ಅಮೆರಿಕದಾದ್ಯಂತ ಸ್ಫೋಟಗೊಂಡ ಹಿಂಸಾತ್ಮಕ ಪ್ರತಿಭಟನೆ: ಹಲವು ನಗರಗಳಲ್ಲಿ ಕರ್ಫ್ಯೂ

Update: 2020-05-31 15:43 GMT

ಮಿನಪೊಲಿಸ್ (ಅಮೆರಿಕ), ಮೇ 31: ಕರಿಯ ವ್ಯಕ್ತಿಯೊಬ್ಬ ಬಿಳಿಯ ಪೊಲೀಸರ ಬಂಧನದಲ್ಲಿ ಮೃತಪಟ್ಟಿರುವುದನ್ನು ಪ್ರತಿಭಟಿಸಿ ಅಮೆರಿಕದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಸ್ಫೋಟಿಸಿರುವಂತೆಯೇ, ದೇಶದ ಹಲವು ಪ್ರಮುಖ ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಹಿಂಸಾತ್ಮಕ ಪ್ರತಿಭಟನೆಗಳನ್ನು ನನ್ನ ಸರಕಾರವು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಎಚ್ಚರಿಕೆಯನ್ನು ಧಿಕ್ಕರಿಸಿದ ಪ್ರತಿಭಟನಕಾರರು ಅಮೆರಿಕದ ಬಿಳಿಯ ಪೊಲೀಸರ ಜನಾಂಗೀಯ ತಾರತಮ್ಯ ಧೋರಣೆಯನ್ನು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ.

ಮಿನಸೋಟ ರಾಜ್ಯದ ನಗರ ಮಿನಪೊಲಿಸ್‌ನಲ್ಲಿ ಕಳೆದ ಸೋಮವಾರ ಪೊಲೀಸರು ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡಾರನ್ನು ಬಂಧಿಸಿದ ವೇಳೆ ಘಟನೆ ಸಂಭವಿಸಿದೆ. ಫ್ಲಾಯ್ಡಾಗೆ ಕೈಕೋಳ ತೊಡಿಸಿದ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಆತನನ್ನು ನೆಲಕ್ಕೆ ಕೆಡವಿ ಆತನ ಕುತ್ತಿಗೆಯ ಮೇಲೆ ಮೊಣಕಾಲಿಟ್ಟು ಐದು ನಿಮಿಷಗಳ ಕಾಲ ಕುಳಿತುಕೊಂಡಿರುವುದನ್ನು ವೀಡಿಯೊವೊಂದು ತೋರಿಸಿದೆ. ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ಕರಿಯ ವ್ಯಕ್ತಿಯು ಪದೇ ಪದೇ ಗೋಗರೆದರೂ ಪೊಲೀಸರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಫ್ಲಾಯ್ಡಾ ಅಲ್ಲೇ ಉಸಿರುಗಟ್ಟಿ ಮೃತಪಟ್ಟರು.

ಇದರ ಬೆನ್ನಿಗೇ ಪೊಲೀಸರ ಜನಾಂಗೀಯ ತಾರತಮ್ಯ ಧೋರಣೆಯ ವಿರುದ್ಧ ರೊಚ್ಚಿಗೆದ್ದ ಜನರು ಬೀದಿಗೆ ಇಳಿದು ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.

ಅಶ್ರುವಾಯು, ಸ್ಟನ್ ಗನ್ ಸಿಡಿಸಿದ ಪೊಲೀಸರು:

ಪ್ರತಿಭಟನೆಗಳ ಕೇಂದ್ರ ಬಿಂದುವಾಗಿರುವ ಮಿನಪೊಲಿಸ್ ನಗರದಲ್ಲಿ ಸತತ ಐದನೇ ದಿನವಾದ ಶನಿವಾರ ರಾತ್ರಿಯೂ ಹಿಂಸಾಚಾರ ಸಂಭವಿಸಿದೆ. ದೊಂಬಿ ನಿರೋಧಕ ದಿರಿಸಿನಲ್ಲಿದ್ದ ಪೊಲೀಸರು ಪ್ರತಿಭಟನಕಾರರ ವಿರುದ್ಧ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ಸ್ಟನ್ ಗ್ರೆನೇಡ್‌ಗಳನ್ನು ಹಾರಿಸಿದರು.

ಅಮೆರಿಕದಲ್ಲಿ ಹಲವು ವರ್ಷಗಳಿಂದ ಕಾಣದೆ ಇದ್ದ ನಾಗರಿಕ ಅಶಾಂತಿಯನ್ನು ಹತ್ತಿಕ್ಕಲು ಹಲವು ರಾಜ್ಯಗಳಲ್ಲಿ ನ್ಯಾಶನಲ್ ಗಾರ್ಡ್ ಸೈನಿಕರನ್ನು ನಿಯೋಜಿಸಲಾಯಿತು. ಲಾಸ್ ಏಂಜಲಿಸ್, ಶಿಕಾಗೊ ಮತ್ತು ಅಟ್ಲಾಂಟ ಸೇರಿದಂತೆ 20ಕ್ಕೂ ಅಧಿಕ ನಗರಗಳಲ್ಲಿ ಕರ್ಫ್ಯೂ ವಿಧಿಸಲಾಯಿತು.

