ಬೆಟ್ಟಂಪಾಡಿಯ ಕಜೆ ವಿನೋದ್ ರಾಜ್ ಕೈಚಳಕದಲ್ಲಿ ಮೂಡಿಬಂತು ನೂರಾರು ನೈಸರ್ಗಿಕ ಕಲಾಕುಸುರಿಗಳು

Update: 2020-05-31 11:13 GMT

ಈ ಪ್ರಕೃತಿ ನೈಜ ಸೌಂದರ್ಯದ ಪ್ರತೀಕ. ಪ್ರಕೃತಿಯ ಒಡಲಲ್ಲಿ ಇರುವ ವಸ್ತುಗಳೇ ಸೌಂದರ್ಯ ಭರಿತವಾದುದು. ಆದರೆ ಆ ಸೌಂದರ್ಯವನ್ನು ಕಂಡು ಹೊರಜಗತ್ತಿಗೆ ತೋರಿಸುವ ಕಲೆ ಓರ್ವ ಕಲಾವಿದನಲ್ಲಿರುತ್ತದೆ. ಅಂತಹ ಕ್ರೀಯಾಶೀಲ ಮನೋಭಾವದ ಕಲಾವಿದರಲ್ಲಿ ಬೆಟ್ಟಂಪಾಡಿಯ ಕಜೆ ವಿನೋದ್ ರಾಜ್ ಅಪರೂಪದ ಕಲಾವಿದರಾಗಿ ಕಾಣಿಸಿಕೊಳ್ಳುತ್ತಾರೆ.

ಅಷ್ಟಕ್ಕೂ ಇವರ ಕಲಾಸಕ್ತಿಯ ವಿಷಯ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವುದು. ಪರಿಸರವನ್ನು ಪ್ರೀತಿಸಲು ಕಲಿತರೆ ನಾವು ಬದುಕಿ ಬಾಳುತ್ತೇವೆ ಎಂಬ ಆಶಯದಲ್ಲಿ ಇವರು ಪ್ರಕೃತಿಯಲ್ಲಿ ಎಲ್ಲೆಂದರೆಲ್ಲಿ ಕಾಣುವ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ಮಾಡುತ್ತಿದ್ದಾರೆ. ಇವರ ಕಲಾ ಭಂಡಾರದಲ್ಲಿ ಇಂತಹ ನೂರಾರು ಕಲಾಕೃತಿಗಳು ಗೋಚರಿಸುತ್ತಿವೆ. ಉಳಿದವರಿಗೆ ಕೇವಲ ಕಳೆಯಾಗಿ ಕಾಣುವ ನೈಸರ್ಗಿಕ ವಸ್ತುಗಳೆಲ್ಲವೂ ಇವರ ಕೈಯಲ್ಲಿ ಕಲೆಯಾಗಿ ಪರಿವರ್ತನೆಗೊಳ್ಳುತ್ತಿವೆ.

ಪ್ರಸ್ತುತ ಹೇಗೂ ಲಾಕ್‌ಡೌನ್. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ವಿನೋದ್ ರಾಜ್ ತೋರಿಸಿಕೊಟ್ಟಿ ದ್ದಾರೆ. ಮುಖ್ಯವಾಗಿ ಇವರ ಕಲಾಕುಸುರಿಯಲ್ಲಿ ಕಾಣುವುದು ಒಣಗಿದ ಹೂವು, ಮರದಲ್ಲಿರುವ ಒಣ ಅಣಬೆಗಳು, ಕಾಯಿಗಳು, ಬೇರು, ಕಲ್ಲು, ಮರದ ತುಂಡುಗಳು, ಕಡ್ಡಿಗಳು. ಪ್ರಸ್ತುತ ಕಾಲಮಾನದಲ್ಲಿ ಮೊಬೈಲ್, ಟಿವಿಯಲ್ಲಿಯೇ ರಜಾ ಕಾಲ ಕಳೆಯುವ ಮಕ್ಕಳು ಸಮಯವನ್ನು ಕಲಾತ್ಮಕವಾಗಿ ಬಳಸಿಕೊಳ್ಳಬಹುದೆಂದು ವಿನೋದ್ ರಾಜ್ ತೋರಿಸಿಕೊಡುತ್ತಾರೆ.

ವಿನೋದ್ ರಾಜ್‌ರವರು ಬೆಟ್ಟಂಪಾಡಿ ಕಜೆ ಜನಾರ್ದನ ಪಿ. ಮತ್ತು ರುಕ್ಮಣಿ ದಂಪತಿ ಪುತ್ರರಾಗಿದ್ದಾರೆ. ಇರ್ದೆ ಪೇರಲ್ತಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ., ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು ವಾಣಿನಗರದಲ್ಲಿ ಪಿಯುಸಿ ಅಧ್ಯಯನ ನಡೆಸಿದ್ದಾರೆ. ಹಾಸನ ನಿರ್ಮಲ ಚಿತ್ರಕಲಾ ವಿದ್ಯಾಲಯದಲ್ಲಿ ಕಲಾಶಿಕ್ಷಣದಲ್ಲಿ 5 ವರ್ಷಗಳ ಕಲಾಪದವಿ ಪಡೆದು ಬಳಿಕ ಮೈಸೂರಿನ ಶಾಂತಿ ನಿಕೇತನ ಕಲಾ ವಿದ್ಯಾಲಯದಲ್ಲಿ ಎಂಎಫ್‌ಎ ಪದವಿ ಪೂರೈಸಿದ್ದಾರೆ.

ಬೆಂಗಳೂರಿನಲ್ಲಿ ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಅವರ `ಪ್ರತಿರೂಪಿ’ ಸಂಸ್ಥೆಯಲ್ಲಿ ಕಳೆದ 9 ವರ್ಷಗಳಿಂದ ವಿವಿಧ ರೀತಿಯ ಕಲಾ ವಿನ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಕರ್ನಾಟಕ ಸ್ತಬ್ದಚಿತ್ರ ನಿರ್ಮಾಣದಲ್ಲೂ ತನ್ನ ಕಲಾಪಾತ್ರ ನೀಡುತ್ತಿರುವ ತಾಲೂಕಿನ ಓರ್ವ ಅಪರೂಪದ  ಪ್ರತಿಭೆಯಾಗಿದ್ದಾರೆ.

''ಪ್ಲಾಸ್ಟಿಕ್ ಥರ್ಮಾಕೋಲ್ ಬದಲು ನೈಸರ್ಗಿಕ ವಸ್ತು ಬಳಸೋಣ. ಮಕ್ಕಳಿಗೆ ಥರ್ಮಾಕೋಲ್, ಕ್ರಾಫ್, ಪ್ಲಾಸ್ಟಿಕ್‌ಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ಮಾಡಲು ಹೆತ್ತವರು ಪ್ರೇರಣೆ ನೀಡಬೇಕು ಮತ್ತು ಆ ಮೂಲಕ ಮಕ್ಕಳಲ್ಲಿ ಪರಿಸರವನ್ನು ಪ್ರೀತಿಸುವ ಮನಃಸ್ಥಿತಿ ಬೆಳೆಸಬೇಕು.'' 

– ವಿನೋದ್ ರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News