ಕ್ಯಾಸಂಡ್ರಾ ಪರಿಣಾಮದ ಹಿಡಿತದಲ್ಲಿರುವವರೇ ಇಂದಿನ ವಿಜ್ಞಾನಿಗಳು?

Update: 2020-05-31 07:14 GMT
ಡಾ.ಫೌಚಿ.

ಕೋವಿಡ್-19ರ ಪರಿಣಾಮಕ್ಕೆ ಮಕ್ಕಳು ಬಲಿಯಾಗಿರುವ ಉದಾಹರಣೆ ಇಲ್ಲವೇ ಇಲ್ಲ, ಹಾಗಾಗಿ ಶಾಲೆಗಳನ್ನು ತೆರೆಯುವುದರಲ್ಲಿ ತಪ್ಪೇನು ಎನ್ನುವ ಪ್ರಶ್ನೆ ಅನೇಕರದ್ದು. ಆದರೆ ಫೌಚಿ ಅವರ ಹಿಂಜರಿಕೆಗೆ ಬಲವಾದ ಕಾರಣವೂ ಇದೆ. ಕೋವಿಡ್-19ರ ಸೋಂಕು ಹರಡಲು ತೊಡಗಿದ ನಂತರ ಅಮೆರಿಕದ ಮಕ್ಕಳಲ್ಲಿ ಕವಸಾಕಿ ಕಾಯಿಲೆ ತೀವ್ರವಾಗಿ ಹರಡಲು ಆರಂಭವಾಗಿದೆ. ರಕ್ತನಾಳಗಳ ಊತಕ್ಕೆ ಕಾರಣವಾಗುವ ಈ ಕಾಯಿಲೆ ದೇಹದ ರೋಗ ನಿರೋಧಕ ವ್ಯವಸ್ಥೆಯ ಏರುಪೇರಿನಿಂದ ಉಂಟಾಗಬಹುದೆಂಬ ಅಂದಾಜು ವಿಜ್ಞಾನಿಗಳದ್ದಾಗಿದೆ.

ಟ್ರಾಯ್ ನಗರದ ರಾಜನ ಮಗಳಾದ ಕ್ಯಾಸಂಡ್ರಾಳಿಗೆ ಭವಿಷ್ಯವನ್ನು ಅರಿಯುವ ವರವನ್ನು ವೈದ್ಯ ದೇವತೆ ಅಪೋಲೋ ನೀಡುತ್ತಾನೆ. ವರವನ್ನು ನೀಡಿದವನು ಅವಳನ್ನು ವರಿಸಲು ಬಯಸುತ್ತಾನೆ. ಆದರೆ ಕ್ಯಾಸಂಡ್ರಾ ಅವನನ್ನು ನಿರಾಕರಿಸುತ್ತಾಳೆ. ಇದರಿಂದ ಕುಪಿತಗೊಂಡು ನಿನ್ನ ಭವಿಷ್ಯ ವಾಣಿಯನ್ನು ಯಾರು ನಂಬದಿರಲಿ ಎಂದವಳಿಗೆೆ ಶಪಿಸುತ್ತಾನೆ. ಇದರ ಫಲವಾಗಿ ಕ್ಯಾಸಂಡ್ರಾ ವಿಚಿತ್ರ ಸ್ಥಿತಿಯಲ್ಲಿ ಜೀವಿಸಬೇಕಾಗುತ್ತದೆ. ಮುಂದೇನಾಗುತ್ತದೆಂದು ಅರಿವಿದ್ದರು ಅದರ ಕುರಿತು ಯಾರನ್ನು ಒಪ್ಪಿಸಲಾಗದವಳಾಗುತ್ತಾಳೆ. ಅವಳ ಸಹೋದರ ಪ್ಯಾರಿಸ್ ಗ್ರೀಕ್ ರಾಣಿ ಹೆಲೆನ್‌ಳನ್ನು ಅಪಹರಿಸುವುದರಿಂದ ಟ್ರಾಯ್ ನಗರ ನಾಶವಾಗುತ್ತದೆಂದು ಹೇಳಿದ್ದನ್ನು ಅವಳ ತಂದೆ-ತಾಯಿ ಕೂಡ ನಂಬುವುದಿಲ್ಲ. ಅವಳು ಮುಂದೆ ಟ್ರಾಯ್‌ನಗರದ ವಿನಾಶಕ್ಕೆ ಸಾಕ್ಷಿಯಾಗುತ್ತಾಳೆ.