ಫ್ಲಾಯ್ಡಾ ಹತ್ಯೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕಠಿಣ ಕೊಲೆ ಆರೋಪಗಳನ್ನು ಹೊರಿಸಬೇಕು ಹಾಗೂ ಇನ್ನೂ ಹೆಚ್ಚು ಮಂದಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸಿಯಾಟಲ್ ನಗರದಿಂದ ನ್ಯೂಯಾರ್ಕ್‌ವರೆಗೆ ಲಕ್ಷಾಂತರ ಜನರು ಬೀದಿಗಿಳಿದರು.

ಪೊಲೀಸರ ಕಾರುಗಳಿಗೆ ಬೆಂಕಿ, ಕಲ್ಲು:

ಜಾರ್ಜ್ ಫ್ಲಾಯ್ಡಾರ ಸಾವಿನಿಂದ ಆಕ್ರೋಶಗೊಂಡ ನ್ಯೂಯಾರ್ಕ್ ಪ್ರತಿಭಟನಕಾರರು ಶನಿವಾರ ರಾತ್ರಿ ಬ್ರೂಕ್ಲಿನ್‌ನಲ್ಲಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಅವರು ಪೊಲೀಸರ ಕಾರುಗಳಿಗೆ ಬೆಂಕಿ ಹಚ್ಚಿದರು ಹಾಗೂ ಪೊಲೀಸರತ್ತ ಕಲ್ಲು ಮತ್ತು ಬೆಂಕಿ ಚೆಂಡುಗಳನ್ನು ಎಸೆದರು.

ಲಾಸ್ ಏಂಜಲಿಸ್‌ನಲ್ಲಿ ಪೊಲೀಸರು ಪ್ರತಿಭಟನಕಾರರತ್ತ ರಬ್ಬರ್ ಗುಂಡುಗಳನ್ನು ಹಾರಿಸಿದರು ಹಾಗೂ ಒಂದು ಹಂತದಲ್ಲಿ ತಮಗೆ ಎದುರಾಗಿ ನಿಂತ ಪ್ರತಿಭಟನಕಾರರನ್ನು ಲಾಠಿ ಬೀಸಿ ಚದುರಿಸಿದರು. ಅಲ್ಲಿಯೂ ಪ್ರತಿಭಟನಕಾರರು ಪೊಲೀಸರ ಕಾರುಗಳಿಗೆ ಬೆಂಕಿ ಹಚ್ಚಿದರು.

ಶಿಕಾಗೊ ಮತ್ತು ನ್ಯೂಯಾರ್ಕ್ ಸೇರಿದಂತೆ ಇತರ ಹಲವಾರು ನಗರಗಳಲ್ಲೂ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯಿತು.

ಎಡಪಂಥೀಯರು ಕಾರಣ: ಟ್ರಂಪ್

ಅಮೆರಿಕದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಡು ಎಡಪಂಥೀಯರು ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಕ್ರಿಮಿನಲ್‌ಗಳು ಮತ್ತು ಗಲಭೆಕೋರರ ಸಣ್ಣ ಗುಂಪೊಂದು ನಮ್ಮ ನಗರಗಳನ್ನು ಹಾನಿಗೊಳಿಸಲು ಮತ್ತು ನಮ್ಮ ಸಮುದಾಯಗಳನ್ನು ನಾಶಗೊಳಿಸಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಕರಿಯ ವ್ಯಕ್ತಿಯ ಸಾವು ಬೃಹತ್ ದುರಂತ: ಟ್ರಂಪ್

ಪೊಲೀಸರ ಕಸ್ಟಡಿಯಲ್ಲಿ ಸಂಭವಿಸಿದ ಆಫ್ರಿಕನ್-ಅಮೆರಿಕನ್ ವ್ಯಕ್ತಿಯ ಸಾವು ದೊಡ್ಡ ದುರಂತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಬಣ್ಣಿಸಿದ್ದಾರೆ.

ಮಿನಪೊಲಿಸ್ ನಗರದ ಬೀದಿಗಳಲ್ಲಿ ಸಂಭವಿಸಿರುವ ಜಾರ್ಜ್ ಫ್ಲಾಯ್ಡಾ ಸಾವು ದೊಡ್ಡ ದುರಂತವಾಗಿದೆ. ಅದು ಸಂಭವಿಸಬಾರದಾಗಿತ್ತು. ಅದು ದೇಶಾದ್ಯಂತ ಇರುವ ಅಮೆರಿಕನ್ನರಲ್ಲಿ ಭಯ, ಆಕ್ರೋಶ ಮತ್ತು ದುಃಖವನ್ನು ತುಂಬಿದೆ ಎಂದು ಫ್ರೋರಿಡದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News