಇಂಡಸ್ಟ್ರಿಯ ಒಂಬತ್ತು ಇತರ ವಲಸಿಗ ಕಾರ್ಮಿಕರು ಈ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

ದೇಶದಲ್ಲಿ ವಲಸಿಗ ಕಾರ್ಮಿಕರನ್ನು ಚಾರ್ಟರ್ಡ್ ವಿಮಾನದಲ್ಲಿ ಅವರ ಊರಿಗೆ ಕರೆದೊಯ್ದಿರುವುದು ಇದೇ ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News