ಸತ್ಯವನ್ನು ಹೇಳಿದರು ಕೇಳಿದವರು ನಂಬದ ಸ್ಥಿತಿಯಲ್ಲಿರುವುದನ್ನು ಕ್ಯಾಸಂಡ್ರಾ ಪರಿಣಾಮವೆಂದು ಮನೋವಿಜ್ಞಾನಿಗಳು ಕರೆಯುತ್ತಾರೆ. ಕೋವಿಡ್-19ರ ಮಹಾಸಾಂಕ್ರಮಿಕದ ಪರಿಣಾಮದಿಂದ ನಲುಗುತ್ತಿರುವ ಇಂದಿನ ಜಗತ್ತಿನಲ್ಲಿ ವಿಜ್ಞಾನಿಗಳು ಕ್ಯಾಸಂಡ್ರಾಳ ಸ್ಥಾನದಲ್ಲಿದ್ದಾರೆ. ಕ್ಯಾಸಂಡ್ರಾ ಅನುಭವಿಸಿದ ಸಂಕಟವನ್ನು ಇವರೂ ಅನುಭವಿಸುತ್ತಿದ್ದಾರೆ. ಉದಾಹರಣೆಗೆ ಡಾ.ನ್ಯಾನ್ಸಿ ಮೆಸೋನಿಯರ್ ಅವರನ್ನು ತೆಗೆದುಕೊಳ್ಳುವ ಇವರು ಅಮೆರಿಕ ದೇಶದ ಹಿರಿಯ ಸೋಂಕು ತಜ್ಞರು. ಇವರು ಕೋವಿಡ್-19ರ ಪರಿಣಾಮದಿಂದ ಸಾಕಷ್ಟು ಸಂಕಟಗಳಿಗೆ ಒಳಗಾಗಬೇಕಾಗಬಹುದು. ಮನೆಯಿಂದ ಹೊರಗಡೆ ಬಂದು ಕೆಲಸ ಮಾಡುವುದು ಕಷ್ಟ ಸಾಧ್ಯವಾಗಬಹುದು. ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳ ಮೂಲಕ ಕಲಿಯಬೇಕಾಗಬಹುದು. ಅತಿಯಾದ ಸೋಂಕು ಸಾಮರ್ಥ್ಯವನ್ನು ಹೊಂದಿರುವ ಈ ವೈರಸ್ ನಮ್ಮ ಬದುಕಿನ ರೀತಿ ನೀತಿಗಳನ್ನು ಆಮೂಲಾಗ್ರವಾಗಿ ಬದಲಿಸಲಿದೆ ಎಂದು ಬಹಿರಂಗವಾಗಿ 2020ರ ಫೆಬ್ರವರಿಯಲ್ಲಿ ಹೇಳಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಅಧ್ಯಕ್ಷ ಟ್ರಂಪ್ ಅವರು ಹೀಗೆಲ್ಲಾ ಅಮೆರಿಕದ ಪ್ರಜೆಗಳನ್ನು ಬೆದರಿಸುವ ಕೆಲಸ ಮಾಡಬಾರದು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಇನ್ನೊಂದು ಉದಾಹರಣೆ ಡಾ.ಫೌಚಿ. ಇವರು ಅಮೆರಿಕ ದೇಶದ ರೋಗ ನಿರೋಧಕ ಕ್ಷೇತ್ರದ ಅತ್ಯುತ್ತಮ ವಿಜ್ಞಾನಿಗಳಲ್ಲಿ ಒಬ್ಬರು. ಅಲ್ಲಿನ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ 1984ರಿಂದಲೂ ದುಡಿಯುತ್ತಿರುವವರು. 79 ವರ್ಷದ ಇವರು ಏಡ್ಸ್ ಕಾಯಿಲೆಯನ್ನು ಅದರ ಆರಂಭದ ದಿನಗಳಿಂದಲೂ ಅಧ್ಯಯನ ಮಾಡುತ್ತಿರುವವರು. ಓರಗೆ ವಿಜ್ಞಾನಿಗಳಿಂದ ಮನ್ನಣೆ ಮತ್ತು ಗೌರವವನ್ನು ಪಡೆದಿರುವ ಡಾ. ಫೌಚಿ ರಾಜಕೀಯ ಒತ್ತಡಗಳನ್ನು ವಿಜ್ಞಾನದ ಗಾಜಿನಿಂದ ಮಾತ್ರ ನೋಡುವ ಖಚಿತತೆ ಇರುವ ವ್ಯಕ್ತಿತ್ವದವರು. ಆಳುವವರ ಕರ್ತವ್ಯಅವರು ಮಾಡಲಿ. ವಿಜ್ಞಾನದ ಬೆಳಕಿನಲ್ಲಿ ನನ್ನ ಅರಿವಿಗೆ ದಕ್ಕಿದ್ದನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳುವುದು ನನ್ನ ಕರ್ತವ್ಯ ಎನ್ನುವ ನಿರ್ಲಿಪ್ತ ಜೀವಿ. ಆದರೀಗ ಅಲ್ಲಿನ ಆಡಳಿತಗಾರರ ಕೆಟ್ಟ ದೃಷ್ಟಿಗೆ ಈಡಾಗಿದ್ದಾರೆ.

