ಮುಂಬೈ ಕೊರೋನ ಸ್ಥಿತಿಗೆ ಟ್ರಂಪ್ ಗುಜರಾತ್ ಸಮಾರಂಭ ಕಾರಣ: ಶಿವಸೇನೆ ನಾಯಕ ಸಂಜಯ್ ರಾವತ್

Update: 2020-05-31 09:14 GMT
ಶಿವಸೇನೆ ನಾಯಕ ಸಂಜಯ್ ರಾವತ್ 

ಮುಂಬೈ: ಗುಜರಾತ್, ಮುಂಬೈ ಮತ್ತು ದೆಹಲಿಯಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡಲು ಅಹ್ಮದಾಬಾದ್‍ನಲ್ಲಿ ಫೆಬ್ರುವರಿಯಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ; ಅಮೆರಿಕದ ಬಹಳಷ್ಟು ಮಂದಿ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆಪಾದಿಸಿದ್ದಾರೆ.

ಯಾವುದೇ ಪೂರ್ವಯೋಜನೆ ಇಲ್ಲದೇ ಲಾಕ್‍ಡೌನ್ ಘೋಷಿಸಿದ ಕೇಂದ್ರ ಸರ್ಕಾರ ಇದೀಗ ನಿರ್ಬಂಧಗಳನ್ನು ಸಡಿಲಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ ಎಂದು ಟೀಕಿಸಿದರು.

ಮಹಾರಾಷ್ಟ್ರ ವಿಕಾಸ್ ಅಗಾಡಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದರೂ, ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಶಿವಸೇನೆ ಸಂಸದರೂ ಆಗಿರುವ ಅವರು ಸ್ಪಷ್ಟಪಡಿಸಿದರು.

“ಟ್ರಂಪ್ ಅವರ ಸ್ವಾಗತಕ್ಕೆ ಅಹ್ಮದಾಬಾದ್‍ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಮಾರಂಭ ಗುಜರಾತ್‍ನಲ್ಲಿ ಕೊರೋನಾ ವೈರಸ್ ಹರಡಲು ಕಾರಣ ಎನ್ನುವುದನ್ನು ಅಲ್ಲಗಳೆಯಲಾಗದು; ಟ್ರಂಪ್ ಜತೆಗೆ ಆಗಮಿಸಿದ್ದ ಕೆಲ ಪ್ರತಿನಿಧಿಗಳು ಮುಂಬೈ, ದೆಹಲಿಗೂ ಭೇಟಿ ನೀಡಿದ್ದರು. ಇದು ವೈರಸ್ ಹರಡಲು ಕಾರಣವಾಯಿತು” ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದ ಸಾಪ್ತಾಹಿಕ ಅಂಕಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾವೈರಸ್ ಹರಡುವಿಕೆ ತಡೆಯಲು ವಿಫಲವಾಗಿದೆ ಎಂಬ ನೆಪದಲ್ಲಿ ಮಹಾರಾಷ್ಟ್ರದ ಎಂವಿಎ ಸರ್ಕಾರವನ್ನು ಪತನಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದಲ್ಲಿ ಅದು ಆತ್ಮಹತ್ಯಾಕಾರಿ ನಿರ್ಧಾರವಾಗಲಿದೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News