ಅಮೆರಿಕದಲ್ಲಿ ಮುಚ್ಚಿರುವ ಶಾಲೆಗಳನ್ನು ಈಗಲೇ ತೆರೆಯಬಾರದೆಂದು ಹೇಳುವ ಡಾ.ಫೌಚಿ ಕುರಿತು ‘ಈ ಕುರಿತು ನೀನೇ ಅಂತಿಮವೇನು?’ ಎಂದು ಸೆನೆಟ್ ಸದಸ್ಯರೊಬ್ಬರು ಅಧಿಕೃತವಾಗಿ ಕೇಳಿದಾಗ, ಇಲ್ಲ, ನಾನು ಅಂತಿಮವಲ್ಲ. ನಾನೊಬ್ಬ ವಿಜ್ಞಾನಿ ಅಷ್ಟೆ. ನನ್ನ ಅರಿವಿನ ಮಿತಿಯಲ್ಲಿ ನನಗೆ ತಿಳಿದಿರುವುದನ್ನು ಹೇಳುವವನು. ಕೋವಿಡ್-19ರ ಕುರಿತು ತಿಳಿಯದ ವಿಷಯಗಳು ಇನ್ನೂ ಸಾಕಷ್ಟಿವೆ ಎಂದು ನನಗೆ ಅರಿವಾಗಿದೆ. ಹೀಗೆ ತಿಳಿಯದಿರುವ ಅಂಶಗಳು ಹೆಚ್ಚಿರುವ ಸಂದರ್ಭದಲ್ಲಿ ಎಳೆಯ ಮಕ್ಕಳನ್ನು ಅಪಾಯಕ್ಕೆ ಒಡ್ಡುವುದು ಎಷ್ಟು ಸರಿ? ಸರಿಪಡಿಸಲಾಗದ ಕ್ರಮವನ್ನು ತೆಗೆದುಕೊಂಡು ಭವಿಷ್ಯದಲ್ಲಿ ಒದ್ದಾಡುವುದರ ಬದಲು, ಯಾವುದೇ ಕ್ರಮ ತೆಗೆದುಕೊಳ್ಳದೇ ಕಾಯುವುದು ಲೇಸು ಎನ್ನುವುದು ನನ್ನ ಅಭಿಪ್ರಾಯ ಎಂದು ಸ್ಪಷ್ಟವಾಗಿ ಉತ್ತರಿಸಿದವರು.

ಕೋವಿಡ್-19ರ ಪರಿಣಾಮಕ್ಕೆ ಮಕ್ಕಳು ಬಲಿಯಾಗಿರುವ ಉದಾಹರಣೆ ಇಲ್ಲವೇ ಇಲ್ಲ, ಹಾಗಾಗಿ ಶಾಲೆಗಳನ್ನು ತೆರೆಯುವುದರಲ್ಲಿ ತಪ್ಪೇನು ಎನ್ನುವ ಪ್ರಶ್ನೆ ಅನೇಕರದ್ದು. ಆದರೆ ಫೌಚಿ ಅವರ ಹಿಂಜರಿಕೆಗೆ ಬಲವಾದ ಕಾರಣವೂ ಇದೆ. ಕೋವಿಡ್-19ರ ಸೋಂಕು ಹರಡಲು ತೊಡಗಿದ ನಂತರ ಅಮೆರಿಕದ ಮಕ್ಕಳಲ್ಲಿ ಕವಸಾಕಿ ಕಾಯಿಲೆ ತೀವ್ರವಾಗಿ ಹರಡಲು ಆರಂಭವಾಗಿದೆ. ರಕ್ತನಾಳಗಳ ಊತಕ್ಕೆ ಕಾರಣವಾಗುವ ಈ ಕಾಯಿಲೆ ದೇಹದ ರೋಗ ನಿರೋಧಕ ವ್ಯವಸ್ಥೆಯ ಏರುಪೇರಿನಿಂದ ಉಂಟಾಗಬಹುದೆಂಬ ಅಂದಾಜು ವಿಜ್ಞಾನಿಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ಡಾ.ಫೌಚಿ. ಅವರಿಗೆ ಶಾಲೆಗಳನ್ನು ತೆರೆಯುವ ಕುರಿತು ಎರಡು ಅನಿಸಿಕೆಗಳಿವೆ: 1. ಕವಸಾಕಿ ಕಾಯಿಲೆಗೂ ಕೋವಿಡ್-19ಕ್ಕೂ ಇರುವ ಸಂಬಂಧ ಸ್ಪಷ್ಟವಾಗುವವರೆಗೂ ನಿಧಾನಿಸುವುದುಉತ್ತಮ. 2. ಮಕ್ಕಳ ಮೇಲೆ ಕೋವಿಡ್-19 ಪರಿಣಾಮ ತೀವ್ರವಾಗಿಲ್ಲವಾದರೂ, ಅವರು ಸೋಂಕಿನ ವಾಹಕರಾಗುವ ಅಪಾಯವಿದೆ. ಇದರಿಂದ ಮನೆಗಳಲ್ಲಿರುವ ಹಿರಿಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗಾಗಿ ಇದೆಲ್ಲದರ ಕುರಿತು ಸ್ಪಷ್ಟತೆ ಮೂಡುವವರೆಗೆ ಕಾಯುವುದು ಉತ್ತಮ ಎನ್ನುವುದು ಅವರ ನಿಲುವಾಗಿದೆ. ಇವರೊಂದಿಗೆ ನೆನಪಾಗುವ ಮತ್ತೋರ್ವ ತಜ್ಞರೆಂದರೆ ಡಾರಿಕ್ ಬ್ರೈಟ್. ಕೋವಿಡ್-19ರ ಸೋಂಕನ್ನು ನಿಭಾಯಿಸಲು ನಮ್ಮ ತಯಾರಿ ಸಮರ್ಪಕವಾಗಿರಲಿಲ್ಲವೆಂದು ಇವರು ಅಧಿಕೃತವಾಗಿ ಅಮೆರಿಕದ ಸೆನೆಟ್‌ಗೆ ದೂರು ನೀಡಿದವರು. ಫೆಬ್ರವರಿ 2020ರಲ್ಲೇ ಮಾಸ್ಕ್ ಗಳು, ಗ್ಲೌಸ್‌ಗಳು ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದು, ಸೋಂಕು ತೀವ್ರವಾಗಿ ಹರಡಿದರೆ ಇವುಗಳ ಕೊರತೆಯನ್ನು ದೇಶದ ಆಸ್ಪತ್ರೆಗಳು ಅನುಭವಿಸಬೇಕಾಗುತ್ತದೆಂದು ಪತ್ರ ಬರೆದರು, ಸಂಬಂಧಪಟ್ಟವರು ಕ್ರಮ ಜರುಗಿಸಲಿಲ್ಲವೆಂದು ಇವರ ದೂರು. ಅಮೆರಿಕದ ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿದ್ದ ಇವರನ್ನು ಮತ್ತೊಂದು ಸಣ್ಣ ಪ್ರಮಾಣದ ಹುದ್ದೆಗೆ ವರ್ಗಾಯಿಸಿ ಅಮೆರಿಕದ ಸರಕಾರ ಇತ್ತೀಚೆಗೆ ಆದೇಶ ನೀಡಿದೆ. ಇದು ಸತ್ಯವನ್ನು ನುಡಿದ ನನಗೆ ನೀಡಿರುವ ಶಿಕ್ಷೆ ಎಂದು ಡಾ.ಬ್ರೈಟ್ ಅವರ ವಾದವಾಗಿದೆ.

ಮತ್ತೋರ್ವ ತಜ್ಞರಾದ ಡಾ.ಸಾಯಿರಾ ಮದದ್ ಅವರ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ಅವರು ನ್ಯೂಯಾರ್ಕ್ ನಗರದ ಸಾರ್ವಜನಿಕ ಆಸ್ಪತ್ರೆಗಳ ವ್ಯವಹಾರ ನೋಡಿಕೊಳ್ಳುವ ವಿಭಾಗದ ಮುಖ್ಯಸ್ಥೆ. ಸಾರ್ಸ್ ಮಾದರಿಯ ಸೋಂಕು ನ್ಯೂಯಾರ್ಕ್ ನಗರದಲ್ಲಿ ಸ್ಫೋಟಗೊಂಡರೆ ಅದನ್ನು ನಿಭಾಯಿಸುವ ಯಾವುದೇ ವ್ಯವಸ್ಥೆ ನಮ್ಮಲಿ ್ಲಇಲ್ಲ. ದಯಮಾಡಿ ಈ ಕುರಿತು ಒಂದಿಷ್ಟು ಗಂಭೀರ ಚಿಂತನೆ ಮಾಡಿ ಸೂಕ್ತ ನೀಲಿ ನಕ್ಷೆ ತಯಾರಿಸಬೇಕಿದೆ ಎಂದು 2019ರ ನವೆಂಬರ್ ತಿಂಗಳಿಂದ ವಿವಿಧ ವೇದಿಕೆಗಳಲ್ಲಿ ಈಕೆ ಮಾತನಾಡಲು ಆರಂಭಿಸಿದ್ದರು. ನಗರದ ಮೂಲಭೂತ ಸೌಕರ್ಯಗಳ ಕುರಿತು ಮಾತನಾಡುತ್ತಾ ಸಾವುಗಳ ಪ್ರಮಾಣ ಸಾವಿರ ಸಂಖ್ಯೆಯಲ್ಲಿ ಸಂಭವಿಸತೊಡಗಿದರೆ ಮೃತದೇಹಗಳನ್ನು ಹೂಳಲು ಸ್ಮಶಾನಗಳ ಕೊರತೆ ಕಾಣಲಿದೆ ಎಂದು ಭವಿಷ್ಯ ನುಡಿದವರು ಈಕೆ. ಈಗ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾವುಗಳ ಸಂಭವಿಸುತ್ತಿರುವುದರಿಂದ ಉಂಟಾಗಿರುವ ಸ್ಮಶಾನಗಳ ಕೊರತೆಯ ಕಾರಣದಿಂದ ಶವಗಳನ್ನು ಶೀಥಲ ವ್ಯವಸ್ಥೆಯಿರುವ ವಾಹನಗಳಲ್ಲಿ ಜೋಪಾನಿಸಬೇಕಾದ ಹೊಣೆಯನ್ನು ಇವರೇ ನಿಭಾಯಿಸುತ್ತಿದ್ದಾರೆ. ಇವರೆಲ್ಲರೂ ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ಉನ್ನತ ಹಂತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಜ್ಞಾನಿಗಳು. ಇವರೆಲ್ಲರೂ ಓದಿದ್ದು ಮತ್ತು ನೌಕರಿ ಪಡೆದಿದ್ದು ಕೋವಿಡ್-19ರ ರೀತಿಯ ಸೋಂಕುಗಳು ಉಂಟಾಗದಂತೆ ತಡೆಯಲು ಬೇಕಾದ ಕ್ರಮಗಳನ್ನು ಸಂಶೋಧಿಸಿಸಲು. ಒಂದು ವೇಳೆ ಸೋಂಕು ಕಾಣಿಸಿಕೊಂಡಲ್ಲಿ, ಅದನ್ನು ಆದಷ್ಟು ಬೇಗ ನಿಭಾಯಿಸುವ ಕ್ರಮಗಳನ್ನು ಜಾರಿಗೆ ತರುವ ಕರ್ತವ್ಯವನ್ನು ಹೊಂದಿದ್ದವರು. ಆದರೆ ಇವರ ಮಾತುಗಳನ್ನು ಕೇಳಬೇಕಾದವರು ಕೇಳಲಿಲ್ಲ. ಡಾ. ಬ್ರೈಟ್ ಹೇಳುವಂತೆ ನನಗೆ ಸಿಕ್ಕ ಪ್ರತಿಕ್ರಿಯೆ-ಮೌನವಾಗಿತ್ತು. ಅಧಿಕಾರದಲ್ಲಿದ್ದವರು ನನ್ನ ಎಲ್ಲಾ ಪತ್ರಗಳಿಗೆ ಏನೂ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದು ಬಿಟ್ಟರು. ಇಂದು ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿರುವ ಬಹುತೇಕ ದೇಶಗಳ ಕಥೆಯೂ ಹೀಗೆಯೇ ಇದೆ.

ಮಾತು ಕೇಳಬೇಕಾದವರೂ ಕೇಳದೇ ಹೋದರೆ, ಹೇಳಿದವರು ಅಸ್ಸಹಾಯಕರಾಗಿ ನಿಲ್ಲಬೇಕಾಗುತ್ತದೆ. ಕ್ಯಾಸಂಡ್ರಾಳಿಗೆ ಟ್ರಾಯ್ ನಗರದ ಯುದ್ಧದಲ್ಲಿ ಸೋತು ನಿರ್ಗಮಿಸಿದ ಗ್ರೀಕ್‌ರು ಕೋಟೆಯ ಹೊರಗೆ ಬಿಟ್ಟು ಹೋದ ಮರದ ಕುದುರೆಯಲ್ಲಿ ಯೋಧರು ಅಡಗಿ ಕುಳಿತಿದ್ದಾರೆಂದು ತಿಳಿದಿರುತ್ತದೆ. ಅದನ್ನು ತನ್ನವರಿಗೆ ಹೇಳುತ್ತಾಳೆ. ಅವಳ ಮಾತನ್ನು ನಂಬದ ಅವರು ಮರದ ಕುದುರೆಯನ್ನು ಕೋಟೆಯೊಳಗೆ ಎಳೆದು ತಂದಿಡುತ್ತಾರೆ. ಯುದ್ಧವನ್ನು ಗೆದ್ದ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ. ಕೊನೆಯ ಪ್ರಯತ್ನವಾಗಿ ಕ್ಯಾಸಂಡ್ರಾ ಮರದ ಕುದುರೆಗೆ ಬೆಂಕಿ ಹಚ್ಚುವ ಯತ್ನ ಮಾಡುತ್ತಾಳೆ. ಇದನ್ನು ತಡೆಯುವ ಟ್ರಾಯ್ ನಗರದ ಜನ ಅವಳನ್ನು ಬಂಧಿಸಿಡುತ್ತಾರೆ! ಸರಿ ರಾತ್ರಿಯಲ್ಲಿ ಇಡೀ ಟ್ರಾಯ್ ನಗರ ಮಲಗಿದ್ದಾಗ, ಮರದ ಕುದುರೆಯಿಂದ ಹೊರ ಬರುವ ಗ್ರೀಕ್ ಸೈನಿಕರು ಕೋಟೆಯ ಬಾಗಿಲನ್ನು ತೆಗೆದು ಗ್ರೀಕ್ ಸೈನ್ಯದ ಒಳ ಪ್ರವೇಶಕ್ಕೆ ಅವಕಾಶ ಮಾಡುತ್ತಾರೆ. ಇದರ ಫಲವಾಗಿ, ಹತ್ತು ವರ್ಷಗಳ ಕಾಲ ಗ್ರೀಕ್‌ರ ಆಕ್ರಮಣವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಟ್ರಾಯ್ ನಗರ ಒಂದೇ ರಾತ್ರಿಯಲ್ಲಿ ಸರ್ವನಾಶವಾಗುತ್ತದೆ. ಯುದ್ಧದಲ್ಲಿ ಕ್ಯಾಸಂಡ್ರಾ ತನ್ನವರೆಲ್ಲರನ್ನೂ ಕಳೆದುಕೊಂಡು ಗ್ರೀಕ್‌ರಾಜನೊಬ್ಬನ ಗುಲಾಮಳಾಗಬೇಕಾಗುತ್ತದೆ. ಕ್ಯಾಸಂಡ್ರಾಳ ನೋವು ಎಂಥದಿರಬಹುದು?

Writer - ಸದಾನಂದ. ಆರ್.

contributor

Editor - ಸದಾನಂದ. ಆರ್.

contributor

Similar News